ಮಧುಗಿರಿ : ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿ, ಪಾಠ ಮಾಡಿದ ಶಿಕ್ಷಕರು ಹಾಗೇ ಉಳಿಯುತ್ತಾರೆ. ಆದರೆ ಶಿಕ್ಷಕರಿಂದ ಪಾಠ ಕಲಿತ ವಿದ್ಯಾರ್ಥಿಗಳು ಜಗತ್ತಿನ ಎಲ್ಲಾ ರಂಗಗಳನ್ನೂ ಆಳುತ್ತಾರೆ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶ್ರೀಶ್ರೀ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಗುರುವಾರ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಅಧ್ಯಕ್ಷರ ಪದಗ್ರಹಣ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ಕಾರ್ಯಗಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಯಾರೂ ಕಸಿಯಲಾಗದ, ಕೇಳದ ಸಂಪತ್ತು ಶಿಕ್ಷಣ. ಶಿಕ್ಷಣ ದೊಡ್ಡ ಅಸ್ತ್ರ ವಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ವಡವೆ, ವಸ್ತ್ರ ಮತ್ತು ಆಸ್ತಿ ಮಾಡುವುದನ್ನು ಬಿಟ್ಟು ಶಿಕ್ಷಣ ಪ್ರೇಮಿಗಳನ್ನಾಗಿ ಮಾಡಿ. ಹಿಂದಿನ ತಲೆಮಾರಿನವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿಕೊಟ್ಟಿದ್ದರು. ಆದರೆ ಇಂದು ಏನೇ ಕೇಳಿದರೂ ಗೂಗಲ್ ನಲ್ಲಿ ಸರ್ಚ್ ಮಾಡುವ ಪರಿಸ್ಥಿತಿ ಇದೆ. ಮನುಷ್ಯ ಜನ್ಮ ಬಹಳ ವರ್ಷ ಇರುವುದಿಲ್ಲ. ಇರುವಷ್ಟು ದಿನ ಎಲ್ಲರನ್ನೂ ಪ್ರೀತಿ ಗೌರವದಿಂದ ಕಾಣಿ, ಮಕ್ಕಳಿಗೆ ಜಾತಿಯ ವಿಷ ಬೀಜ ಬಿತ್ತುವ ಪ್ರಯತ್ನ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.
ನಮ್ಮದು ಸಮುದಾಯದ ಮಠವಾದರೂ ದಲಿತರು, ಹಿಂದುಳಿದವರು ನನ್ನ ಸುತ್ತಮುತ್ತ ಇರುವುದು ನನಗೆ ಸಂತಸ ತಂದಿದೆ. ನಮ್ಮ ಶರೀರ ಸ್ವಾರ್ಥಕಲ್ಲ. ಇತರರಿಗೆ ಉಪಕಾರಕ್ಕಾಗಿ. ಹತ್ತಿರುವ ಏಣಿ ಒದೆಯುವ ಕೆಲಸ ಬೇಡ ಎಂದ ಅವರು ಕಲಿಯುಗದಲ್ಲಿ ಏನಾದರೂ ಪಡೆಯಬೇಕೆಂದರೆ ಸಂಘಟನೆಯಿಂದ ಮಾತ್ರ ಸಾದ್ಯ. ತಾಲೂಕು ಸರ್ಕಾರಿ ನೌಕರರ ಸಂಘ ಜಿಲ್ಲೆಗೆ ಮಾದರಿಯಾಗಲಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲಿ ಎಂದು ಹಾರೈಸಿದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ಬೆಳೆದು ಗುರಿ ಮುಟ್ಟಲು ಸಹಾಯಕವಾಗಲಿದೆ. ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ. ಅವರ ಮೂಲಕ ಬದುಕು ಕಟ್ಟಿಕೊಳಬೇಕು ಎಂಬ ಕನಸುಗಳನ್ನು ಹೊಂದಿದ್ದು, ಶಾಲೆಯಲ್ಲಿ ಕಲಿಸುವುದಕ್ಕಿಂತ ಹೆಚ್ಚು ಬದುಕಿನಲ್ಲಿ ಬರುವ ಕಷ್ಟಗಳು ನಮಗೆ ಹೆಚ್ಚು ಪಾಠ ಕಲಿಸುತ್ತವೆ. ಕಷ್ಟಗಳು ಬಂತೆಂದು ಕೊರಗದೇ ಮುನ್ನುಗ್ಗಿ ಗುರಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್. ನರಸಿಂಹರಾಜು ಮಾತನಾಡಿ ಯಾವುದೇ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟನೆ ಅತೀ ಮುಖ್ಯ. ಹಿಂದೆ ಸರ್ಕಾರದಿಂದ ಯಾವುದೇ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಷಡಕ್ಷರಿಯವರು ರಾಜ್ಯಾಧ್ಯಕ್ಷರಾದ ನಂತರ ಸರ್ಕಾರದ ಮನವೊಲಿಸಿ 21 ಬೇಡಿಕೆಗಳನ್ನು ಹೋರಾಟವಿಲ್ಲದೇ ಈಡೇರಿಕೊಂಡಿದ್ದೇವೆ. ಸರ್ಕಾರಿ ನೌಕರರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ 50 ಲಕ್ಷದ ವರೆಗೆ ನಗದು ರಹಿತ ಚಿಕಿತ್ಸೆ ದೊರೆಯುವ ಯೋಜನೆ ಶೀಘ್ರದಲ್ಲೆ ಜಾರಿಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರನು ಅಕಾಲಿಕವಾಗಿ ಮೃತಪಟ್ಟಲ್ಲಿ ಕುಟುಂಬದವರಿಗೆ ಒಂದು ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಆದೇಶ ನಮ್ಮ ಕೈ ಸೇರಲಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ದಿನೇ ದಿನೇ ಹೆಚ್ಚಿನ ಜವಾಬ್ದಾರಿಗಳನ್ನು ಹೊರಿಸುತ್ತಿದ್ದು, ಈ ಎಲ್ಲಾ ಘಟನೆಗಳು ಸರ್ಕಾರಿ ಶಾಲೆಗಳನ್ನು ಮುಚ್ಚವ ಹುನ್ನಾರವಾಗಿದೆ. ಶಾಲೆಗಳಲ್ಲಿ ಬಿಸಿಯೂಟದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ ಅವರು ಎನ್.ಪಿ.ಎಸ್ ಸಂಘದವರು ಸರ್ಕಾರಿ ನೌಕರರ ಸಂಘವನ್ನು ಬಿಟ್ಟು ಎನ್.ಪಿ.ಎಸ್ ಹೋರಾಟಕ್ಕೆ ನಡಸಿದಲ್ಲಿ ಯಶಸ್ವಿಯಾಗುವುದಿಲ್ಲ. 7 ನೇ ವೇತನ ಆಯೋಗ ಜಾರಿ ನಂತರ ಎನ್.ಪಿ.ಎಸ್ ಹೋರಾಟಗಾರರು ಮನವಿ ಮಾಡಿದಲ್ಲಿ ಮಾತ್ರ ನಾವೂ ಸಹ ನಿಮ್ಮ ಹೋರಾಟಕ್ಕೆ ಕೈ ಜೋಡಿಸುತ್ತೇವೆ ಎಂದರು. ನೂತನ ಅಧ್ಯಕ್ಷರಾದ ಜಯರಾಮಯ್ಯ ಮಾತನಾಡಿ ನೌಕರರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ನೌಕರರು ಎಲ್ಲಾ ರೀತಿಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಹೆಚ್. ವೆಂಕಟೇಶಯ್ಯ, ನೂತನ ಅಧ್ಯಕ್ಷ ಜಿ. ಜಯರಾಮಯ್ಯ, ಉಪಾಧ್ಯಕ್ಷ ಹೆಚ್. ಆರ್. ಶಶಿಕುಮಾರ್, ಕಾರ್ಯದರ್ಶಿ ನಟರಾಜ್, ಖಜಾಂಚಿ ಚಿಕ್ಕರಂಗಪ್ಪ (ಚಕ್ರಿ) ಮುಖಂಡ ತುಂಗೋಟಿ ರಾಮಣ್ಣ, ಪುರಸಭಾ ಸದಸ್ಯರಾದ ಎಂ.ಆರ್. ಜಗನ್ನಾಥ್, ಎಂ.ಎಲ್. ಗಂಗರಾಜು, ನಾರಾಯಣ್, ಜೆಡಿಎಸ್ ತಾಲೂಕು ಅದ್ಯಕ್ಷ ಬಸವರಾಜು, ಡಿಡಿಪಿಐ ಕೆ.ಜಿ. ರಂಗಯ್ಯ, ಸಹಕಾರ ಸಂಘಗಳ ಸಹಾಯಕ ನಿಬಂದಕ ಸಣ್ಣಪಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ, ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕ ಜಯರಾಂ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ಬಾಬು ರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ನಜ್ಮಾ, ಶಿಕ್ಷಕ ಮಲ್ಲಿಕಾರ್ಜುನಯ್ಯ ಮತ್ತು ಪದಾಧಿಕಾರಿಗಳು ಇದ್ದರು.