ಶಿರಾ : ಭಾರತ ದೇಶದಲ್ಲಿ ಯುವಶಕ್ತಿ ಹೆಚ್ಚಿದ್ದು, ಯುವಶಕ್ತಿಯೇ ಭಾರತದ ಆಸ್ತಿಯಾಗಿದೆ. ಈ ನಿಟ್ಟಿನಲ್ಲಿ ಯುವ ಜನತೆ ತುಂಬಾ ಜವಾಬ್ದಾರಿಯುತವಾಗಿ ಗುರು ಹಿರಿಯರು ಮತ್ತು ತಂದೆ ತಾಯಿಗಳ ಆಶಯದಲ್ಲಿ ಸಾಧನೆ ಮಾಡಿ ತಮ್ಮ ಶಾಲೆಗೆ, ತಂದೆ ತಾಯಿತಳಿಗೆ, ಶಿಕ್ಷಕರಿಗೆ ಕೀರ್ತಿ ತನ್ನಿ ಎಂದು ಶಿರಾ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಹೇಳಿದರು.
ಅವರು ಶುಕ್ರವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯ ಪ್ರಯುಕ್ತವಾಗಿ ರಾಜ್ಯಶಾಸ್ತ್ರ ವಿಭಾಗ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಪಂಚಾಯತಿ, ವಕೀಲರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆಯ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತದ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ದೇಶದ ಪ್ರತಿಯೊಬ್ಬರಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ, ಸಮಾನತೆ ಮತ್ತು ನ್ಯಾಯ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಪ್ರತಿಯೊಬ್ಬರಿಗೂ ಕೂಡ ಲಭಿಸಲು ಸಂವಿಧಾನ ಮುಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಬೇರೆ ದೇಶಗಳಿಗೆ ಹೊಲಿಸಿದರೆ ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ಭಾರತೀಯನೂ ಕೂಡ ಸಂವಿಧಾನದ ಆಶಯಗಳಂತೆ ಬದುಕುವಂತಹ ಒಂದು ಅವಕಾಶವನ್ನು ಸಂವಿಧಾನ ನಮಗೆ ಕಲ್ಪಿಸಿ ಕೊಟ್ಟಿದೆ. ಈ ನಿಟ್ಟಿನಲ್ಲಿ ಸಂವಿಧಾನದಡಿ ರೂಪಿತವಾಗಿರುವ ಕಾನೂನುಗಳನ್ನು ಎಲ್ಲರೂ ಪಾಲಿಸಬೇಕು. ಕಾನೂನು ಪರಿಪಾಲನೆ ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ವಕೀಲರ ಸಂಘ ಅಧ್ಯಕ್ಷ ಧರಣೇಶ್ ಗೌಡ ಅವರು ಮಾತನಾಡಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವುದನ್ನು ರೂಡಿಸಿಕೊಂಡು ವಿದ್ಯಾಭ್ಯಾಸ ಮುಗಿಸಿಕೊಂಡು. ನಿಮ್ಮ ಗ್ರಾಮಗಳಲ್ಲಿ ಅಗತ್ಯವಿರುವವರಿಗೆ ಕಾನೂನು ಸೇವೆ ಬಗ್ಗೆ ಮಾಹಿತಿ ನೀಡಿ ತಾಲೂಕು ಕಾನೂನು ಸೇವಾ ಸಮಿತಿ ನಿಮ್ಮ ಜೊತೆಗಿರುತ್ತದೆ ಎಂದು ತಿಳಿಸಿದರು.
ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಹೆಚ್ ಗುರುಮೂರ್ತಿ ಗೌಡ ಮಾತನಾಡಿ ಯುವಕರು ಈ ದೇಶದ ಬಹುದೊಡ್ಡ ಆಸ್ತಿ, ಯುವಕಶಕ್ತಿ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಬದ್ಧತೆಯಿಂದ ಕಠಿಣ ಪರಿಶ್ರಮದಿಂದ ಸಾಧಿಸಿ ಸ್ವಾಮಿ ವಿವೇಕಾನಂದ ಅವರನ್ನು ಆದರ್ಶವಾಗಿಟ್ಟುಕೊಳ್ಳಿ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ವಕೀಲರ ಜಿಎಸ್ ರಂಗನಾಥ್ ಅವರು ಮಾತನಾಡಿ ವಿದ್ಯಾರ್ಥಿಗಳು ದೇಶದ ಏಳಿಗೆಗಾಗಿ ಶ್ರಮಿಸಬೇಕು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಯುವಶಕ್ತಿ ಭವಿಷ್ಯದ ಭಾರತವನ್ನು ಕಟ್ಟುವಂತ ನಿಟ್ಟಿನಲ್ಲಿ ಸಹಕಾರಿಯಾಗಿ ಇರಬೇಕೆಂದರು.
ಪ್ರಾಂಶುಪಾಲರಾದ ಡಾ ಎಸ್.ಟಿ ರಂಗಪ್ಪ ಅವರು ಮಾತನಾಡಿ ಸಮಾಜದ ಎಲ್ಲ ಸಮಸ್ಯೆಗಳಿಗೆ ಗುಣಾತ್ಮಕ ಶಿಕ್ಷಣವೇ ಪರಿಹಾರ. ವಿದ್ಯಾರ್ಥಿ ಶಕ್ತಿ ರಾಷ್ಟçದ ಶಕ್ತಿ, ನೀವೆಲ್ಲರೂ ಕೂಡ ಶ್ರದ್ಧೆಯಿಂದ ಓದುವುದನ್ನು ಅಭ್ಯಾಸ ಮಾಡಿಕೊಂಡು ಸಮಾಜ ಸುಧಾರಕರು ನೀಡಿದಂತಹ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿಶೇಷವಾಗಿ ಸ್ವಾಮಿ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಯನ್ನು ಮಾಡಿದಂತಹ ಮೇರು ವ್ಯಕ್ತಿತ್ವದ ಸುಧಾರಕರಾಗಿದ್ದಾರೆ ಆ ನಿಟ್ಟಿನಲ್ಲಿ ನೀವೆಲ್ಲರೂ ಕೂಡ ಚಿಂತಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರಸನ್ನ ಕುಮಾರ್ ಎಸ್‌ಎಂ, ಕಾಲೇಜಿನ ಐಕ್ಯೂ.ಏ.ಸಿ ಸಂಚಾಲಕ ಡಾ ಗಿರೀಶ್.ಡಿ., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೊನ್ನಾಂಜಿನಯ್ಯ.ಡಿ.ಆರ್, ಅಪರ ಸರಕಾರಿ ವಕೀಲರಾದ ಹೊನ್ನೇಶ್ ಗೌಡ, ತಾ.ಪಂ.ರಂಗನಾಥ, ತಾ.ಪಂ. ಅಭಿವೃದ್ಧಿ ಅಧಿಕಾರಿ ಬಸವರಾಜು, ಲಲಿತಾ, ಪ್ರೊ.ಗೋವಿಂದರಾಜು, ಡಾ.ಬಿ.ಎನ್.ನಾಗಭೂಷಣಯ್ಯ, ದೈಹಿಕ ಶಿಕ್ಷಣ ನಿರ್ದೇಶಿಕರಾದ ಡಾ. ಶಿವಣ್ಣ, ಪತ್ರಾಂಕಿತ ವ್ಯವಸ್ಥಾಪಕರಾದ ನರೇಂದ್ರಬಾಬು, ಎನ್‌ಸಿಸಿ ಅಧಿಕಾರಿ ಡಾ.ಮಹೇಂದ್ರ ಸೇರಿದಂತೆ ಹಲವರು ಹಾಜರಿದ್ದರು.