ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ : ಎಂ.ಡಿ.ಲಕ್ಷ್ಮೀನಾರಾಯಣ
ಶಿರಾದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆ
ಶಿರಾ : 2023ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಭ್ರಷ್ಟ ಸರಕಾರ, ಅನೈತಿಕ ಸರಕಾರ ತೊಲಗಿ ಕಾಂಗ್ರೆಸ್ ಸರಕಾರ ಖಂಡಿತವಾಗಿಯೂ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.
ಅವರು ಮಂಗಳವಾರ ನಗರದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಶೇ. 52 ರಷ್ಟು ಹಿಂದುಳಿದ ಜನಾಂಗದವರಿದ್ದು, ಎಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ನಾನು 224 ಕ್ಷೇತ್ರಗಳಲ್ಲಿಯೂ ಹಿಂದುಳಿದ ವರ್ಗಗಳ ಸಭೆ ನಡೆಸುತ್ತೇನೆ. ಈಗಾಗಲೇ 63 ಕ್ಷೇತ್ರದಲ್ಲಿ ಸಭೆ ನಡೆಸಿದ್ದೇನೆ. ಇನ್ನಾರು ತಿಂಗಳಲ್ಲಿ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಸಭೆ ನಡೆಸಿ ಪಕ್ಷ ಸಂಘಟಿಸುತ್ತೇನೆ. ಜನವರಿ 2022 ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 2 ಲಕ್ಷ ಹಿಂದುಳಿದ ಸಮುದಾಯದವರು ಸೇರಿ ಬೃಹತ್ ಸಮಾವೇಶ ಮಾಡಲಾಗುವುದು ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಈ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಕಳೆದ ಮೂರು ವರ್ಷದಲ್ಲಿ ರಾಜ್ಯವನ್ನು ದಿವಾಳಿ ಮಾಡಿದೆ. ಯಾವುದೇ ಯೋಜನೆಗಳಿಗೆ ಹಣ ನೀಡುತ್ತಿಲ್ಲ. ಅವರಿಗೆ ಎಲ್ಲಿ ಹಣ ಮಾಡಬಹುದೋ ಅಂತಹ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿದೆ. ಮೂರು ವರ್ಷದಲ್ಲಿ 3.50 ಲಕ್ಷ ಕೋಟಿ ಸಾಲವನ್ನು ರಾಜ್ಯ ಸರಕಾರ ಮಾಡಿದೆ. ಈ ದೇಶದಲ್ಲಿ ಹಗರಣ ಮುಕ್ತ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ಸರಕಾರವೆಂದರೆ ಅದು ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರಕಾರ ಅಂದಿನ ಅವಧಿಯಲ್ಲಿ ಶಿರಾ ತಾಲ್ಲೂಕಿಗೆ 17000 ಮನೆಗಳನ್ನು ಮಂಜೂರು ಮಾಡಿಸಿದ್ದೆ. ಆ ಮನೆಗಳಿಗೆ ಇಲ್ಲಿಯವರೆಗೂ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಕಳೆದ ಉಪ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಕಾಡು ಗೊಲ್ಲರ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ, ಮದಲೂರು ಕೆರೆಗೆ ನೀರು ತುಂಬಿಸಿಲ್ಲ. ಆದ್ದರಿಂದ ಹಿಂದುಳಿದ ಸಮುದಾಯ ಒಗ್ಗಟ್ಟಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿ ಭ್ರಷ್ಟ ಬಿಜೆಪಿ ಸರಕಾರವನ್ನು ತೊಲಗಿಸೋಣ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಜಿಲ್ಲಾಧ್ಯಕ್ಷ ಪುಟ್ಟರಾಜು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ನಟರಾಜ್ ಬರಗೂರು, ಹಾರೋಗೆರೆ ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಮಾಜಿ ತಾ.ಪಂ. ಸದಸ್ಯೆ ಲಕ್ಷ್ಮೀದೇವಮ್ಮ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರಾಘವೇಂದ್ರ, ರೂಪೇಶ್ ಕೃಷ್ಣಯ್ಯ, ಯುವ ಘಟಕದ ಅಧ್ಯಕ್ಷ ದಯಾನಂದ ಗೌಡ, ಎಸ್.ಎಲ್.ರಂಗನಾಥ್, ಅಜಯ್ ಕುಮಾರ್ ಗಾಲಿ, ಗಜಮಾರನಹಳ್ಳಿ ಮಂಜುನಾಥ್, ಪಿ.ಬಿ.ನರಸಿಂಹಯ್ಯ, ಭಾನುಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.