ಮಧುಗಿರಿ ತಾಲ್ಲೂಕು ಬರಪೀಡಿತ ಘೋಷಣೆಗೆ ಸರ್ಕಾರಕ್ಕೆ ಕೆ.ಎನ್.ರಾಜಣ್ಣ ಒತ್ತಾಯ
ಮಧುಗಿರಿ : ರಾಜ್ಯ ಸರ್ಕಾರ ಮಧುಗಿರಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೋನಾ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಿಸಿದ ಬಹುತೇಕ ಯುವಕರು ಬೇಸಾಯವನ್ನು ನಂಬಿ ತಮ್ಮಲ್ಲಿದ್ದ ಬಂಡವಾಳವನ್ನು ಹಾಕಿ ವ್ಯವಸಾಯ ಮಾಡಿದ್ದರು. ಆದರೆ ಸಕಾಲದಲ್ಲಿ ಮಳೆಯಾಗದೆ ಸಂಪೂರ್ಣ ಬೆಳೆ ನೆಲಕಚ್ಚಿದ್ದು, ಇದರಲ್ಲಾದ ನಷ್ಟದಿಂದ ಚಿಂತಾಜನಕ ಪರಿಸ್ಥಿತಿ ತಲುಪಿದ್ದಾರೆ. ತಕ್ಷಣವೇ ಸರ್ಕಾರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿದರು.
ಬೆಳೆ ನಷ್ಟ ಮತ್ತು ಬೆಳೆ ಪರಿಹಾರದ ಹಣವನ್ನು ಖಾಸಗಿ ಕಂಪನಿಯವರಿಗೆ ವಹಿಸದೆ ಸರ್ಕಾರದ ಒಡೆತನದ ಇನ್ಶೂರೆನ್ಸ್ ಕಂಪನಿಗಳ ಮೂಲಕ ಹಣ ಸಂದಾಯ ಮಾಡುವ ವ್ಯವಸ್ಥೆ ಮಾಡಬೇಕು. ಕಳೆದ ಬಾರಿ ರೈತರಿಂದ ವಿಮೆ ಕಟ್ಟಿಸಿಕೊಂಡ ಖಾಸಗಿ ಕಂಪನಿಯವರು ರೈತರಿಗೆ ವಂಚಿಸಿ ಓಡಿಹೋಗಿದ್ದರು. ಆದ್ದರಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಜವಾಬ್ದಾರಿ ವಹಿಸಿದರೆ ರೈತರು ವಿಶ್ವಾಸವಿಟ್ಟು ವಿಮೆ ಕಟ್ಟುತ್ತಾರೆ ಎಂದರು.
ತಾಲ್ಲೂಕಿನ ಪೋಲನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಮಾಡಿದ್ದರು. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ನೀರಿಗೆ ಹಾಹಾಕಾರವಾಗಲಿದೆ. ಹಾಗಾಗಿ ಈ ಕೂಡಲೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸರಕಾರಕ್ಕೆ ಶೀಘ್ರ ಕ್ರಿಯಾಯೋಜನೆ ಸಲ್ಲಿಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಬೇಕು ಎಂದರು.
ತಾಲ್ಲೂಕಿನ ಸಾಧಕಿ ಮೋನಿಕಾ ರವರು ಕೃಷಿ ವಿವಿಯಲ್ಲಿ ಹತ್ತು ಚಿನ್ನದ ಪದಕಗಳನ್ನು ಪಡೆದಿದ್ದು, ಈ ವಿಧ್ಯಾರ್ಥಿನಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಪುಟ್ಟ ಗ್ರಾಮದಿಂದ ಬಂದಂಥ ಈಕೆಯ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂದು ತಿಳಿಸಿದ ಅವರು, ವಿಧ್ಯಾರ್ಥಿನಿ ಹಾಗೂ ಶಿಕ್ಷಣ ಕೊಡಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.