ತೆಲುಗಿನ ಜನಪ್ರಿಯ ನಟ ನಂದಮೂರಿ ತಾರಕರತ್ನ ಇನ್ನಿಲ್ಲ
ತೆಲುಗಿನ ಖ್ಯಾತ ನಟ ಹಾಗೂ ಟಿಡಿಪಿ ನಾಯಕ ಜೂನಿಯರ್ ಎನ್‌ಟಿಆರ್ ಅವರ ಸಂಬಂಧಿ ನಂದಮೂರಿ ತಾರಕರತ್ನ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತೀವ್ರ ಹೃದಯಾಘಾತಕ್ಕೀಡಾಗಿದ್ದ ತಾರಕರತ್ನ ಅವರಿಗೆ ಕಳೆದ 23 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ನೆರೆಯ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದ ರಾಜಕೀಯ ಸಮಾವೇಶದ ವೇಳೆ ತೀವ್ರ ಹೃದಯಾಘಾತಕ್ಕೊಳಗಾದ ತಾರಕ ರತ್ನ (39) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜನವರಿ 27 ರಂದು ಕುಪ್ಪಂನಲ್ಲಿ ನಡೆದ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ರಾಜ್ಯಾದ್ಯಂತ ‘ಪಾದಯಾತ್ರೆ’ಗೆ ಚಾಲನೆ ನೀಡುವ ವೇಳೆ ಅವರು ಕುಸಿದು ಬಿದ್ದಿದ್ದರು.
ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ನಾರಾಯಣ ಹೃದಯಾಲಯ
ಆಸ್ಪತ್ರೆಗೆ ದಾಖಲಾದಾಗಿನಿಂದಲೂ ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಶನಿವಾರ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.
ತಾರಕ ರತ್ನ ಅವರು ಪ್ರಸಿದ್ಧ ಚಲನಚಿತ್ರ ನಟ ಮತ್ತು ಮಾಜಿ ಆಂಧ್ರಪ್ರದೇಶ ಮುಖ್ಯಮಂತ್ರಿ ದಿವಂಗತ ಎನ್ ಟಿ ರಾಮರಾವ್ ಅವರ ಮೊಮ್ಮಗ ಮತ್ತು ನಂದಮೂರಿ ಮೋಹನ್ ಕೃಷ್ಣ ಅವರ ಮಗ.
ಅವರು ಪತ್ನಿ ಅಲೇಖ್ಯ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಾರಕ ರತ್ನ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಅವರ ಚೊಚ್ಚಲ ‘ಒಕಟೋ ನಂಬರ್ ಕುರ್ರಾಡು’ ಸೇರಿದಂತೆ ಕೆಲವು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಆರ್‌ಆರ್‌ಆರ್’ ಖ್ಯಾತಿಯ ಜೂನಿಯರ್ ಎನ್‌ಟಿಆರ್‌ನಂತಹ ಅವರ ಕೆಲವು ಸೋದರ ಸಂಬಂಧಿಗಳಂತೆ ಬೆಳ್ಳಿತೆರೆಯಲ್ಲಿ ದೊಡ್ಡ ಹೆಸರು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು, ಸೂಪರ್ ಸ್ಟಾರ್ ಚಿರಂಜೀವಿ, ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ತಾರಕ ರತ್ನ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.