ಗುಬ್ಬಿ: ಹೇಮಾವತಿ ನೀರು ಮಾಗಡಿಗೆ ಹರಿಸುವ ಲಿಂಕ್ ಕೆನಾಲ್ ಪೈಪ್ ಲೈನ್ ಕಾಮಗಾರಿಗೆ ಸಾವಿರಾರು ರೈತರು ಹೋರಾಟ ನಡೆಸಿ ಕೆಲಸ ನಿಲ್ಲಿಸಲು ಸೂಚಿಸಿದ್ದರೂ ಮೂರು ದಿನದ ಬಳಿಕ ಬೃಹತ್ ಗಾತ್ರದ 12 ಅಡಿ ವ್ಯಾಸದ ಪೈಪ್ ಗಳನ್ನು ಲಾರಿಗಳ ಮೂಲಕ ಮಾವಿನಹಳ್ಳಿ ಬಳಿ ತಂದು ಕೆಲಸ ಪುನರಾರಂಭ ಮಾಡುವ ಮುನ್ಸೂಚನೆ ಕಂಡ ರೈತರು ತಕ್ಷಣ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ಲಾರಿಗಳಿಗೆ ಅಡ್ಡ ಮಲಗಿ ದಿಢೀರ್ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹೊಸಹಳ್ಳಿ ಕ್ರಾಸ್ ಬಳಿ ದೊಡ್ಡ ಪೈಪ್ ಹೊತ್ತ 25 ಲಾರಿಗಳು ಪ್ರತ್ಯಕ್ಷವಾಗಿರುವುದು ಕಂಡ ಸ್ಥಳೀಯ ರೈತರು ಶಾಸಕರಿಗೆ ಮಾಹಿತಿ ತಿಳಿಸಿ ಕೂಡಲೇ ನೂರಾರು ಮಂದಿ ಜಮಾಯಿಸಿ ಹೆಬ್ಬೂರು ರಸ್ತೆಯಲ್ಲಿ ಕುಳಿತು ಕೆಲ ಕಾಲ ಪತಿಭಟನೆ ನಡೆಸಿ, ಲಾರಿಗಳನ್ನು ತಡೆದು ಮರಳಿ ವಾಪಸ್ ಹೋಗಲು ತಾಕೀತು ಮಾಡಿದರು.
ಪ್ರತಿಭಟನಾ ನಿರತರನ್ನು ಕುರಿತು ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಯಾವುದೇ ರೀತಿ ರೈತರಿಗೆ ನೋಟಿಸ್ ನೀಡದೆ ಭೂ ವಶಕ್ಕೆ ಪ್ರಕ್ರಿಯೆ ನಡೆಸದೆ ಏಕಾಏಕಿ ಕಾಮಗಾರಿ ಮಾಡಿರುವುದೇ ಇಂಜಿನಿಯರ್ ಗಳ ಕಮಿಷನ್ ಆಟವಾಗಿದೆ. ಕಂದಾಯ ಇಲಾಖೆಯಿಂದ ಅನುಮತಿ ಸಿಗದೇ ಕೆಲಸ ಆರಂಭಿಸಿರುವ ಅಧಿಕಾರಿಗಳು ಸರ್ಕಾರದ ಕೈ ಗೊಂಬೆಯಾಗಿದ್ದಾರೆ. ಈ ಕೆಲಸ ನಿಲ್ಲಿಸಲು ಗೃಹ ಸಚಿವರು ಹೇಳಿದ್ದರೂ ಕಿಂಚಿತ್ತೂ ಬೆಲೆ ಸಿಗದ ಈ ಸಮಯದಲ್ಲಿ ಪ್ರತಿಭಟನೆ ಅನಿವಾರ್ಯ. ಈ ಹಿಂದೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ರೈತರ ಮುಂದೆ ಜೂನ್ 5 ರವರೆಗೆ ಕಾಮಗಾರಿ ಮಾಡದಂತೆ ಸೂಚಿಸಿದ್ದರೂ ಕೆಲಸ ಪುನರಾರಂಭ ಮಾಡುವ ಈ ಅಧಿಕಾರಿಗಳನ್ನು ರೈತರು ಮರಕ್ಕೆ ಕಟ್ಟಿ ಹಾಕುತ್ತಾರೆ.ಕೂಡಲೇ ಲಾರಿಗಳನ್ನು ವಾಪಸ್ ಕಳುಹಿಸಬೇಕು ಎಂದು ಪಟ್ಟು ಹಿಡಿದರು.
ಸಿ.ಎಸ್.ಪುರ ಹೋಬಳಿಯಿಂದ ರಾಜಕೀಯ ಶಕ್ತಿ ಪಡೆದ ಶಾಸಕ ಶ್ರೀನಿವಾಸ್ ಅವರು ಹೋಬಳಿಗೆ ನೀರಿನ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಕೆಲಸ ನಿಲ್ಲಿಸಬೇಕಿತ್ತು. ನಮ್ಮ ಹೋರಾಟಕ್ಕೆ ಕೈ ಜೋಡಿಸದೆ ಪ್ರತ್ಯೇಕ ಹೋರಾಟ ಮಾಡುತ್ತಾರಂತೆ. ಹಾಗಾದರೆ ನಾವು ನಿಮ್ಮ ಹೋರಾಟಕ್ಕೆ ಬರುತ್ತೇವೆ. ನೀರು ಉಳಿಸಿಕೊಳ್ಳುವುದು ನಮಗೆ ಮುಖ್ಯ ಎಂದ ಅವರು ತಾಕತ್ತು ನನಗಿದೆ. ಗುಬ್ಬಿಗೆ ಬರುತ್ತೇನೆ. ಯಾರಿಗೂ ಹೆದರಲ್ಲ. ಹೋರಾಟಗಾರನಾಗಿ ಬಂದವನು ನಾನು. ಈ ಗುಳ್ಳೆನರಿ ಬುದ್ದಿ ನನಗಿಲ್ಲ. ಮೊದಲು ಈ ಕಳ್ಳಾಟ ಬಿಟ್ಟು ಜಿಲ್ಲೆಯ ಜನಪರ ನಿಂತು ನೀರು ಉಳಿಸುವ ಕೆಲಸ ಮಾಡಿ ಎಂದು ನೇರ ಪ್ರತಿಕ್ರಿಯೆ ನೀಡಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ಕಾನೂನು ಕೈಗೆತ್ತಿಕೊಳ್ಳಲು ಅಧಿಕಾರಿಗಳೇ ಪ್ರಚೋದನೆ ನೀಡುತ್ತಿದ್ದಾರೆ. ಕೆಲಸ ನಿಲ್ಲಿಸಲು ಒಪ್ಪಿ ಮೂರೇ ದಿನದಲ್ಲಿ ಕೆಲಸಕ್ಕೆ ದೊಡ್ಡ ಪೈಪ್ ತರಿಸಿರುವ ಇಂಜಿನಿಯರ್ ಇಲ್ಲಿಗೆ ಬಂದ್ರೆ ಜನ ಗ್ರಹಚಾರ ಬಿಡಿಸುತ್ತಾರೆ. ಆಗ ನಡೆಯುವ ಅನಾಹುತಕ್ಕೆ ಸರ್ಕಾರ ನೇರ ಹೊಣೆ. ಕುಣಿಗಲ್, ಮಾಗಡಿ ಜನರು ನಮ್ಮವರೇ. ಆದರೆ ಮುಖ್ಯ ನಾಲೆಯ ಮೂಲಕ ನೀರು ತೆಗೆದುಕೊಂಡು ಹೋಗಲಿ. ಇಲ್ಲವಾದಲ್ಲಿ ನಾಗಮಂಗಲ ಮೂಲಕ ಕಾವೇರಿ ಪಡೆಯಲಿ, ಎತ್ತಿನಹೊಳೆ ನೀರು ಪಡೆಯಲಿ ಅದು ಬಿಟ್ಟು ರೈತರನ್ನು ಹಾಳು ಮಾಡುವ ಈ ವಾಮಮಾರ್ಗ ಬೇಕಿರಲಿಲ್ಲ. ಈ ಯೋಜನೆ ಅವೈಜ್ಞಾನಿಕ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಲಾಗಿದೆ ಆದರೂ ಇಬ್ಬರು ಸಚಿವರು ಕೈ ಚೆಲ್ಲಿದ್ದಾರೆ ಎಂದು ತಿಳಿಸಿದರು.
ಲಾರಿಗೆ ಅಡ್ಡಲಾಗಿ ಮಲಗಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಸಮಾಧಾನ ಪಡಿಸುವುದು ಕಷ್ಟವಾಯಿತು. ರಸ್ತೆ ಧರಣಿ ನಂತರ ವೇ ಬ್ರಿಡ್ಜ್ ಬಳಿ ನಿಂತಿದ್ದ ಕೆಲಸದ ಶೆಡ್ ಬಳಿ ತೆರಳಿದ ರೈತರು ಲಾರಿಗಳನ್ನು ವಾಪಸ್ ಕಳುಹಿಸುವ ಕೆಲಸ ಮಾಡಿದರು. ಆಕ್ರೋಶ ಭರಿತ ರೈತರ ಕೂಗಾಟ ಕೆಲ ಕಾಲ ಉದ್ವಿಗ್ನ ವಾತಾವರಣ ತಂದಿತ್ತು. ಪೊಲೀಸರು ಮುನ್ನೆಚ್ಚರಿಕೆ ವಹಿಸಿ ರೈತರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದರು. ನಂತರ ಲಾರಿಗಳನ್ನು ವಾಪಸ್ ಕಳುಹಿಸಿ ಪೋನ್ ಮೂಲಕ ಇಂಜಿನಿಯರ್ ಗೆ ಶಾಸಕ
ಕೃಷ್ಣಪ್ಪ ಎಚ್ಚರಿಕೆ ನೀಡಿ ಮುಂದಿನ ಪ್ರತಿಭಟನೆ ಜೆಸಿಬಿ ಯಂತ್ರ ಬಳಸಿ ಕೆನಾಲ್ ಮುಚ್ಚುವ ಮೂಲಕ ಹೋರಾಟದ ಸ್ವರೂಪ ಪಡೆಯಲಿದೆ ಎಂದು ಮುನ್ಸೂಚನೆ ನೀಡಿದರು.
ಪ್ರತಿಭಟನೆಯಲ್ಲಿ ಶಾಸಕರ ಪುತ್ರರಾದ ರಾಜೀವ್ ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ, ಮುಖಂಡ ನಂಜೇಗೌಡ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೋರಪ್ಪನಹಳ್ಳಿ ಕುಮಾರ್, ಹೋಬಳಿ ಅಧ್ಯಕ್ಷ ಜಗದೀಶ್, ಯುವ ಘಟಕದ ಅಧ್ಯಕ್ಷ ನವೀನ್, ಮುಖಂಡರಾದ ಸುಶಾಂತ್, ಬೀರಮಾರನಹಳ್ಳಿ ನರಸೇಗೌಡ, ವೀರಣ್ಣಗುಡಿ ರಾಮಣ್ಣ, ತಮ್ಮಯ್ಯ, ಹರಿವೇಸಂದ್ರ ಕೃಷ್ಣ, ಹಿಂಡಿಸ್ಕೆರೆ ಪ್ರಕಾಶ್, ಬಿಟ್ಟುಗೊಂಡನಹಳ್ಳಿ ಕೃಷ್ಣಪ್ಪ, ಚೆಂಗಾವಿ ರಾಘವೇಂದ್ರ, ಕುಮಾರ್ ಹಾಗೂ ಇತರರು ಇದ್ದರು.