ಮಧುಗಿರಿ : ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಹೊರ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಹೊಟ್ಟೆ ನೋವೆಂದು ಚಿಕಿತ್ಸೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್ ಜಿ. ನಿವೇದಿತಾ ರವರ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆಯಲ್ಲಿ ಜಿ.ಪಂ ಸಿಇಓ ಪ್ರಭುರವರ ಆದೇಶದ ಹಿನ್ನೆಲೆಯಲ್ಲಿ ತಾಲೂಕಿನ ಸಹಾಯಕ ನಿರ್ದೇಶಕ ಶಿವಣ್ಣನವರು ಅಮಾನತ್ತು ಮಾಡಿ ಆದೇಶಿಸಿದ್ದಾರೆ.
ಏನಿದು ಪ್ರಕರಣ : ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಹಾಸ್ಟೆಲ್‌ನಲ್ಲಿದ್ದ 9ನೇ ತರಗತಿ ವಿದ್ಯಾರ್ಥಿನಿ ಹೊರ ತಾಲೂಕಿನ ಆಸ್ಪತ್ರೆಯಲ್ಲಿ ಭಾನುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆಂದು ತಿಳಿದು ಬಂದಿದೆ.
ತಮ್ಮ ಮಗಳ ಉತ್ತಮ ವ್ಯಾಸಂಗಕ್ಕಾಗಿ ಎಂದು ದೂರದ ಮಧುಗಿರಿ ತಾಲೂಕಿನ ವಿದ್ಯಾರ್ಥಿನಿಲಯಕ್ಕೆ ದಾಖಲಿಸಿ ಶಾಲೆಗೆ ಕಳುಹಿಸಿ ಕೊಡುತ್ತಿದ್ದರು. ಕೆಲ ದಿನಗಳ ಹಿಂದೆ ಬಾಲಕಿ ಸ್ವ ಗ್ರಾಮಕ್ಕೆ ಹೋಗಿದ್ದು , ಜ.9 ರಂದು ಖಾಸಗಿ ಆಸ್ಪತ್ರೆಗೆ ಹೊಟ್ಟೆ ನೋವಿನ ಕಾರಣ ಪೋಷಕರೊಂದಿಗೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದು ಆ ಸಮಯದಲ್ಲಿ ಸ್ಕ್ಯಾನಿಂಗ್ ಮಾಡಿಸಲಾಗಿ ವಿದ್ಯಾರ್ಥಿನಿಯು ಗರ್ಭಾವಸ್ಥೆಯಲ್ಲಿರುವುದು ದೃಢಪಟ್ಟಿರುತ್ತದೆ.
ನಂತರ ವಿದ್ಯಾರ್ಥಿನಿಯು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ವಿದ್ಯಾರ್ಥಿನಿಯು ಚಂದ್ರು ಎಂಬ ವಿದ್ಯಾರ್ಥಿಯು ನನಗೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿರುತ್ತಾನೆ ಎಂದು ಹೇಳಿಕೆ ನೀಡಿರುತ್ತಾಳೆ.
ಬಾಲಕಿ ಗರ್ಭಿಣಿಯಾಗಿ ಹೆರಿಗೆಯಾಗುವ ತನಕವೂ ಪೋಷಕರು , ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಬಾಲಕಿಯ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.
ಈ ವಿದ್ಯಾರ್ಥಿನಿಯು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿರುವುದಿಲ್ಲ ಹಾಗೂ 2023 ಆ. 11 ರಂದು ವೈದ್ಯಕೀಯ ತಪಾಸಣೆ ಮಾಡಿಸಿದ್ದು, ಸದರಿ ವೈದ್ಯಕೀಯ ತಪಾಸಣೆಯಲ್ಲಿಯೂ ಸಹ ವಿದ್ಯಾರ್ಥಿನಿ ಗರ್ಭಾವಸ್ಥೆ ಹೊಂದಿರುವ ಬಗ್ಗೆ ಮಾಹಿತಿಯು ತಿಳಿದು ಬಂದಿರುವುದಿಲ್ಲ.
ಈ ಬಗ್ಗೆ ವಿದ್ಯಾರ್ಥಿನಿಯ ಸ್ನೇಹಿತೆಯರನ್ನು ವಿಚಾರಿಸಲಾಗಿ ಯಾರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದು ಬಂದಿರುವುದಿಲ್ಲ ಹಾಗೂ ವಿದ್ಯಾರ್ಥಿನಿಯ ದೈಹಿಕ ಬೆಳವಣಿಗೆಯ ಬಗ್ಗೆ ಸಹ ನಮಗೆ ಅನುಮಾನ ಬಂದಿರುವುದಿಲ್ಲ.
ವಿದ್ಯಾರ್ಥಿನಿಯು ಸಾಮಾನ್ಯರಂತೆ ಕಾಣುತ್ತಿರುವುದು ಕಂಡು ಬಂದಿರುತ್ತದೆ. ವಿದ್ಯಾರ್ಥಿನಿಯು ಗೌಪ್ಯವಾಗಿ ಯಾರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ನನಗೆ ತಿಳಿದು ಬಂದಿರುವುದಿಲ್ಲ , ವಾರದಲ್ಲಿ ಎರಡು ಮೂರು ಬಾರಿ ಮಧುಗಿರಿಯಲ್ಲಿರುವ ಅವರ ಸಂಬಂಧಿಕರ ಮನೆಗೆ ಹೋಗಿ ಬರುತ್ತಿರುವುದು ಮಾತ್ರ ನನಗೆ ತಿಳಿದು ಬಂದಿರುತ್ತದೆ ಎಂಬುದಾಗಿ ವಾರ್ಡನ್ ನಿವೇದಿತಾ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯು ಕಳೆದ ಜೂನ್ ಮಾಹೆಯಿಂದ ಇಲ್ಲಿಯವರೆಗೂ ನಿಲಯದಲ್ಲಿ 8 ತಿಂಗಳ ಕಾಲ ವಾಸ್ತವ್ಯವಿದ್ದರೂ ನಿಲಯ ಪಾಲಕರು ಈ ವಿದ್ಯಾರ್ಥಿನಿಯು ಗರ್ಭಾವಸ್ಥೆ ಹೊಂದಿರುವ ಬಗ್ಗೆ ಮಾಹಿತಿ ತಿಳಿಯುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುತ್ತಾರೆ. ವಾರ್ಡನ್ ಆದವರು ಪ್ರತಿ ದಿನ ವಿದ್ಯಾರ್ಥಿನಿಯರೊಂದಿಗೆ ನಿಲಯಾರ್ಥಿಗಳ ಚಲವಲನಗಳ ಬಗ್ಗೆ ನಿಗಾ ವಹಿಸಬೇಕಾಗಿರುವುದು ನಿಲಯಪಾಲಕರ ಜವಾಬ್ದಾರಿಯಾಗಿರುತ್ತದೆ.
ಆದರೆ ನಿಲಯಪಾಲಕರಾದ ನಿವೇದಿತ ಜಿ ರವರು ಕರ್ತವ್ಯದ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಆ.11 ರ ವೈದ್ಯಕೀಯ ತಪಾಸಣೆಯನ್ನು ಕ್ರಮವಾಗಿ ನಡೆಸಿದ್ದಾರೊ ಬಿಟ್ಟಿದ್ದಾರೊ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ. ತಪಾಸಣೆ ಗಾಗಿ ಹಾಸ್ಟೆಲ್ ಭೇಟಿ ನೀಡುವ ವೈದ್ಯರುಗಳು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸದೆ ಇರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿದ್ದು ಸರಿಯಾಗಿ ಅಂದೆ ತಪಾಸಣೆ ಯಾಗಿದ್ದರೆ ಐದು ತಿಂಗಳ ಹಿಂದೆಯೇ ಈ ಘಟನೆ ಬೆಳಕಿಗೆ ಬರುತ್ತಿದ್ದು ಎಂಬುದು ಸಾರ್ವಜನಿಕರಿಂದ ಮಾತುಗಳು ಕೇಳಿ ಬಂದಿವೆ.