ಮಧುಗಿರಿ

ಕೆ.ಎನ್.ರಾಜಣ್ಣಪರ ಸೆರಗೊಡ್ಡಿ ಮತಯಾಚಿಸಿದ ಕೆಜಿಎಫ್ ಶಾಸಕಿ ರೂಪಾ ಶಶಿಧರ್

ಬೂತ್ ಮಟ್ಟದ ಮಹಿಳಾ ಕಾಂಗ್ರೆಸ್ ಸಮಾವೇಶ

ಮಧುಗಿರಿ : ಬಿಜೆಪಿಯವರು ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಬಡವರು, ರೈತರು ಮತ್ತು ಮಹಿಳೆಯರನ್ನು ಯಾಮಾರಿಸುತ್ತಿದ್ದಾರೆ ಎಂದು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಎಪಿಎಂಸಿ ಹಿಂಭಾಗ ಗುರುವಾರ ತಾಲೂಕು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಮಹಿಳಾ ಕಾಂಗ್ರೆಸ್ ಮುಖಂಡರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಬಡ ಜನತೆಗೆ ಉಚಿತ ಗ್ಯಾಸ್ ನೀಡುವುದಾಗಿ ಘೋಷಿಸಿ ನಂತರ ಗ್ಯಾಸ್ ಬೆಲೆಯನ್ನು 1200 ರೂಗಳಿಗೆ ಏರಿಸಿದ್ದು, ಬಡವರಿಗೆ ದುಬಾರಿ ಹಣ ತೆತ್ತು ಗ್ಯಾಸ್ ಕೊಳ್ಳುವ ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿದಲ್ಲಿ ರೈತರನ್ನು, ಸ್ತ್ರೀ ಶಕ್ತಿ ಸಂಘಗಳನ್ನು, ಬಡ ಜನತೆಯನ್ನು ಗೌರವಯುತವಾಗಿ ನಡೆಸಿಕೊಳ್ಳಲಿದೆ. ಈಗಾಗಲೇ ಕಾಂಗ್ರೆಸ್ 3 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು, ಪ್ರತೀ ಕುಟುಂಬದ ಮನೆಯೊಡತಿಗೆ ಮಾಸಿಕ 2 ಸಾವಿರ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಮತ್ತು ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು 10 ಕೆಜಿ ಏರಿಸುವುದಾಗಿ ಘೋಷಿಸಿದ್ದು, ಈ ಯೋಜನೆಗಳು ಬಡ ಜನತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ನಾನು ಮಧುಗಿರಿಯ ಸೂಸೆಯಾಗಿದ್ದು ನಿಮ್ಮನ್ನು ಸೆರಗೊಡ್ಡಿ ಬೇಡುತ್ತೇನೆ ಈ ಬಾರಿ ನೀವೆಲ್ಲರು ಕೆ.ಎನ್.ರಾಜಣ್ಣನವರಿಗೆ ಮತ ಚಲಾಯಿಸಬೇಕು ಎಂದು ಮಹಿಳೆಯರಲ್ಲಿ ಮತಯಾಚನೆ ಮಾಡಿದರು ಇಲ್ಲಿಯವರೆಗೂ ರೈತರನ್ನು ಯಾವುದೇ ಬ್ಯಾಂಕಿನ ಅಧಿಕಾರಿಗಳು ಗೌರವಯುತವಾಗಿ ನಡೆಸಿಕೊಂಡಿಲ್ಲ. ಆದರೆ ಕೆ.ಎನ್. ರಾಜಣ್ಣನವರು ಕ್ಷೇತ್ರದ 50 ಸಾವಿರ ಕುಟುಂಬಗಳಿಗೆ ಶಕ್ತಿ ತುಂಬಿದ್ದು, ಅವರು ಆರ್ಥಿಕವಾಗಿ ಸದೃಡರಾಗಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ನಾಗಲಕ್ಷ್ಮೀ ಮಾತನಾಡಿ ಇಂದು ಯಾರೇ ಗೆಲ್ಲಬೇಕೆಂದರೂ ಮಹಿಳಾ ಮತದಾರರ ಸಹಕಾರ ಬೇಕು. ಅಪಮಾನ, ಅವಮಾನಗಳನ್ನು ಮೂಟೆ ಕಟ್ಟಿ ಮೆಟ್ಟಿ ನಿಂತರೆ ಮಾತ್ರ ಮಹಿಳೆಯರು ಯಶಸ್ವಿಯಾಗಲು ಸಾಧ್ಯ. ಮಹಿಳೆಯರು ಆಮಿಷ ಗಳಿಗೆ ಬಲಿಯಾಗುವುದಿಲ್ಲ. ಅವರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಗೆಲ್ಲಿಸಲಿದ್ದಾರೆ. ರಾಜಕೀಯಕ್ಕೆ ಮಾನವೀಯತೆ, ಯೋಗ್ಯತೆ, ಅರ್ಹತೆ ಮುಖ್ಯ, ಅರ್ಹತೆ ಗೆಲ್ಲಬೇಕು. ಹಣ ಮಂಡಿಯೂರಬೇಕು. ಪ್ರತಿಯೊಬ್ಬರಿಗೂ ಮಕ್ಕಳ ಭವಿಷ್ಯ ಮುಖ್ಯ. ಕೆ.ಎನ್. ರಾಜಣ್ಣನವರು ಶಾಸಕರಾಗಿದ್ದಾಗ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ, ನೋಟ್ ಪುಸ್ತಕ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಂಡಿದ್ದು, ಯಾರು ಮಕ್ಕಳ ಮಕ್ಕಳ ಭವಿಷ್ಯ ರೂಪಿಸಲು ಕ್ರಮ ಕೈಗೊಳ್ಳುವರೋ ಅಂತವರನ್ನು ಗೆಲ್ಲಿಸಿ. ಜೆಡಿಎಸ್ ಮಹಿಳೆ ತೆನೆ ಹೊತ್ತಿಲ್ಲ. ಅವರ ಕುಟುಂಬದ ಹೊರೆ ಹೊತ್ತಿದ್ದಾಳೆ. ಅವರು ಅಧಿಕಾರ ಹಿಡಿಯಲು ಇತ್ತ ಬಿಜೆಪಿ ಅತ್ತ ಕಾಂಗ್ರೆಸ್ ಎಂದು ಅಲೆಯುತ್ತಿದ್ದಾರೆ. ಜೆಡಿಎಸ್ ಗೆ ಮತ ಹೋದರೆ ಬಿಜೆಪಿಗೆ ಹೋದಂತೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಮಾತನಾಡಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ಯೋಜನೆಗಳ ಲಾಭವನ್ನು ಮನೆಗೆ ಮುಟ್ಟಿಸಿದ್ದೇನೆ. ಕ್ಷೇತ್ರದಲ್ಲಿ 16400 ಮನೆಗಳ ನಿರ್ಮಾಣ ಮಾಡುವ ಮೂಲಕ ಗುಡಿಸಲು ರಹಿತ ತಾಲೂಕು ಮಾಡಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಿದ್ದೇನೆ. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿಸಿದ್ದು, ನಾನು ಕಂದಾಯ ಜಿಲ್ಲೆಯನ್ನಾಗಿಸಲು ಏನೆಲ್ಲ ಸವಲತ್ತುಗಳು ಬೇಕೋ ಅದೆಲ್ಲವನ್ನು ಕ್ಷೇತ್ರಕ್ಕೆ ಒದಗಿಸಿದ್ದೇನೆ. ಪ್ರತೀ ಗ್ರಾಮಕ್ಕೂ ಬಸ್ ಸೌಕರ್ಯ ಕಲ್ಪಿಸಿದ್ದೇನೆ. ಕ್ಷೇತ್ರದ ಜನತೆ ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ದಿ ಕಾಮಗಾರಿಗಳನ್ನು ಮತ್ತು ಈಗ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ಕಾಮಗಾರಿಗಳನ್ನು ತಾಳೆ ಮಾಡಿ ನೋಡಿ ನಿರ್ದರಿಸಿ ಎಂದ ಅವರು ಅಧಿಕಾರ ಇರಲಿ ಇಲ್ಲದಿರಲಿ ನಾನು ಜನಪರವಾಗಿ ಕೆಲಸ ಮಾಡುತ್ತೇನೆ. ಹಳ್ಳಿಗಳಿಗೆ ಹೋದಾಗ ಜನರು ತೋರುವ ಪ್ರೀತಿ ನನಗೆ ಬಹಳಷ್ಟು ಸಂತಸ ತಂದಿದೆ. ನೀವು ನೀಡಿದ ಅಧಿಕಾರದ ಲಾಭವನ್ನು ಜನತೆಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ಜೀವನದ ಕೊನೆಯವರೆಗೂ ನಿಮ್ಮ ಜೊತೆ ಇರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ, ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಮಾಜಿ ಸದಸ್ಯರಾದ ನಾಗರತ್ನ ರಾಜಣ್ಣ, ಮಂಜುಳಾ ಆದಿ ನಾರಾಯಣ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ, ಡಿ. ಬಿ ಆಶಾ, ಜಯಲಕ್ಷ್ಮಿ, ಚಿಕ್ಕಮ್ಮಣ್ಣಿ. ಕೆಪಿಸಿಸಿ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಸಹಕಾರ ಮಹಾ ಮಂಡಲದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ ಕೆ. ನಂಜುಂಡಯ್ಯ, ಆದಿ ನಾರಾಯಣ ರೆಡ್ಡಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ ರಾಜಣ್ಣ, ನಿರ್ದೇಶಕ ಬಿ. ನಾಗೇಶ್ ಬಾಬು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುವರ್ಣಮ್ಮ, ಕಾರ್ಯದರ್ಶಿ ಅನಸೂಯಮ್ಮ, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮ್ಮ, ಪ್ರಮೀಳಮ್ಮ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker