ಶಿರಾ

ಅನ್ನ ಕೊಡುವ ರೈತ ಆರ್ಥಿಕವಾಗಿ ಸದೃಡರಾಗಬೇಕು, ಸ್ವಾವಲಂಬಿಯಾಗಬೇಕು : ಬಿ.ಸಿ.ಪಾಟೀಲ್

ಯರಗುಂಟೆ ಗ್ರಾಮದಲ್ಲಿ ಸರಕಾರಿ ಶಾಲಾ ಕಟ್ಟಡ ಉದ್ಘಾಟನೆ

ಶಿರಾ : ದೇಶಕ್ಕೆ ಅನ್ನ ಕೊಡುವ ರೈತ ಸಮೃದ್ಧಿಯಾಗಿರಬೇಕು. ರೈತರು ಸಬಲರಾಗಬೇಕು, ಆರ್ಥಿಕವಾಗಿ ಸದೃಡವಾಗಬೇಕು, ಸ್ವಾವಲಂಬಿಯಾಗಿ ದುಡಿಯಬೇಕು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತಪರವಾದ ಕೆಲಸ ಮಾಡುತ್ತಿವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಅವರು ತಾಲ್ಲೂಕಿನ ಯರಗುಂಟೆ ಗ್ರಾಮದಲ್ಲಿ ಜೀನಿ ಮಿಲ್ಲೆಟ್ ಹೆಲ್ತ್ ಮಿಕ್ಸ್ ಸಂಸ್ಥೆ ಮತ್ತು ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಅಭಿವೃದ್ಧಿಪಡಿಸಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರಿಗೆ ಒಂದು ವರ್ಷಕ್ಕೆ 6000 ಮತ್ತು ಕರ್ನಾಟಕ ಸರಕಾರದಿಂದ 4000 ಒಟ್ಟು 10 ಸಾವಿರ ರೂಗಳನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೇರವಾಗಿ ನೀಡುತ್ತಿದೆ. ಡಿಎಪಿ ಯೂರಿಯಾ ಗೊಬ್ಬರಕ್ಕೆ 2500 ರೂ. ಸಹಾಯಧನ ಒಂದು ಚೀಲಕ್ಕೆ ನೀಡುತ್ತಿದ್ದಾರೆ. ಯೂರಿಯ ಗೊಬ್ಬರಕ್ಕೆ 1400 ರೂ. ಸಹಾಯಧನ ಒಂದು ಚೀಲಕ್ಕೆ ನೀಡಲಾಗುತ್ತಿದೆ. ಜೊತೆಗೆ ಬಿತ್ತನೆ ಬೀಜಕ್ಕೆ, ಔಷಧಿಗೆ ಸಬ್ಸೀಡಿ ನೀಡುತ್ತಿದ್ದೇವೆ ಎಂದರು.

ರೈತರು ಉಪಕಸುಬು ಮಾಡಿ: ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಿದರೆ ಸಾಕಾಗುವುದಿಲ್ಲ. ಅದರ ಜೊತೆಗೆ ಹೈನುಗಾರಿಕೆ, ಜೇನು ಕೃಷಿ, ಮೀನು ಕೃಷಿ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಉಪಕಸುಬುಗಳನ್ನು ಸಹ ಮಾಡಬೇಕು. ಅದರಿಂದ ಆರ್ಥಿಕವಾಗಿ ಸಬಲರಾಗಬಹುದು. ದಿಲೀಪ್ ಕುಮಾರ್ ಅವರನ್ನು ನೋಡಿ ಬೇರೆಯವರು ಕಲಿಯಬೇಕು. ಅವರ ನಿಷ್ಠೆ ಛಲ ಇದ್ದರೆ ಏನು ಬೇಕಾದರು ಸಾಧಿಸಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ ಎಂದರು.

ರೈತ ವಿದ್ಯಾನಿಧಿ ದೇಶದಲ್ಲಿ ಮೊದಲು: ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಮುಖ್ಯಮಂತ್ರಿಯಾದ ನಂತರ 8, 9, 10 ನೇ ತರಗತಿಯಲ್ಲಿ ಓದುತ್ತಿರುವವ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ಇದು ಭಾರತ ದೇಶದಲ್ಲಿಯೇ ಮೊದಲು. ಸದ್ಯದಲ್ಲಿ ರೈತ ಶಕ್ತಿ ಯೋಜನೆ ಮೂಲಕ 10 ಲೀ. ಡೀಸಲ್‌ಗೆ 25 ರೂ. ಸಬ್ಸೀಡಿ ನೀಡಲಾಗುವುದು. ಇದೂ ಸಹ ಕರ್ನಾಟಕದಲ್ಲಿ ಮಾತ್ರ ಎಂದರು.
ನಿಜವಾದ ಕೃಷಿಕ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ದಿಲೀಪ್‌ಕುಮಾರ್ ಮಾಡಿ ತೋರಿಸಿದ್ದಾರೆ. ದಿಲೀಪ್ ಕುಮಾರ್ ಅವರು ಕೇವಲ ಪಿಯುಸಿ ಓದಿ ತಾವೇ ಸ್ವತಃ ಜೀನಿ ಸಿರಿಧಾನ್ಯಗಳ ಮಿಲೆಟ್ ಉತ್ಪನ್ನ ತಯಾರಿಸು ಉದ್ಯಮ ಮಾಡಿ ತಿಂಗಳಿಗೆ ಸುಮಾರು 450 ಮಂದಿಗೆ ಉದ್ಯೋಗ ನೀಡಿದ್ದಾರೆ. ಅವರಿಗೆ ಸುಮಾರು 60 ಲಕ್ಷ ವೇತನ ನೀಡುತ್ತಿದ್ದಾರೆ. ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ರಾಜಸುಲೋಚನ, ತಹಶೀಲ್ದಾರ್ ಮಮತ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ, ಸಹಾಯಕ ಕೃಷಿ ನಿರ್ದೇಶಕ ಆರ್.ರಂಗನಾಥ್, ಜೀನಿ ಮಿಲೆಟ್ ಸಂಸ್ಥೆಯ ದಿಲೀಪ್ ಕುಮಾರ್, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಕೆ.ಜಿ.ರಂಗಯ್ಯ, ಶಿಕ್ಷಣ ಸಂಯೋಜಕ ಕರಿಯಣ್ಣ, ಮುಖ್ಯ ಶಿಕ್ಷಕಿ ಪರ್ವೀನ್ ತಾಜ್, ಲೀಲಾಂಬಿಕೆ ಸೇರಿದಂತೆ ಹಲವರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker