ಜಿಲ್ಲೆತುಮಕೂರುರಾಜಕೀಯರಾಜ್ಯಸುದ್ದಿ

ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಕ್ಷೇತ್ರ ಬಿಡಲು ಸೂಚನೆ

ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆಯನ್ನು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು 22,91,260 ಮತದಾರರು : ಜಿಲ್ಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಹಾಗೂ ಶಿರಾ, ಪಾವಗಡ, ಕುಣಿಗಲ್ ವಿಧಾನ ಸಭಾ ಕ್ಷೇತ್ರದ 11,35,973 ಪುರುಷ, 11,55,194 ಮಹಿಳೆ ಹಾಗೂ 93 ಇತರೆ ಸೇರಿದಂತೆ ಒಟ್ಟು 22,91,260 ಮತದಾರರಿದ್ದು, ಏಪ್ರಿಲ್ 26ರಂದು ತಮ್ಮ ಮತವನ್ನು ಚಲಾಯಿಸಲಿದ್ದಾರೆ.

2618 ಮತಗಟ್ಟೆ ಸ್ಥಾಪನೆ :-
ಮತದಾರರು ಮತ ಚಲಾಯಿಸಲು ಅನುವಾಗುವಂತೆ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ, ಮಧುಗಿರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1846, ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೊಳಪಡುವ ಜಿಲ್ಲೆಯ ಶಿರಾ ಮತ್ತು ಪಾವಗಡ ವಿ.ಸ. ಕ್ಷೇತ್ರದಲ್ಲಿ ಒಟ್ಟು 507 ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೊಳಪಡುವ ಕುಣಿಗಲ್ ವಿ.ಸ.ಕ್ಷೇತ್ರದಲ್ಲಿ 265 ಮತಗಟ್ಟೆ ಸೇರಿ ಒಟ್ಟು 2618 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 546 ಕ್ರಿಟಿಕಲ್ ಮತಗಟ್ಟೆ ಸೇರಿ ಒಟ್ಟು 1312 ಮತಗಟ್ಟೆಗಳು ವೆಬ್ ಕಾಸ್ಟಿಂಗ್ ವ್ಯವಸ್ಥೆಗೆ ಒಳಪಡಲಿದೆ.

10472 ಮತಗಟ್ಟೆ ಅಧಿಕಾರಿಗಳ ನೇಮಕ :-ಚುನಾವಣೆಯನ್ನು ಲೋಪದೋಷವಿಲ್ಲದಂತೆ ನಡೆಸುವ ನಿಟ್ಟಿನಲ್ಲಿ 2618 ಮತಗಟ್ಟೆಗಳಿಗೆ 10472 ಮತಗಟ್ಟೆ ಅಧಿಕಾರಿಗಳು, 2618 ಗ್ರೂಪ್ ಡಿ. ನೌಕರರು ಹಾಗೂ 610 ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಗಳನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 382 ಬಸ್, 74 ಮಿನಿ ಬಸ್, 113 ಜೀಪ್ ಸೇರಿದಂತೆ ಒಟ್ಟು 569 ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಇವಿಎಂಗಳ ಹಂಚಿಕೆ :-
ಜಿಲ್ಲೆಯಲ್ಲಿ ಸ್ಥಾಪಿಸಿರುವ 2618 ಮತಗಟ್ಟೆಗಳಿಗೆ ಮತದಾರರು ಮತದಾನ ಮಾಡಲು 3962 ಕಂಟ್ರೋಲ್ ಯೂನಿಟ್, 5354 ಬ್ಯಾಲೆಟ್ ಯೂನಿಟ್ ಹಾಗೂ 3568 ವಿವಿ ಪ್ಯಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ.

ಮಸ್ಟರಿಂಗ್, ಡಿ-ಮಸ್ಟರಿಂಗ್ ಕೇಂದ್ರ :-
ಜಿಲ್ಲೆಯ ಚಿಕ್ಕನಾಯಕನಹಳ್ಳಿ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು, ತಿಪಟೂರು ಸರ್ಕಾರಿ ಬಾಲಕರ ಪ.ಪೂ.ಕಾಲೇಜು, ತುರುವೇಕೆರೆ ಸರ್ಕಾರಿ ಪ.ಪೂ.ಕಾಲೇಜು, ತುಮಕೂರು ಸರ್ಕಾರಿ ಪ.ಪೂ.ಕಾಲೇಜು, ತುಮಕೂರು ವಿಜಯನಗರದ ಸರ್ವೋದಯ ಪ್ರೌಢಶಾಲೆ, ಗುಬ್ಬಿ ಮಾರನಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ ಸರ್ಕಾರಿ ಪ.ಪೂ.ಕಾಲೇಜು, ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್ ಸರ್ಕಾರಿ ಮಹಾತ್ಮಗಾಂಧಿ ಪ.ಪೂ.ಕಾಲೇಜು, ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ಕಲೆ, ವಿಜ್ಞಾನ ಮತ್ತು ವಾಣಿಜ್ಯ), ಪಾವಗಡದ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಮಸ್ಟರಿಂಗ್, ಡಿ-ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆಯಡಿ 2.20ಕೋಟಿ ರೂ. ಮೌಲ್ಯದ ಸಾಮಗ್ರಿ ವಶ :
ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ 76,80,424 ರೂ. ಮೌಲ್ಯದ 29442.96 ಲೀ. ಮದ್ಯ, 1,29,15,052 ರೂ. ನಗದು, 5,45,309 ರೂ. ಮೌಲ್ಯದ 1306 ಫ್ರೀಬೀಸ್(ಈಡಿeebies), 7,60,837 ರೂ. ಮೌಲ್ಯದ 0.126 ಗ್ರಾಂ ಚಿನ್ನ ಹಾಗೂ 1,70,000 ರೂ. ಮೌಲ್ಯದ 5.35 ಕೆ.ಜಿ. ಗಾಂಜಾ ಸೇರಿದಂತೆ ಒಟ್ಟು 2.20 ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಹಿರಂಗ ಪ್ರಚಾರ ಕೈಗೊಂಡಲ್ಲಿ ಕಾನೂನು ಕ್ರಮ:-
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಬಹಿರಂಗ ಪ್ರಚಾರಕ್ಕೆ ನಿಗಧಿಪಡಿಸಿರುವ ಗಡುವು ಮುಕ್ತಾಯವಾಗಿರುವುದರಿಂದ ಯಾವುದೇ ಪಕ್ಷ/ ಉಮೇದುವಾರರು/ಇತರರು ಬಹಿರಂಗ ಪ್ರಚಾರ ನಡೆಸತಕ್ಕದ್ದಲ್ಲ. ನಿಯಮ ಮೀರಿ ಬಹಿರಂಗ ಪ್ರಚಾರ ಕೈಗೊಂಡಲ್ಲಿ ಅಂತಹವರು ಜನತಾ ಪ್ರಾತಿನಿಧ್ಯ ಕಾಯಿದೆ 1951ರ ಸೆಕ್ಷನ್ 126ರಡಿ 2 ವರ್ಷಗಳ ಸಜಾ ಅಥವಾ ದಂಡ ಅಥವಾ ಎರಡರಿಂದಲೂ ಶಿಕ್ಷೆಗೆ ಗುರಿಯಾಗುತ್ತಾರೆ.
ಆದರೆ ಚುನಾವಣಾ ಅಭ್ಯರ್ಥಿಗಳಿಗೆ ಮತದಾನದ ಮುಕ್ತಾಯಕ್ಕೆ ನಿಗಧಿಯಾಗಿರುವ ಕಡೆಯ 48 ಗಂಟೆಗಳಲ್ಲಿ ಮನೆ-ಮನೆ ಭೇಟಿ ನೀಡಿ ಮತ ಯಾಚಿಸಲು ಅವಕಾಶವಿರುತ್ತದೆ. ಅಭ್ಯರ್ಥಿಯೊಂದಿಗೆ 4 ಜನಕ್ಕೆ ಮಾತ್ರ ಮನೆ-ಮನೆ ಭೇಟಿ ನೀಡಲು ಅವಕಾಶ ನೀಡಲಾಗಿದೆ.

ಕ್ಷೇತ್ರ ಬಿಡಲು ಸೂಚನೆ:-
ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯವಾದ ಗಡುವು ಮುಕ್ತಾಯವಾಗಿರುವುದರಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಏಪ್ರಿಲ್ 24ರ ಸಂಜೆ 6 ಗಂಟೆ ನಂತರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ವಿಧಾನಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಆ ವಿಧಾನಸಭಾ ಕ್ಷೇತ್ರದಲ್ಲಿ ಉಳಿಯುವಂತಿಲ್ಲ.

ಮಾಧ್ಯಮಗಳಿಗೆ ಮಾರ್ಗಸೂಚಿ :-ಚುನಾವಣಾ ಆಯೋಗದ ನಿರ್ದೇಶನದಂತೆ ಯಾವುದೇ ರಾಜಕೀಯ ಪಕ್ಷ / ಅಭ್ಯರ್ಥಿ/ ಇತರ ಸಂಘಟನೆ ಅಥವಾ ವ್ಯಕ್ತಿಯು ರಾಷ್ಟç/ ರಾಜ್ಯ / ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ(ಎಂ.ಸಿ.ಎಂ.ಸಿ.)ಯ ಪೂರ್ವ ದೃಢೀಕರಣ ಪಡೆಯದೆ ಏಪ್ರಿಲ್ 25 ಮತ್ತು 26ರಂದು ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಜಾಹಿರಾತನ್ನು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸತಕ್ಕದ್ದಲ್ಲ.
ಒಂದು ಮತಕ್ಷೇತ್ರದಲ್ಲಿ ಮತದಾನ ಮುಗಿಯುವುದಕ್ಕೆ ನಿಗಧಿಪಡಿಸಿರುವ ಸಮಯದ 48 ಗಂಟೆಗೂ ಮೊದಲು ದೂರದರ್ಶನ, ಸಿನಿಮಾಟೋಗ್ರಫಿ ಅಥವಾ ಅದಕ್ಕೆ ಸರಿರೂಪದ ಮಾಧ್ಯಮದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಅಥವಾ ಪರಿಣಾಮ ಬೀರುವ ಚುನಾವಣಾ ವಿಷಯವನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಹಾಗೂ ಮತದಾನ ಮುಕ್ತಾಯವಾಗುವ 48 ಗಂಟೆ ಪೂರ್ವದಿಂದ ಚುನಾವಣೆ ಮುಕ್ತಾಯಗೊಂಡು ಅರ್ಧ ಗಂಟೆವರೆಗೆ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಅಭಿಪ್ರಾಯಗಳಿಗೆ ನಿರ್ಬಂಧವಿರುತ್ತದೆ. ಈ ನಿಯಮವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು ಎರಡು ವರ್ಷಗಳಿಗೂ ವಿಸ್ತರಿಸಬಹುದಾದ ಸೆರೆವಾಸ ಅಥವಾ ದಂಡ ಅಥವಾ ಇವೆರಡರಿಂದಲೂ ಶಿಕ್ಷಿಸಲ್ಪಡುತ್ತಾನೆ.

ಮತಗಟ್ಟೆ 200 ಮೀ. ಒಳಗೆ ಚುನಾವಣಾ ಪ್ರಚಾರ ನಿಷೇಧ :
ಮತಗಟ್ಟೆಯ 200 ಮೀ. ವ್ಯಾಪ್ತಿಯೊಳಗೆ ಯಾವುದೇ ಪ್ರಚಾರ ಮಾಡುವಂತಿಲ್ಲ. ಮತಗಟ್ಟೆಗಳಲ್ಲಿ ಪಿ.ಆರ್.ಒ., ಮೈಕ್ರೋ ಅಬ್ಸರ್ವರ್ ಹೊರತುಪಡಿಸಿ ಉಳಿದವರಿಗೆ ಮೊಬೈಲ್ ಹಾಗೂ ಮೈಕ್ ಬಳಸಲು ಅವಕಾಶವಿರುವುದಿಲ್ಲ. ಆದರೆ 200 ಮೀ. ವ್ಯಾಪ್ತಿಯ ಹೊರಗೆ ಅಭ್ಯರ್ಥಿಗಳಿಗೆ ಒಂದು ಟೇಬಲ್, ಎರಡು ಕುರ್ಚಿ ಮತ್ತು 3*5 ಒಂದು ಬ್ಯಾನರ್ ಅಳವಡಿಸಲು ಅವಕಾಶವಿರುತ್ತದೆ. ಯಾವುದೇ ಕರಪತ್ರ ಹಂಚುವಂತಿಲ್ಲ. ಮತಗಟ್ಟೆಯೊಳಗೆ ಯಾವುದೇ ಆಯುಧವನ್ನು ತೆಗೆದುಕೊಂಡು ಹೋಗಲು ನಿರ್ಬಂಧವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker