ತಿಪಟೂರು : ನಗರದ ಕೋಡಿ ಸರ್ಕಲ್ ಬಳಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗೆ ಬಸವ ಅನುಯಾಯಿಗಳು ರಾತ್ರೋ ರಾತ್ರಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪಿಸಿದ ಕಾರಣ, ಪುತ್ಥಳಿಯನ್ನು ತೆರವುಗೊಳಿಸಲು ಮುಂದಾದ ನಗರಸಭೆಯ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಮತ್ತು ಬಸವ ಅನುಯಾಯಿಗಳು ಪ್ರತಿಭಟನೆ ನೆಡೆಯಲು ಇಡೀ ಸೋಮವಾರ ಕಾರಣವಾಯಿತು.
ರಾತೋ ರಾತ್ರಿ ಪುತ್ಥಳಿ ಸ್ಥಾಪನೆಯಿಂದ ಅದನ್ನು ತೆರವುಗೊಳಿಸಲು ಮುಂದಾದ ನಗರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ನಡೆಯಿತು. ಸೋಮವಾರ ಬೆಳಿಗ್ಗೆ ಜನ ನಗರದಲ್ಲಿ ಓಡಾಡುವುದಕ್ಕಿಂತ ಮುಂಚೆ ವಿಶ್ವಗುರು ಬಸವೇಶ್ವರ ಪುತ್ಥಳಿ ಅನಾವರಣಗೊಂಡಿದ್ದು ಅದನ್ನು ತೆರವುಗೊಳಿಸಲು ಪೊಲೀಸರ ರಕ್ಷಣೆಯೊಂದಿಗೆ ಮುಂದಾದ ನಗರ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿ ಭಾರಿ ಗದ್ದಲ ಗೊಂದಲಗಳಿಗೆ ಸಿಲುಕಿ ಮಧ್ಯಾಹ್ನ ಸರಿ ಸುಮಾರು ನಾಲ್ಕು ಗಂಟೆಯ ಸಮಯದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಮರಿಯಪ್ಪ ನೇತೃತ್ವದಲ್ಲಿ ಹಾಗೂ ಉಪವಿಭಾಗಧಿಕಾರಿ ಶ್ರೀಮತಿ ಸಪ್ತಶ್ರೀ, ಡಿವೈಎಸ್‌ಪಿ ವಿನಾಯಕ ಶೆಟಗೇರಿ ನೇತೃತ್ವದಲ್ಲಿ ಬಸವೇಶ್ವರ ಪುತ್ತಳಿಯನ್ನು ತೆರವುಗೊಳಿಸಿ ನಗರಸಭೆಗೆ ವಶಕ್ಕೆ ನೀಡಲಾಯಿತು.
ಪ್ರತಿಷ್ಠಾಪಿಸಲಾಗಿರುವ ಬಸವೇಶ್ವರರ ಪುತ್ಥಳಿ ತೆರವಿಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿ, ಬಾರಿ ಜನಸಂಖ್ಯೆ ಸೇರಿದ ಪರಿಣಾಮ ಡಿವೈಎಸ್‌ಪಿ ವಿನಾಯಕ ಶೆಟಗೇರಿ ಯಾವುದೇ ಗದ್ದಲಗಳು ನೆಡೆಯದಂತೆ ಶಾಂತಿಯುತವಾಗಿದ್ದು, ಜನರನ್ನು ಚದುರಿಸಲು ಹರಸಾಹಸ ಪಡಬೇಕಾದ ಸಂಧರ್ಬದಲ್ಲಿ ಹಾಗೂ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ, ಪ್ರತಿಭಟನೆ ಹೆಚ್ಚಾಗುತ್ತಾ ಹೋದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಮರಿಯಪ್ಪನವರು, ತಾಲ್ಲೂಕು ದಂಡಾಧಿಕಾರಿ ಪವನ್‌ಕುಮಾರ್, ನಗರಸಭೆ ಪೌರಯುಕ್ತ ವಿಶ್ವೇಶ್ವರ ಬದರಗೆಡೆ, ವೃತ್ತ ನೀರೀಕ್ಷಕರಾದ ವೆಂಕಟೇಶ್, ಸಿದ್ದರಾಮೇಶ್ವರ ಸ್ಥಳಕ್ಕೆ ಭೇಟಿ ನೀಡಿದರು.
ಸಾಂಸ್ಕೃತಿಕ ನಾಯಕ ಬಸವೇಶ್ವರ ಪುತ್ಥಳಿಯ ಅನಾವರಣ ಸ್ಥಳಕ್ಕೆ ಸ್ಥಳೀಯ ಮುಖಂಡರಾದ ನಿವೃತ್ತ ಎಸಿಪಿ ಲೋಕೇಶ್ವರ, ಮಾಜಿ ಶಾಸಕ ಬಿ.ನಂಜಾಮರಿ, ಮಾಜಿ ನಗರಸಭಾ ಸದಸ್ಯ ನಿಜಗುಣ, ಕಂಚಾಘಟ್ಟ ಷಡಕ್ಷರ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿಜಿ ಸೇರಿದಂತೆ ಸಾವಿರಾರು ಬಸವ ಅನುಯಾಯಿಗಳು ಸಾಂಸ್ಕೃತಿಕ ನಾಯಕ ಬಸವೇಶ್ವರ ಪುತ್ಥಳಿಯ ತೆರವಿಗೆ ಬಾರಿ ವಿರೋಧವನ್ನು ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 25ಕ್ಕೂ ಹೆಚ್ಚು ಪೋಲೀಸ್ ಅಧಿಕಾರಿಗಳು ನೂರಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿಗಳನ್ನು ವಿಶ್ವಗುರು ಬಸವೇಶ್ವರ ಪುತ್ಥಳಿಯ ಅನಾವರಣದ ಪ್ರತಿಭಟನಾ ಸ್ಥಳದ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.
ರಾತ್ರೋರಾತ್ರಿ ಬಸವೇಶ್ವರ ಪುತ್ಥಳಿಯನ್ನು ಸಾರ್ವಜನಿಕ ಸ್ಥಳದಲ್ಲಿ ಏಕಾಏಕಿ ಸ್ಥಾಪನೆ ಮಾಡಿರುವುದು ಕಾನೂನುಬಾಹಿರವಾಗಿದ್ದು ಅದನ್ನು ಸುರಕ್ಷಿತವಾಗಿ ತೆರವುಗೊಳಿಸಿ ನಗರ ಸಭೆಗೆ ವಹಿಸಲಾಗಿದೆ. ಈ ವಿಷಯದ ಮೇಲೆ ಮುಂದಿನ ದಿನಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮವಹಿಸಿ ಆಗುವುದು. ಸಾರ್ವಜನಿಕ ಸ್ಥಳದಲ್ಲಿ ಗೊಂದಲಕ್ಕೆ ಕಾರಣ ಮಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.
– ಶ್ರೀಮತಿ ಸಪ್ತಶ್ರೀ. ಉಪವಿಭಾಗಾಧಿಕಾರಿಗಳು ತಿಪಟೂರು.
ಮೊದಲಿನಿಂದಲೂ ವೀರಶೈವ ಲಿಂಗಾಯತ ಸಮಾಜ ಶಾಂತಿ ಮತ್ತು ಸಹನೆ ಸಹಬಾಳ್ವೆಗೆ ಹೆಸರುವಾಸಿಯಾಗಿದ್ದು ಚುನಾವಣಾ ನೀತಿ ಸಂಹಿತೆ ಇರುವುದರಿಂದ ನಾವೆಲ್ಲರೂ ಕಾನೂನನ್ನು ಗೌರವಿಸೋಣ ಈ ವಿಚಾರದಲ್ಲಿ ಅಧಿಕಾರಿಗಳು ತಪ್ಪಿತಸ್ಥರಲ್ಲ ಇವರ ಸಮ್ಮುಖದಲ್ಲಿಯೇ ಮುಂದಿನ ದಿನಗಳಲ್ಲಿ ಪ್ರತಿಷ್ಠಾಪಿಸೋಣ ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳೂಣ.
– ಲೋಕೇಶ್ವರ್. ಸಮಾಜದ ಮುಖಂಡರು. ನಿವೃತ್ತ ಪೊಲೀಸ್ ಎಸಿಪಿ ತಿಪಟೂರು.
ಪ್ರಸ್ತುತವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಯಾವುದೇ ಪೂರ್ವ ಅನುಮತಿ ಇಲ್ಲದೆ, ಹಾಗೂ ಯಾವುದೇ ಪರಿಶೀಲನೆ ಇಲ್ಲದೆ ಬಸವೇಶ್ವರ ಪುತ್ಥಳಿ ಅನಾವರಣ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಯಾರಿಗೂ ತೊಂದರೆ ಆಗದಂತೆ ಪುತ್ಥಳಿಯನ್ನು ತೆರವುಗೊಳಿಸಿ ಶಾಂತಿಯನ್ನು ಕಾಪಾಡಲಾಗಿದೆ
– ವಿ ಮರಿಯಪ್ಪ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತುಮಕೂರು ಜಿಲ್ಲೆ
ಬಸವ ಬುದ್ಧ ಅಂಬೇಡ್ಕರ್ ದೇಶಕ್ಕೆ ಮಾದರಿಯಾದ ಮಹಾ ಮಾನವತಾವಾದಿಗಳು ಇಂಥವರ ಪುತ್ಥಳಿ ಪ್ರತಿಷ್ಠಾಪನೆಗೆ ಸರ್ಕಾರ ಯಾವುದೇ ತೊಡಕು ತೊಂದರೆ ನೀಡಬಾರದು ತಾಲೂಕಿನಲ್ಲಿ ಬಹು ಸಂಖ್ಯಾತ ವೀರಶೈವ ಸಮಾಜದವರಿದ್ದು ಮುಂದಿನ ದಿನಗಳಲ್ಲಿ ಕಾನೂನು ತೊಡಕುಗಳನ್ನು ಬಗೆಹರಿಸಿ ಸಮಾನತೆ ಹರಿಕಾರ ಬಸವೇಶ್ವರ ಪ್ರತಿಮೆ ಅನಾವರಣಗೊಳ್ಳಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. – ಶ್ರೀ ರುದ್ರಮುನಿ ಸ್ವಾಮೀಜಿ ಷಡಕ್ಷರ ಮಠ ತಿಪಟೂರು.
ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ವಿಶ್ವಗುರು ಬಸವಣ್ಣನವರು ಅಸ್ಪೃಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ. ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ 18 ಜನವರಿ 2024ರಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿ ಎಲ್ಲಾ ಸಾರ್ವಜನಿಕ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಅನಾವರಣಕ್ಕೆ ಅವಕಾಶ ಮಾಡಿದ್ದು ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. -ಬಸವ ಅನುಯಾಯಿಗಳು ತಿಪಟೂರು.
ಘಟನೆಯ ಹಿನ್ನೆಲೆ : ಕಳೆದ ಒಂದೂವರೆ ವರ್ಷದ ಹಿಂದೆ ನಗರದ ವೃತ್ತಗಳ ಅಭಿವೃದ್ಧಿ 45 ಲಕ್ಷ ಶಾಸಕರ ಅನುದಾನದಲ್ಲಿ ಅಭಿವೃದ್ಧಿಗೆ ಮುಂದಾಗಿದ್ದರು. ವೀರಶೈವ ಲಿಂಗಾಯಿತರೇ ಹೆಚ್ಚಾಗಿ ಇರುವ ಕ್ಷೇತ್ರವಾಗಿರುವ ತಿಪಟೂರಿನಲ್ಲಿ ದಲಿತ ಸಂಘಟನೆ, ಕನ್ನಡ ಪರ ಸಂಘಟನೆ, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಒಕ್ಕೊರಲಿನಿಂದ ಕೋಡಿ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆ ನಿರ್ಮಾಣ ಮಾಡುವಂತೆ ನಗರಸಭೆಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಸ್ಥಳೀಯ ನಗರಸಭೆಯ ಆಡಳಿತ ವಿಶೇಷ ಸಭೆಯಲ್ಲಿ ಇಟ್ಟು ಎಲ್ಲಾ 31 ನಗರಸಭಾ ಸದಸ್ಯರುಗಳ ಅನುಮತಿಯ ಮೇರೆಗೆ ರಾಜ್ಯ ಸರ್ಕಾರಕ್ಕೆ ಪುತ್ಥಳಿ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆವಿಗೂ ಅನುಮತಿ ದೊರೆತಿರಲಿಲ್ಲ.
ಸ್ಥಳೀಯ ಶಾಸಕ ಗೈರು :
ವೀರಶೈವ ಲಿಂಗಾಯಿತ ಮುಖಂಡ ಎಂದೇ ಗುರುತಿಸಿಕೊಂಡಿರುವ ಶಾಸಕ ಕೆ.ಷಡಕ್ಷರಿ ಘಟನೆಯ ಸಂದರ್ಭದಲ್ಲಿ ಗೈರು ಹಾಜರಾಗಿರುವುದು ಸ್ಥಳೀಯರಲ್ಲಿ ಬೇಸರಕ್ಕೆ ಕಾರಣವಾಗಿದ್ದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಶಾಸಕರು ನಮ್ಮೊಂದಿಗಿದ್ದರೇ ನಮಗೆ ಬಲ ಇದ್ದಂತೆ ಇರುತ್ತಿತ್ತು ಎಂದು ಹಲವರು ಮಾತನಾಡಿದರು.