ಶಿರಾ : ತಾಲ್ಲೂಕಿನ ಗೌಡಗೆರೆ ಹೋಬಳಿಯ ಕುಂಟನಹಟ್ಟಿ ಗೊಲ್ಲರಹಟ್ಟಿ ಗ್ರಾಮದ ಬಾಣಂತಿ 25 ವರ್ಷದ ಬಾಲಮ್ಮ ಹಾಗೂ ತನ್ನ ಒಂದು ತಿಂಗಳ ಹಸುಗೂಸನ್ನು, ಬೀದಿಯಲ್ಲಿ ಗುಡಿಸಲು ಹಾಕಿ, ಉರಿಯುವ ಬಿಸಿಲಲ್ಲಿ ಬಾಲಮ್ಮನ ಗಂಡ ಶಿವಕುಮಾರ್, ಅತ್ತೆ ಕರಿಯಮ್ಮ, ಮಾವ ಬಾಲಣ್ಣ ಅವರು ಇರಿಸಿದ್ದರು. ವಿಷಯ ತಿಳಿದ ತಕ್ಷಣ ಶಿರಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಅವರು ಶನಿವಾರ ಸ್ಥಳಕ್ಕೆ ದಿಡೀರ್ ಭೇಟಿ ನೀಡಿ ಮೌಢ್ಯಾಚರಣೆ ಆಚರಿಸುತ್ತಿದ್ದವರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿ ಬಾಣಂತಿಯನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾದರು.
ನಂತರ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಗೀತಾಂಜಲಿ ಅವರು ಗೊಲ್ಲರಹಟ್ಟಿಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಬಾಣಂತಿಯರನ್ನು ಅಮಾನವೀಯವಾಗಿ ನಡೆಸಿಕೊಂಡರೆ. ದೇವರ ಹೆಸರಿನಲ್ಲಿ ಮೂಡನಂಬಿಕೆಯನ್ನು ಆಚರಿಸಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿಯಲ್ಲಿ ದೂರದ ಬಯಲಿನ ಕುಟೀರದಲ್ಲಿದ್ದ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನು ಶಿರಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಅವರು ಮೌಡ್ಯದ ವಿರುದ್ಧ ಜಾಗೃತಿ ಮೂಡಿಸಿ ಮನೆ ಸೇರಿಸಿದರು.
ಉಸಿರಾಡಲು ಕಷ್ಟಕರವಾದ ಗುಡಿಸಿಲಿನಲ್ಲಿ ಬಾಣಂತಿಯನ್ನು ಇರಿಸಿದ್ದೀರಿ. ನಿಮ್ಮ ಮನೆಯನ್ನು ಬೆಳಗುವ ಹೆಣ್ಣು ಮಗುವನ್ನು ಮಡಿ ಮಡಿ ಎಂದು ಮನೆಯಿಂದ ಹೊರಗಡೆ ಇಟ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದೀರಿ. ಬಾಣಂತಿಯರಿಗೆ ಸೂಕ್ತವಾದ ಗಾಳಿ ಬೆಳಕಿನ ಪರಿಸರದಲ್ಲಿ ನೋಡಿಕೊಳ್ಳಬೇಕು. ಅವರ ಆರೋಗ್ಯದ ಮೇಲೆ ಬೇಗ ರೋಗಗಳು ತಗಲುತ್ತವೆ. ಆದ್ದರಿಂದ ಬಾಣಂತಿಯರು ಇರುವ ಸ್ಥಳವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಹೀಗಿದ್ದರೂ ನೀವು ಬಾಣಂತಿಗೆ ಸಣ್ಣ ಗುಡಿಸಿಲಿನಲ್ಲಿ ಇರಿಸಿದ್ದೀರಿ. ನೀವು ಇದೇ ರೀತಿ ಮುಂದಿನ ದಿನಗಳಲ್ಲಿ ಮಾಡಿದರೆ ಕಾನೂನು ಪ್ರಕಾರ ಮನೆಯವರ ಮೇಲೆ ಪ್ರಕರಣ ದಾಖಲಿಸಬಹುದು. ಆಗ ಅಂತಹವರಿಗೆ 1 ವರ್ಷದಿಂದ 7 ವರ್ಷದವರೆಗೆ ಶಿಕ್ಷೆ ವಿಧಿಸಲಾಗುತ್ತದೆ. 5 ಸಾವಿರದಿಂದ 50 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ಅಸ್ಪೃಶ್ಯತೆ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಇದಕ್ಕೆ ಬೆಂಬಲ ನೀಡುವ ಅಕ್ಕಪಕ್ಕದ ಮನೆಯವರ ಮೇಲೂ ಕ್ರಮ ಕೈಗೊಳ್ಳಬಹುದು. ಹಾಗೂ ತೊಂದರೆ ಕೊಟ್ಟರೆ ಅಂತಹವರ ಮೇಲೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿ ಗೊಲ್ಲರಹಟ್ಟಿಗಳಲ್ಲಿ ಓದಿ ವಿದ್ಯಾವಂತರಾದವರು ಜಾಗೃತಿ ಮೂಡಿಸಬೇಕು. ಹೆಣ್ಣು ಮಕ್ಕಳು ಎಲ್ಲರೂ ಒಗ್ಗಟ್ಟಾಗಿ ಇಂತಹ ಆಚರಣೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾಡುಗೊಲ್ಲ ಸಂಘದ ಕಾರ್ಯದರ್ಶಿ ಚಂದ್ರಣ್ಣ, ತಾವರೆಕೆರೆ ಪೊಲೀಸ್ ಠಾಣಾ ಎ.ಎಸ್.ಐ. ಶ್ರೀನಿವಾಸ್, ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿಯಲ್ಲಿ ದೂರದ ಬಯಲಿನ ಕುಟೀರದಲ್ಲಿದ್ದ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನು ಶಿರಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೀತಾಂಜಲಿ ಅವರು ಮೌಡ್ಯದ ವಿರುದ್ಧ ಜಾಗೃತಿ ಮೂಡಿಸಿ ಮನೆ ಸೇರಿಸಿದರು.