ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿನ ನಟ ನಿರ್ದೇಶಕ-ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು. ಕನ್ನಡದಲ್ಲಿ ನಾಲ್ಕೈದು ದಶಕಗಳ ಕಾಲ ಕನ್ನಡ ಚಿತ್ರರಂಗದ ಸೇವೆ ಮಾಡಿದ್ದಾರೆ. ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ದ್ವಾರಕೀಶ್ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಯಶಸ್ಸು ಕಂಡಿದ್ದರು.
ಇವರು1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದರು. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಇವರು, ಫ್ರೌಡಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು. ನಂತರ ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದರು. 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದ್ದರು.
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ – ವಿಷ್ಣು ಅಭಿನಯದ ಬಹುತೇಕ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಂಡಿವೆ.
ಕಳೆದ ಕೆಲವು ದಿನಗಳ ಹಿಂದೆ ದ್ವಾರಕೀಶ್ ನಿಧನ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಈ ವೇಳೆ ದ್ವಾರಕೀಶ್ ಅವರೇ ವಿಡಿಯೋ ಮಾಡುವ ಮೂಲಕ ಆರೋಗ್ಯವಾಗಿ ಇರುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿಕೊಂಡಿದ್ದರು. ಆದರೆ, ಇಂದು (ಏಪ್ರಿಲ್ 16) ದ್ವಾರಕೀಶ್ ನಿಧನರಾಗಿರುವ ಸುದ್ದಿಯನ್ನು ಕುಟುಂಬ ಮೂಲಗಳೇ ಸ್ಪಷ್ಪಪಡಿಸಿವೆ.