ಮಾರ್ಚ್ 5ರಂದು ಮುಖ್ಯಮಂತ್ರಿಗಳಿಂದ ಮಹಾತ್ಮಗಾಂಧಿ ಕ್ರೀಡಾಂಗಣ, ಕೇಂದ್ರ ಗ್ರಂಥಾಲಯ ಲೋಕಾರ್ಪಣೆ : ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ : ಶಾಸಕ ಜಿ.ಬಿ.ಜೋತಿಗಣೇಶ್
ತುಮಕೂರು : ಸ್ಮಾರ್ಟಸಿಟಿ ಹಾಗೂ ವಿವಿಧ ಅನುದಾನದ ಅಡಿಯಲ್ಲಿ ನಿರ್ಮಾಣಗೊಂಡಿರುವ ಮಹಾತ್ಮಗಾಂಧಿ ಕ್ರೀಡಾಂಗಣ,ಕೇಂದ್ರ ಗ್ರಂಥಾಲಯ ಆವರಣದ ಇನಕ್ಯೂಬೇಷನ್ ಸೆಂಟರ್ ಸೇರಿದಂತೆ ಸುಮಾರು 300 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಮಾರ್ಚ್ 05 ರಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಳೆಯ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ನಲಸಮಗೊಳಿಸಿ, ಅದೇ ಜಾಗದಲ್ಲಿ 54 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ.ಇಲ್ಲಿ ಪ್ರಮುಖವಾಗಿ ಅಥ್ಲೇಟಿಕ್, ಪುಟ್ಬಾಲ್,ಹಾಕಿಗೆ ಅವಕಾಶ ವಿದೆ. ಇದರ ಜೊತೆಗೆ ಇತರೆ ಎಲ್ಲಾ ಕ್ರೀಡೆಗಳಿಗೂ ಅಗತ್ಯಾನುಸಾರ ಅವಕಾಶ ಕಲ್ಪಿಸಲು ಇಲಾಖೆ ಮುಂದಾಗಿದೆ ಎಂದರು.
ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಸಂಕೀರ್ಣವನ್ನು ಖಾಸಗಿಯವರಿಗೆ ವಹಿಸಲಿದೆ ಎಂಬ ಬಗ್ಗೆ ನನ್ನ ಹೆಸರನ್ನು ಪ್ರಸ್ತಾಪಿಸಿ, ಹಲವರು ಆರೋಪ ಮಾಡಿದ್ದಾರೆ. ಆದರೆ ಅದಕ್ಕೂ ನನಗೂ ಸಂಬಂಧವಿಲ್ಲ. ಕ್ರೀಡಾಂಗಣದ ನಿರ್ವಹಣೆಗೆ ಮಾಸಿಕ ಕನಿಷ್ಠ 7-8 ಲಕ್ಷ ರೂ ಖರ್ಚು ಬೇಕಾಗುತ್ತದೆ.ಹಾಗಾಗಿ ಸಂಪನ್ಮೂಲ ಕ್ರೂಢೀಕರಣಕ್ಕೆ ಇಲಾಖೆಯಿಂದಲೇ ಮಳಿಗೆ ಹಂಚಿಕೆ ಮುಂದಾಗಿದ್ದಾರೆ.ನಾವು ಕೂಡ ಎಲ್ಲಾ ಕ್ರೀಡಾಕ್ಲಬ್ಗಳಿಗೆ ಮಳಿಗೆ ನೀಡಬೇಕೆಂಬುದು ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ.ಸಮರ್ಪಕ ನಿರ್ವಹಣೆ ಇಲ್ಲದೆ ಹೋದರೆ ಹತ್ತಾರು ಕೋಟಿ ಖರ್ಚು ಮಾಡಿಯೂ ಏನು ಪ್ರಯೋಜನವಿರುವುದಿಲ್ಲ. ಹಾಗಾಗಿ ನಿರ್ವಹಣೆಗೆ ಹೆಚ್ಚಿನ ನೀಡಬೇಕಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡೆಗೆ ನನ್ನ ಅವಧಿಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿರುವುದಲ್ಲದೆ,ಟ್ರಾಮ್ ಕೇಸ್ ಸೆಂಟರ್,ಕ್ರಿಟಿಕಲ್ ಕೇರ್ ಯೂನಿಟ್, ತಾಯಿ ಮತ್ತು ಮಗುವಿನ ಆಸ್ಪತ್ರೆ ಹೀಗೆ ಹಲವಾರು ಯೋಜನೆಗಳನ್ನು ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೈಗೊಳ್ಳಲಾಗಿದೆ.ಇದರ ಜೊತೆಗೆ ಈ ಸಾಲಿನ ಬಜೆಟ್ನಲ್ಲಿ ಒಂದು ನರ್ಸಿಂಗ್ ಕಾಲೇಜನ್ನು ಸ್ಥಾಪಿಸಲು ಮುಂದಾಗಿದೆ.ಇದರ ಜೊತೆಗೆ ಹಾಲಿ ಇರುವ ಏಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಗೆ,ಹೊಸದಾಗಿ 7 ನಮ್ಮ ಕ್ಲಿನಿಕ್ಗಳನ್ನು ಸಹ ಮಂಜೂರು ಮಾಡಿದ್ದು,ಈಗಾಗಲೇ ಎರಡು ಕಾರ್ಯಾರಂಭ ಮಾಡಿದ್ದು,ಉಳಿದವುಗಳನ್ನು ಹಂತ ಹಂತವಾಗಿ ಉದ್ಘಾಟಿಸಲಾಗುವುದು ಎಂದು ಶಾಸಕರು ನುಡಿದರು.
ಕಳೆದ ಐದು ವರ್ಷಗಳ ಹಿಂದಿಗೆ ಹೊಲಿಕೆ ಮಾಡಿದರೆ ತುಮಕೂರು ನಗರದಲ್ಲಿ ಸ್ಮಾರ್ಟ್ಸಿಟಿ,ಸರಕಾರದ ವಿಶೇಷ ಅನುದಾನದಲ್ಲಿ ಕೈಗೊಂಡಿರುವ ಹಲವಾರು ಅಭಿವೃದ್ದಿ ಕಾಮಗಾರಿಗಳಿಂದ ಗುರುತರವಾದ ಬದಲಾವಣೆ ಕಾಣುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಷ್ಟೇಲ್ಲಾ ಅಭಿವೃದ್ದಿ ಕಾಮಗಾರಿಗಳನ್ನು ಮಾಡಿರುವ ನನಗೆ ಬಿಜೆಪಿ ಪಕ್ಷದಿಂದ ಮತ್ತೊಮ್ಮೆ ಟಿಕೇಟ್ ದೊರೆಯುವುದು ಖಚಿತ.ಹಾಗೆಯೇ ಬಿಜೆಪಿ ಪಕ್ಷದ ಗೆಲುವು ಖಚಿತ. ಒಂದು ವೇಳೆ ಟಿಕೇಟ್ ಕೈತಪ್ಪಿದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ, ಪಕ್ಷವನ್ನು ರಾಜ್ಯ ಮತ್ತು ರಾಷ್ಟçದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ. ಬೇರೆ ಪಕ್ಷಕ್ಕಾಗಲಿ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮಾತೇ ಇಲ್ಲ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ಸ್ಪಷ್ಟ ಪಡಿಸಿದರು.
ರಾಜ್ಯದ 224 ಕ್ಷೇತ್ರಗಳಲ್ಲಿಯೂ ಎಲ್ಲಾ ಪಕ್ಷಗಳಲ್ಲಿಯೂ ಆಕಾಂಕ್ಷಿಗಳಿದ್ದಾರೆ. ನಮ್ಮ ಪಕ್ಷ ಅಂತ ಅಲ್ಲ, ಎಲ್ಲಾ ಪಕ್ಷದವರು ಗೆಲ್ಲವೇ ಮಾನದಂಡವಾಗಿ ಟಿಕೇಟ್ ಹಂಚಿಕೆ ಮಾಡುವುದರಿಂದ ನಮಗೆ ಈ ಬಾರಿ ಟಿಕೇಟ್ ದೊರೆಯಲಿದೆ.ಹಾಗಾಗಿ ಬೇರೆ ಪಕ್ಷದತ್ತ ಮುಖ ಮಾಡುವ ಪ್ರಶ್ನೆಯೇ ಇಲ್ಲ.ಯಾರು ಏನೇ ಹೇಳಲಿ, ಯಾರು ಎಲ್ಲಿಗೆ ಹೋಗಲಿ, ನಾನು ಮಾತ್ರ ಬಿಜೆಪಿ ಪಕ್ಷದಲ್ಲಿಯೇ ಇರುತ್ತೇನೆ ಎಂದರು.