ಶಿರಾ : ಸರ್ಕಾರಿ ನೌಕರರು ಶಿಸ್ತಿನಿಂದ, ಧಕ್ಷತೆಯಿಂದ ಪ್ರಾಮಾಣಿಕವಾಗಿ ಜನರ ಸೇವೆ ಮಾಡಬೇಕು. ಸರಕಾರ ನಮಗೆ ವೇತನ ನೀಡುವುದು ಜನರ ಸೇವೆಗಾಗಿ ಎಂದು ತಹಶೀಲ್ದಾರ್ ಮಮತ ಹೇಳಿದರು.
ಅವರು ಶಿರಾ ತಾಲ್ಲೂಕು ದಂಡಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಬೇಲೂರು ತಾಲ್ಲೂಕಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ನಗರದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಅಧಿಕಾರಿ ನೌಕರರು ಕಾನೂನನ್ನು ಯಾವುದೇ ಒತ್ತಡ ಬಂದರೂ ಸಹ ಕಾನೂನು ಮೀರಿ ಕೆಲಸ ಮಾಡಬಾರದು. ಕಾನೂನು ಮೀರಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತೇವೆ. ಯಾವುದೇ ಕೆಲಸ ಮಾಡಬೇಕಾದರೂ ಮೇಲಾಧಿಕಾರಿಗಳ ಮಾರ್ಗದರ್ಶನ ತೆಗೆದುಕೊಳ್ಳಬೇಕು. ಯಾವುದೇ ಒತ್ತಡಗಳಿಗೆ ಒಳಗಾಗಬಾರದು. ಅಧಿಕಾರಿ, ನೌಕರರು ಸಾರ್ವಜನಿಕರಿಗೆ ಬೇಕಾಗಿರುವ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಸರಕಾರ ನಮಗೆ ವೇತನ ಕೊಡುತ್ತಿರುವುದೇ ಸಾರ್ವಜನಿಕರ ಕೆಲಸ ಮಾಡಲಿ ಎಂದ ಅವರು ನಾನು ಶಿರಾ ತಾಲ್ಲೂಕಿನಲ್ಲಿ ಕೆಲಸ ಮಾಡಿದ ಅವಧಿಯಲ್ಲಿ ಸಾರ್ವಜನಿಕರ, ರೈತರ ಆದ್ಯತೆ ಕೊಟ್ಟು ಸೇವೆ ಮಾಡಿದ್ದೇನೆ. ಮುಂದೆ ಬರುವ ಅಧಿಕಾರಿಗಳು ಸಹ ಅದೇ ರೀತಿ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸಿದರು.
ಗ್ರೇಡ್-2 ತಹಶೀಲ್ದಾರ್ ಮಂಜುನಾಥ್ ಅವರು ಮಾತನಾಡಿ ತಹಶೀಲ್ದಾರ್ ಮಮತ ಅವರಿಂದ ಶಿಸ್ತಿನಿಂದ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತಿಳಿದಿದ್ದೇನೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ತಮ್ಮ ಕಣ್ಣೇದುರೇ ಸಾವುನೋವುಗಳನ್ನು ನೋಡಿದ್ದಾರೆ. ಆದರೂ ಕುಗ್ಗದೆ ಅತ್ಯಂತ ಯಶಸ್ವಿಯಾಗಿ ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ. ಇವರ ಸೇವೆ ಮುಂದಿನ ದಿನಗಳಲ್ಲಿ ಹೆಚ್ಚು ಸಿಗಲಿ ಎಂದರು.
ಕಾರ್ಯಕ್ರಮದಲ್ಲಿ ನೂತನ ತಹಶೀಲ್ದಾರ್ ಮುರುಳಿಧರ್, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಕಸಬಾ ಕಂದಾಯ ನಿರೀಕ್ಷಕ ಮಂಜುನಾಥ್, ಮಾಜಿ ಗ್ರಾ.ಪಂ. ಅಧ್ಯಕ್ಷ ಟಿ.ಡಿ.ನರಶಿಂಹಮೂರ್ತಿ, ಬುಕ್ಕಾಪಟ್ಟಣ ಹೋಬಳಿ ಘಟಕದ ಕಸಾಪ ಅಧ್ಯಕ್ಷ ಶಿವು ಜಾನಕಲ್, ದಲಿತ ಮುಖಂಡ ಸತೀಶ್, ಕಲಾವಿದ ಬೇವಿನಹಳ್ಳಿ ನರಸಿಂಹರಾಜು ಸೇರಿದಂತೆ ಹಲವರು ಹಾಜರಿದ್ದರು.