ಗುಬ್ಬಿ

ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳ ನಿರ್ಲಕ್ಷ್ಯ : ಹೈಟೆಕ್ಷನ್ ವಿದ್ಯುತ್ ಕಂಬ ಹತ್ತಿ ಶ್ರೀನಿವಾಸ್ ಪ್ರತಿಭಟನೆ

ತಹಶೀಲ್ದಾರ್ ಭರವಸೆ ನಂತರ ಕೆಳಗಿಳಿದ ಶ್ರೀನಿವಾಸ್

ಗುಬ್ಬಿ: ಕಸಬ ಹೋಬಳಿ ಹಳೇ ಗುಬ್ಬಿ ಗ್ರಾಮದ ವಾಸಿ ಶ್ರೀನಿವಾಸ್ ಎಂಬ ಸಂತ್ರಸ್ತ ಸರ್ಕಾರದ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಪಿಡಿಓ ಮತ್ತು ತಹಶೀಲ್ದಾರ್ ಅವರಿಗೆ ರಸ್ತೆ ಮತ್ತು ಮನೆ ಮಂಜೂರು ಮಾಡಿ ಕೊಡುವ ಬಗ್ಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೆ ಯಾರು ಸ್ಪಂದಿಸುತ್ತಿಲ್ಲ ಎಂದು ಬೇಸತ್ತು ಹೈಟೆಂಕ್ಷನ್ ಕಂಬ ಹತ್ತಿ ಪ್ರತಿಭಟಿಸಿ ತನ್ನ ಆಕ್ರೋಶ ಹೊರ ಹಾಕಿ ಆತಂಕ ವಾತಾವರಣ ಸೃಷ್ಟಿಯಾದ ಘಟನೆ ಶನಿವಾರ ನಡೆಯಿತು.

ಹಳೇ ಗುಬ್ಬಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ನಮ್ಮದೇ ಗ್ರಾಮದ ಸಾಕಷ್ಟು ವ್ಯಕ್ತಿಗಳು ವಾಸದ ಮನೆಗಳನ್ನು ಕಟ್ಟಿಕೊಂಡಿದ್ದು ತನಗೂ ಕೂಡ ಅದೇ ರೀತಿ ವಾಸದ ಮನೆ ಕಟ್ಟಿಕೊಳ್ಳಲು ಜಾಗ ಮಂಜೂರು ಮಾಡಲು ಅವಕಾಶವನ್ನು ನೀಡಿ ಎಂದು ಕೇಳಿದರೆ ಅಡಗೂರು ಗ್ರಾಮ ಪಂಚಾಯಿತಿ ಪಿಡಿಓ ಅವರು ನಾನು ಮನೆ ನಿರ್ಮಾಣ ಮಾಡುವ ಜಾಗದ ಬಳಿ ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ನಮ್ಮ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ನನಗೆ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ಬೆಳಿಗ್ಗೆ 9.30 ರ ಸಮಯದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ಪ್ರಭುವನ ಹಳ್ಳಿ ಗೇಟ್ ಬಳಿಯಿರುವ ತಾಳೆಗೊಪ್ಪದಿಂದ ನೆಲಮಂಗಲಕ್ಕೆ ಸರಬರಾಜಾಗುವ ಹೈಟೆಂಕ್ಷನ್ ಸಂಖ್ಯೆ 787 ಕಂಬ ಏರಿ ಕುಳಿತ ಪ್ರತಿಭಟನೆ ನಡೆಸಿ ತನಗೆ ಅನ್ಯಾಯ ಆಗುತ್ತಿದೆ. ಯಾವ ಅಧಿಕಾರಿಗಳು ನನ್ನ ಸಮಸ್ಯೆಗೆ ಉತ್ತರ ನೀಡಿಲ್ಲ. ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಎರಡು ಹೆಣ್ಣುಮಕ್ಕಳ ನನಗೆ ಸಣ್ಣ ಮನೆ ನಿರ್ಮಾಣಕ್ಕೆ ಅನುವು ಮಾಡಿಲ್ಲ. ಅಡಗೂರು ಗ್ರಾಪಂ ಪಿಡಿಓ ಶಿವಾನಂದ್ ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕಂಬದಲ್ಲೇ ಕುಳಿತು ಪೊಲೀಸರಿಗೆ ಮತ್ತು ಸಾರ್ವಜನಿಕರಲ್ಲಿ ತನ್ನ ಅಹವಾಲು ಒಪ್ಪಿಸುತ್ತಿದ್ದ.

ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬರುವವರೆವಿಗೂ ಕೆಳಗಿಳಿಯುವುದಿಲ್ಲವೆಂದು ಹೈಟೆಂಕ್ಷನ್ ಕಂಬದ ಮೇಲೆ ಕುಳಿತು ತನ್ನ ನೋವನ್ನು ತೋಡಿಕೊಳ್ಳುತ್ತಿದ್ದದ್ದು ಸ್ಥಳದಲ್ಲಿದ್ದ ಗ್ರಾಮಸ್ಥರ ಮನಕಲುಕಿತ್ತು. ಸುಮಾರು 40 ಅಡಿಗಳೆತ್ತರದಲ್ಲಿ ಕುಳಿತ ಶ್ರೀನಿವಾಸ್ ಈಗಾಗಲೇ ಅಪಾಯದ ಅಂಚು ದಾಟಿದ್ದು ಕೊಂಚ ಮೇಲೆ ಹತ್ತಿದ್ದರೂ ಪ್ರಾಣಕ್ಕೆ ಸಂಚಕಾರ ಬರುತಿತ್ತು. ಎರಡು ಗಂಟೆಗೂ ಅಧಿಕ ಕಾಲ ನೆರೆದ ಜನಸ್ತೋಮದ ನಡುವೆ ಭಯದ ವಾತಾವರಣ ಮೂಡಿತ್ತು. ವಿಷಯ ತಿಳಿದ ಪೊಲೀಸ್ ಸಿಪಿಐ ನದಾಫ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶ್ರೀನಿವಾಸ್ ಕೆಳಗಿಳಿಸುವ ವಿಫಲ ಪ್ರಯತ್ನ ಮಾಡಿದರು.

ಎರಡು ಗಂಟೆಗಳ ನಂತರ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಬಿ.ಆರತಿ ಅವರು ಸಂತ್ರಸ್ತ ಶ್ರೀನಿವಾಸ್ ಅವರ ಮನವೊಲಿಸುವ ಪ್ರಯತ್ನ ನಡೆಸಿದರು. ಮನೆ ಮತ್ತು ರಸ್ತೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಕಂಬದಿಂದ ಕೆಳಗಿಳಿದ ಶ್ರೀನಿವಾಸ್ ತನ್ನೆಲ್ಲಾ ಅಳಲು ತೋಡಿಕೊಂಡರು. ಕೆಳಗಿಳಿದ ಬಳಿಕ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ದಣಿದಿದ್ದ ಶ್ರೀನಿವಾಸ್ ಗ್ರಾಮದಲ್ಲಿ ಎಲ್ಲರೂ ಮನೆ ನಿರ್ಮಿಸಿಕೊಂಡ ಸ್ಥಳದಲ್ಲಿ ಸಣ್ಣ ಸೂರು ನಿರ್ಮಿಸಿಕೊಳ್ಳಲು ಅನುವು ಮಾಡಿಲ್ಲ. ನಾನೇನು ಪಾಕಿಸ್ತಾನದಿಂದ ಬಂದವನೇ ಎಂದು ಪ್ರಶ್ನಿಸಿ ನನಗೆ ಮಾತ್ರ ದುರುದ್ದೇಶದಲ್ಲಿ ತೊಂದರೆ ಕೊಡುತ್ತಿದ್ದಾರೆ. ರಸ್ತೆ ಕಲ್ಪಿಸಲು ಸಹ ಅಡ್ಡಿಪಡಿಸಿದ್ದಾರೆ. ನನ್ನ ಎರಡೂ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ನಾನು ರಸ್ತೆಗೆ ಅಷ್ಟೇ ಅವಕಾಶ ಕೇಳಿದ್ದು ಸರ್ಕಾರದ ಯಾವುದೇ ಸೌಲಭ್ಯ ಕೇಳಿಲ್ಲ. ಕೂಲಿ ಮಾಡಿ ನನ್ನ ಕುಟುಂಬ ಸಾಕುತ್ತೇನೆ. ಆದರೆ ಸೂರು ಕಲ್ಪಿಸಿಕೊಟ್ಟು ರಸ್ತೆಗೆ ಅವಕಾಶ ಮಾಡಿಕೊಡಲು ಮನವಿ ಮಾಡಿದರು.

ಅಳಲು ಆಲಿಸಿದ ತಹಶೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ಕಾನೂನು ರೀತಿ ರಸ್ತೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಓರ್ವ ವ್ಯಕ್ತಿಯ ಪ್ರಾಣಾಪಾಯದಿಂದ ಪಾರು ಮಾಡಲು 400 ಕೆವಿ ಸಾಮರ್ಥ್ಯ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಬಗ್ಗೆ ಬೆಸ್ಕಾಂ ಎಇಇ ಅನಿಲ್ ಕುಮಾರ್ ತಿಳಿಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker