ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ : ಡಿವೈಎಸ್ಪಿ ಕೆ.ಎಸ್.ವೆಂಕಟೇಶ್ ನಾಯ್ಡು
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
ಮಧುಗಿರಿ : ನ. 2 ರಿಂದ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಮಧುಗಿರಿ ಪೋಲಿಸ್ ಉಪವಿಭಾಗದ ತಾಲೂಕುಗಳಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ವಾಹನ ಚಾಲನೆ ಮಾಡಬೇಕೆಂದು ಡಿವೈಎಸ್ಪಿ ಕೆ.ಎಸ್.ವೆಂಕಟೇಶ್ ನಾಯ್ಡು ತಿಳಿಸಿದರು.
ಪಟ್ಟಣದ ಡೂಂಲೈಟ್ ವೃತ್ತ ಮಹಾತ್ಮ ಗಾಂಧಿ ವೃತ್ತದಲ್ಲಿ ಶನಿವಾರ ಪೊಲೀಸರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಒಂದು ವವರ್ಷದಲ್ಲಿ ದ್ವಿಚಕ್ರ ವಾಹನ ಸವಾರರ ಅಪಘಾತದಿಂದಾಗಿ ಮಧುಗಿರಿ, ಕೊರಟಗೆರೆ ಮತ್ತು ಪಾವಗಡ ತಾಲ್ಲೂಕು ಗಳಲ್ಲಿ 125 ಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಮೃತಪಟ್ಟಿರುತ್ತಾರೆಂದು ತಿಳಿಸಿದರು.
ಕೆಲ ಒಂದು ಸಂಧಭಧಗಳಲ್ಲಿ ದ್ವಿಚಕ್ರ ವಾಹನ ಸವಾರರು ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಕ್ಕೆ ಇಡಾಗಿರುವುದು, ಗುಂಡಿಗಳಿಗೆ ಹೋಗಿ ಗುದ್ದಿ ಕೊಂಡಿರುವುದು, ನೆಲಕ್ಕೆ ಬಿದ್ದು ತಲೆ ಬುರುಡೆಗೆ ಏಟಾಗಿ ಸಾವನ್ನಪ್ಪಿರುವ ಪ್ರಕರಣಗಳು ಸಾಕಷ್ಟು ಕಂಡುಬಂದಿದೆ ಎಂದರು.
ನಮ್ಮ ಜೀವನ ನಮ್ಮ ಕೈಯಲ್ಲಿ ಇದೆ ಎಂದು ಭಾವಿಸಿ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ಟನ್ನು ಕಡ್ಡಾಯವಾಗಿ ಧರಿಸುವುದು, ಇನ್ಶೂರೆನ್ಸ್ ಮತ್ತು ಚಾಲನಾ ಪರವಾನಿಗೆ ಯನ್ನು ಆಗಿಂದಾಗೆ ನವೀಕರಣ ಮಾಡಿಕೊಳ್ಳುವುದು ಒಳಿತು ಎಂದರು.
ಶಾಲಾ ಕಾಲೇಜುಗಳಿಗೆ ಅಪ್ರಾಪ್ತ ವಯಸ್ಕರು ದ್ವಿಚಕ್ರವಾಹನವನ್ನು ತರುವಂತಿಲ್ಲ. ಅಗೆನಾದರೂ ದ್ವಿಚಕ್ರವಾಹನ ತಂದಲ್ಲಿ ಅದಕ್ಕೆ ಸಂಬಂಧಿಸಿದ ಮಾಲೀಕರ ಮೇಲೆ ಪ್ರಕರಣಗಳು ದಾಖಲಾಗುತ್ತವೆ ಎಂದರು ಜೊತೆಗೆ 3ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ ವರೆಗೂ ದಂಡ ಕಟ್ಟಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ 2ತಿಂಗಳ ಹಿಂದೆ ಪತ್ರಿಕಾ ಹೇಳಿಕೆಗಳ ಮೂಲಕ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು .ಆದರೂ ಇಲ್ಲಿಯವರೆಗೂ ಯಾರೂ ಅದನ್ನು ಪಾಲಿಸದ ಕಾರಣ ಮೊದಲಿಗೆ ಪೋಲಿಸರೇ ಹೆಲ್ಮೆಟ್ ಧರಿಸಿ ಓಡಾಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು ಮುಂದಿನ ದಿನಗಳಲ್ಲಿ ಮುಂಬದಿ ಸವಾರ ಮತ್ತು ಹಿಂಬದಿ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚಿನ ಸವಾರರು ಪ್ರಯಾಣಿಸಿದರೆ ಅಂಥವರ ವಿರುದ್ಧವೂ ಕೂಡ ಸ್ಥಳದಲ್ಲೇ ಮೊಕದ್ದಮೆ ದಾಖಲಾಗುವುದು ಎಂದ ಅವರು, ಐಎಸ್‌ಐ ಮಾರ್ಕಿನ ಹೆಲ್ಮೆಟ್ ಗಳನ್ನು ಧರಿಸಿ ಎಂದು ಸಲಹೆ ನೀಡಿದರು.
ಸಿಪಿಐ ಎಂ.ಎಸ್. ಸರ್ದಾರ್ ಮಾತನಾಡಿ, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸ ಪೊಲೀಸರ ಕೆಲಸ ಎಂದು ಅರಿತವರಿಗೆ ನಿಮ್ಮ ಜೀವನ ರಕ್ಷಣೆಗಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ತಿಳಿಸಿದರು.
ಮಧುಗಿರಿ ಪಿಎಸ್ಸೈ ವಿಜಯಕುಮಾರ್, ಬಡವನಹಳ್ಳಿ ಹನುಮಂತರಾಯಪ್ಪ, ಮಿಡಿಗೇಶಿ ಠಾಣೆಯ ರಂಗನಾಥಪ್ಪ, ಕೋಡಿಗೆನಹಳ್ಳಿ ಠಾಣೆಯ ನಾಗರಾಜು ಹಾಗೂ ಪೋಲಿಸರು ಹಾಜರಿದ್ದರು.