ಬಾಕಿ ವಸೂಲಿಗೆ ಹೋಗಿದ್ದ ಬೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ : ಆಸ್ಪತ್ರೆಗೆ ತಹಶೀಲ್ದಾರ್ ಮಮತ ಭೇಟಿ
ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ
ಶಿರಾ : ಬೆಸ್ಕಾಂ ಮಾಸಿಕ ಶುಲ್ಕವನ್ನು ವಸೂಲು ಮಾಡಲು ಹೋಗಿದ್ದ ಕರ್ತವ್ಯ ನಿರತ ಬೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಮನೆಯವರು ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯಲ್ಲಿ ಬುಧವಾರ ನಡೆದಿದೆ.
ಶಿರಾ ತಾಲ್ಲೂಕು ಚಿಕ್ಕನಕೋಟೆ ಗೊಲ್ಲರಹಟ್ಟಿಯ ತಿಮ್ಮಣ್ಣ ಎಂಬುವರ ಮನೆಯ ವಿದ್ಯುತ್ ಶುಲ್ಕದ ಬಾಕಿಯನ್ನು ಪಾವತಿಸುವಂತೆ ತೆರಳಿದ್ದ ಬೆಸ್ಕಾಂ ನಗರ ಉಪ ವಿಭಾಗದ 3ನೇ ಕಾರ್ಯಪಾಲ ಘಟಕದ ಶಾಖಾಧಿಕಾರಿ ಹೆಚ್.ರಾಜಣ್ಣ ಮತ್ತು ಪವರ್ ಮ್ಯಾನ್ ಭೂತರಾಜು, ನರಸಿಂಹಪ್ಪ, ತಿಪ್ಪೇಸ್ವಾಮಿ, ರಿಯಾಜ್ ಎಂಬುವರು ಬಾಕಿ ಉಳಿಸಿಕೊಂಡಿದ್ದ ಬೆಸ್ಕಾಂ ಶುಲ್ಕವನ್ನು ಪಾವತಿಸುವಂತೆ ಕೇಳಿದ್ದಾರೆ. ನಂತರ ಮನೆಯವರು ಲೈನ್ ಕಟ್ ಮಾಡುವಂತೆ ಹೇಳಿದ್ದಾರೆ. ಸಿಬ್ಬಂದಿಯವರು ಲೈನ್ ಕಟ್ಟು ಮಾಡಿದ ತಕ್ಷಣ ತಿಮ್ಮಣ್ಣ ಅವರ ಮಕ್ಕಳಾದ ರಾಮಣ್ಣ, ಸಿದ್ದಣ್ಣ ಸೇರಿದಂತೆ ಇತರರು ಸಿಬ್ಬಂದಿಗಳಿಗೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಶಾಖಾಧಿಕಾರಿ ಹೆಚ್.ರಾಜಣ್ಣ ಅವರಿಗೆ ತಲೆಗೆ ಹಲ್ಲೆ ಮಾಡಿದ್ದು, ಪವತ್ ಮ್ಯಾನ್ ಭೂತರಾಜು ಎಂಬುವರಿಗೆ ಭುಜದ ಬಳಿ ಮೂಳೆ ಮುರಿತವಾಗಿದೆ. ಎಲ್ಲರೂ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಹಶೀಲ್ದಾರ್ ಭೇಟಿ: ವಿಷಯ ತಿಳಿದ ತಕ್ಷಣ ತಹಶೀಲ್ದಾರ್ ಮಮತ ಅವರು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಗಾಯಾಳು ಸಿಬ್ಬಂದಿಗಳ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು. ನಂತರ ಪೊಲೀಸರೊಂದಿಗೆ ಮಾತನಾಡಿದ ತಹಶೀಲ್ದಾರ್ ಅವರು ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.