ತುಮಕೂರುತುಮಕೂರು ನಗರ

ಜೋಳಿಗೆ ಹಿಡಿದು ಮತ ಭಿಕ್ಷಾಟನೆಗೆ ಹೊರಟ ಮಾಜಿ ಶಾಸಕ ಸೊಗಡು ಶಿವಣ್ಣ

ತುಮಕೂರು : ಚುನಾವಣಾ ಸಂದರ್ಭದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರಿಗೆ ಕುಕ್ಕರ್, ಸೀರೆ, ಬಾಡೂಟದಂತಹ ಅಮೀಷಗಳನ್ನು ಒಡ್ಡಿ ಅವರನ್ನು ಗುಲಾಮರಂತೆ ನೋಡುತ್ತಿರುವ ಚುನಾವಣೆ ಪ್ರಕ್ರಿಯೆಗೆ ಬೆಸತ್ತು,ನಾನು ಇದುವರೆಗೂ ಅನುಸರಿಸಿಕೊಂಡು ಬಂದ ಶಾಂತಿ ಮತ್ತು ಕಾಯಕ ತತ್ವಗಳ ಮೂಲಕ ಜನರ ಬಳಿ ಓಟಿಗೊಂದು, ನೋಟಿಗೊಂದು ಜೋಳಿಗೆ ಹಿಡಿದು ಪ್ರಚಾರಕ್ಕೆ ತೆರಳುವುದಾಗಿ ಮಾಜಿ ಸಚಿವ ಎಸ್.ಶಿವಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾರ್ಚ್ 12 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಎನ್.ಆರ್.ಕಾಲೋನಿಯಲ್ಲಿ ಗ್ರಾಮದೇವತೆ ಶ್ರೀದುರ್ಗಮ್ಮ ಮತ್ತು ಕಾಳಮ್ಮ ದೇವಿಯರಿಗೆ ಪೂಜೆ ಸಲ್ಲಿಸಿ ಜೋಳಿಗೆ ಯಾತ್ರೆ ಆರಂಭಿಸಲಾಗುವುದೆಂದರು.
ಪ್ರಜಾಪ್ರಭುತ್ವದಲ್ಲಿ ಶಾಂತಿ ಮತ್ತು ಕಾಯಕ ಮಂತ್ರವನ್ನು ಜನರಿಗೆ ತಿಳಿಸುವ ಮೂಲಕ ಪಾರದರ್ಶಕ ಆಡಳಿತಕ್ಕಾಗಿ ಟಿಕೆಟ್ ನೀಡುವಂತೆ ಆಗ್ರಹಿಸಿ ಜೋಳಿಗೆ, ತಮಟೆಯೊಂದಿಗೆ ಮತ ಯಾಚನೆ ಮಾಡಲಿದ್ದೇನೆ.ಒಂದು ಜೋಳಿಗೆ ನೋಟು, ಇನ್ನೊಂದು ಜೋಳಿಗೆ ವೋಟಿಗೆ ಹಿಡಿದು ಮನೆ ಮನೆ ಬಾಗಿಲಿಗೆ ಹೋಗುವುದಾಗಿ ತಿಳಿಸಿದರು.
1994ರಿಂದ ಪಕ್ಷಕ್ಕಾಗಿ, ನಗರದ ಅಭಿವೃದ್ಧಿಗಾಗಿ ಮಾಡಿರುವ ಕೆಲಸವನ್ನು ಇಂದಿನ ಮತದಾರರಿಗೆ ತಿಳಿಸಬೇಕಿದೆ, ಗುಂಡು, ತುಂಡು, ಸೀರೆ, ಕುಕ್ಕರ್ ಹಂಚುತ್ತಿದ್ದಾರೆ, ಯುವಕರಿಗೆ ಗುಂಡು ತುಂಡು ಕೊಡಿಸುವ ಮೂಲಕ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ,ಆಮಿಷಗಳನ್ನು ಒಡ್ಡುವ ಮೂಲಕ ಮತದಾರರ ದಿಕ್ಕು ತಪ್ಪಿಸುತ್ತಿದ್ದಾರೆ.ಪ್ರಜಾಪ್ರಭುತ್ವವನ್ನು ಎಚ್ಚರಿಸುವುದಕ್ಕಾಗಿ ಜೋಳಿಗೆ ಹಿಡಿದು,ತಮಟೆ ಬಡಿದುಕೊಂಡು ಮನೆ ಮನೆಗೆ ಹೋಗಿ ಕರಪತ್ರ ಹಂಚುತ್ತೇನೆ,ಭಾನುವಾರ ಎನ್.ಆರ್. ಕಾಲೋನಿ,ಸೋಮವಾರ ಎಪಿಎಂಸಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗುವುದು,ನಂತರದ ದಿನಗಳಲ್ಲಿ ಮಂಡಿಪೇಟೆ, ಸಿದ್ದಿವಿನಾಯಕ ತರಕಾರಿ, ಹೂವು, ಹಣ್ಣಿನ ಮಾರುಕಟ್ಟೆ ಹೀಗೆ ಚುನಾವಣೆಯವರೆಗೆ ಜನನೀಬಿಡ ಪ್ರದೇಶಗಳಲ್ಲಿ ಪ್ರಚಾರ ನಡೆಸುತ್ತಾ ಜನರಿಗೆ ಎಲ್ಲೆಲ್ಲಿ ಜನಸಂದಣಿ ಇರುತ್ತದೆ ಅಲ್ಲಿ ಪ್ರಚಾರ ನಡೆಸುವುದಾಗಿ ತಿಳಿಸಿದರು.
2013ರಲ್ಲಿ ಜನ ನನ್ನನ್ನು ಸೋಲಿಸಿದಾಗ,2018ರಲ್ಲಿ ಪಕ್ಷದ ಹಿರಿಯರ ಮಾತಿಗೆ ಕಟ್ಟುಬಿದ್ದು ಟಿಕೇಟ್ ತ್ಯಾಗ ಮಾಡಿದ್ದೇನೆ. ಆದರೆ ಜನರಿಂದ ದೂರವಾಗಿಲ್ಲ.ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಆನಾಥ ಶವಗಳಿಗೆ ಹೆಗಲು ಕೊಟ್ಟಿದ್ದೇನೆ.ಅವರ ಚಿತಾಬಸ್ಮವನ್ನು ಕೂಡಲ ಸಂಗಮದಲ್ಲಿ ಬಿಟ್ಟು, ಸದ್ಗತಿ ದೊರಕಿಸಿಕೊಡಲು ಪ್ರಯತಿಸಿದ್ದೇನೆ. ಜನರು ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದಾರೆ.ಅದಕ್ಕಾಗಿ ಟಿಕೆಟ್ ಕೇಳುತ್ತಿದ್ದೇನೆ, ಕೋವಿಡ್ ಸಂದರ್ಭದಲ್ಲಿ ಮುಸ್ಲಿಂ,ಹಿಂದೂ ಬೇಧವಿಲ್ಲದೆ ಚಿಕಿತ್ಸೆ ಕೊಡಿಸಲಾಗಿದೆ,ಜಾತಿ ಬೇಧವಿಲ್ಲದೆ ಅಂತಿಮ ಕ್ರಿಯೆಯನ್ನು ಮಾಡಲಾಗಿದೆ ಎಂದರು.

ಸ್ಮಾರ್ಟ್ಸಿಟಿ ಯೊಜನೆಯಡಿ ನಿರ್ಮಿಸಿರುವ ರಿಂಗ್‌ರಸ್ತೆಗೆ ಒಂದು ಕಿಲೋ ಮೀಟರ್‌ಗೆ 12 ಕೋಟಿ ಖರ್ಚಾಗಿದೆ.ನಮ್ಮ ಕಾಲದಲ್ಲಿ ರಸ್ತೆಯನ್ನು ನಿರ್ಮಿಸಲಾಗಿತ್ತು.ಭೂಸ್ವಾಧೀನವಿಲ್ಲ. ದೊಡ್ಡ ದೊಡ್ಡ ಸೇತುವೆ ಇಲ್ಲ. ಹಾಗಿದ್ದರೂ ಕಿ.ಲೋ.ಮೀಟರ್ 12 ಕೋಟಿ ಎಂದರೆ ಇದು ಯಾವ ರೀತಿ ರಸ್ತೆ ಎಂಬುದನ್ನು ಜನತೆ ತೀರ್ಮಾನಿಸಬೇಕಿದೆ.ಹಾಗಾಗಿಯೇ ಜನರಿಗೆ ಮೋಸ ಮಾಡವವರ ವಿರುದ್ದ ಜೋಳಿಗೆ ಹಿಡಿದು ಹೊರಟಿದ್ದೇನೆ,ಒಂದು ಕಡೆ ಸೀರೆ ಕುಕ್ಕರ್ ಹಂಚುತ್ತಾರೆ, ಇನ್ನೊಂದು ಗುಂಡು ತುಂಡು ಎನ್ನುತ್ತಾರೆ ನಾಚಿಗೆಯಾಗುವುದಿಲ್ಲವೇ ಅವರಿಗೆ ಎಂದು ಪ್ರಶ್ನಿಸಿದರು.
ಎನ್.ಆರ್.ಕಾಲೋನಿ ಮುಖಂಡ ನರಸಿಂಹಯ್ಯ ಮಾತನಾಡಿ, ನಗರದಲ್ಲಿ ದಲಿತರ ಪರ ಅಭಿವೃದ್ಧಿಗಳು ನಡೆದಿದ್ದರೆ ಅದಕ್ಕೆ ಸೊಗಡು ಶಿವಣ್ಣ ಕಾರಣ,ದಲಿತರೊಂದಿಗೆ ಉತ್ತಮ ಸಂಬಂಧ,ಕಾಳಜಿಯುಳ್ಳ ಸೊಗಡು ಶಿವಣ್ಣ ಅವರ ಪ್ರಚಾರ ಕಾರ್ಯವನ್ನು ಎನ್.ಆರ್.ಕಾಲೋನಿಯಿಂದಲೇ ಪ್ರಾರಂಭಿಸಲಾಗುವುದು.ಎನ್.ಆರ್.ಕಾಲೋನಿಯ ಜನರಿಂದಲೇ ಸೊಗಡು ಶಿವಣ್ಣ ಅವರ ಠೇವಣಿಗೆ ಹಣ ಸಂಗ್ರಹಿಸಿ ಕೊಡಲಾಗುವುದು, ದುರ್ಗಮ್ಮ, ಪೂಜಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ, ಭಾನುವಾರ 3 ಗಂಟೆಗೆ ಪ್ರಚಾರ ಕಾರ್ಯ ಆರಂಭವಾಗಲಿದ್ದು, ಎನ್.ಆರ್.ಕಾಲೋನಿಯ ಎಲ್ಲ ಬೀದಿಗಳಿಗೂ ತೆರಳಿ ಮತಯಾಚನೆ ಮಾಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನರಸಿಂಹಯ್ಯ, ಶಾಂತರಾಜು, ರಂಗನಾಯ್ಕ್, ಜಯಸಿಂಹ, ಶಬ್ಬೀರ್ ಅಹಮದ್, ಗೋವಿಂದರಾಜು, ಕೆ.ಪಿ.ಮಮತಾ, ಗೋಕುಲ್ ಮಂಜುನಾಥ್ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker