ಜಿಲ್ಲೆತುಮಕೂರುರಾಜಕೀಯರಾಜ್ಯಸುದ್ದಿ

ಭಾರತದ ಸಂವಿಧಾನವನ್ನು ಉಳಿಸಿಕೊಳ್ಳಲು ಬಿಜೆಪಿಯನ್ನು ಸೋಲಿಸಿ : ಸಚಿವ ಡಾ.ಜಿ.ಪರಮೇಶ್ವರ್

ಕಾಂಗ್ರೆಸ್‌ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ನಾಮಪತ್ರ ಸಲ್ಲಿಕೆ

ತುಮಕೂರು : ಸಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಪಿಐ ಮೂಲಕ ವಿರೋಧಪಕ್ಷಗಳನ್ನು ಧಮನ ಮಾಡಿ, ಸರ್ವಾಧಿಕಾರಿ ಗಳಂತೆ ವರ್ತಿಸುತ್ತಿರುವ ಬಿಜೆಪಿಯನ್ನು ಸೋಲಿಸುವ ಮೂಲಕ ಅಪಾಯದಲ್ಲಿರುವ ಪ್ರಜಾಪ್ರಭುತ್ರವವನ್ನು ರಕ್ಷಿಸಬೇಕಾಗಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕೆರೆ ಕೊಟ್ಟಿದ್ದಾರೆ.
ನಗರದ ಟೌನ್‌ಹಾಲ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕಾಂಗ್ರೆಸ್‌ನ ಎಸ್.ಪಿ.ಮುದ್ದಹನುಮೇಗೌಡರ ನಾಮಪತ್ರ ಸಲ್ಲಿಸುವ ವೇಳೆ ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು,ಪದೇ ಪದೇ ಸಂವಿಧಾನ ಬದಲಾವಣೆಯ ವಿಚಾರಗಳನ್ನು ಬಿಜೆಪಿ ಸಂಸದರು ಮಾತನಾಡುತ್ತಿದ್ದರು ಮೌನ ವಹಿಸಿ, ಅವರ ಮಾತುಗಳಿಗೆ ಕುಮ್ಮಕ್ಕು ನೀಡುತ್ತಿರುವ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.ಹಾಗಾಗಿ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠವೆನಿಸಿಕೊಂಡಿರುವ ಭಾರತದ ಸಂವಿಧಾನವನ್ನು ಉಳಿಸಿಕೊಳ್ಳಲು ನಾವೆಲ್ಲರೂ ಬಿಜೆಪಿಯನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದರು.
ಇದು ಸತ್ಯ ಮತ್ತು ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟವಾಗಿದೆ.ಅಸತ್ಯ ಎಷ್ಟೇ ವಿಜೃಂಬಿಸಿದರೂ, ಕೊನೆಗೆ ಸತ್ಯಕ್ಕೆ ಗೆಲುವು ಹಾಗಾಗಿ ಸರಳ,ಸಜ್ಜನ ಹಾಗೂ ಉತ್ತಮ ಸಂಸದೀಯ ಪಟು ಎಂದು ಹೆಸರು ಪಡೆದಿರುವ ಎಸ್.ಪಿ.ಮುದ್ದಹನುಮೇಗೌಡ ಅವರು ಗೆಲ್ಲಬೇಕಿದೆ. ಆ ಮೂಲಕ ಜಿಲ್ಲೆಯ ಜಲ್ವಂತ ಸಮಸ್ಯೆಗಳಾದ ಕೊಬ್ಬರಿ ಬೆಲೆ ಇಳಿಕೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.ಎಲ್ಲಿಂದಲೋ ಬಂದ ವಿ.ಸೋಮಣ್ಣ ಅವರಿಗೆ ಮತಹಾಕುವುದರಿಂದ ಇದು ಸಾಧ್ಯವಿಲ್ಲ. ಹಾಲಿ ಸಂಸದ ಜಿ.ಎಸ್.ಬಸವರಾಜು ಸೇರಿದಂತೆ ರಾಜ್ಯದಿಂದ ಆರಿಸಿ ಹೋದ 26 ಬಿಜೆಪಿ ಸಂಸದರು ಒಂದು ದಿನವೂ ರಾಜ್ಯದ ನೆಲ,ಜಲ, ಭಾಷೆಯ ವಿಚಾರದಲ್ಲಿ ದ್ವನಿ ಎತ್ತಿ ಮಾತನಾಡಲಿಲ್ಲ.ಅವರ ಹಾದಿಯಲ್ಲಿಯೇ ಇರುವ ವಿ.ಸೋಮಣ್ಣ ಅವರಿಂದ ಏನನ್ನಾದರೂ ನಿರೀಕ್ಷೆ ಮಾಡಲು ಸಾಧ್ಯವೆ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.

 

ಬರ ಬಂದಾಗ, ನೆರೆ ಬಂದಾಗ ಬಾರದ ಅಮಿತ್ ಷಾ ಇಂದು ಚುನಾವಣೆಗೋಸ್ಕರ ರಾಜ್ಯಕ್ಕೆ ಬಂದ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ.ಸುಳ್ಳು ಹುಟ್ಟಿದ್ದೇ ಬಿಜೆಪಿಯಿಂದ, ಬೀಕರ ಬರಗಾಲದಿಂದ ಇಡೀ ಜನತೆ ತತ್ತರಿಸಿದ್ದು,18ಸಾವಿರ ಕೋಟಿ ರೂ ಪರಿಹಾರ ಕೇಳಿದರೆ ಇದುವೆರಗೂ ನೀಡಿಲ್ಲ. ಜಿ.ಎಸ್.ಟಿ ಪಾಲಿನಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ. ಹೀಗಿದ್ದರೂ ರಾಜ್ಯದ ಸಂಸದರಾಗಲಿ, ಸಚಿವರಾಗಲಿ ಮೋದಿಯನ್ನು ಪ್ರಶ್ನಿಸಲಿಲ್ಲ. ಆದರೆ ಈಗ ಮೋದಿಗೆ ಮತ ನೀಡಿ ಎಂದು ಕೇಳಲು ಇವರಿಗೆ ನಾಚಿಕೆಯಾಗುವುದಿಲ್ಲವೇ, ಇಡೀ ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಕರ್ನಾಟಕಕ್ಕೆ ನೀಡಿರುವುದು ಕೇವಲ 54 ಸಾವಿರ ಕೋಟಿ ಮಾತ್ರ. ಎಲ್ಲಾ ವಿಚಾರದಲ್ಲಿಯೂ ರಾಜ್ಯಕ್ಕೆ ಕೇಂದ್ರದ ಬಿಜೆಪಿ ಸರಕಾರದಿಂದ ಅನ್ಯಾಯವಾಗುತ್ತಿದ್ದು,ಇದು ಸರಿಹೊಗ ಬೇಕಾದರೆ ಮುದ್ದಹನುಮೇಗೌಡರಂತಹ ಸಂಸದರು ಪಾರ್ಲಿಮೆಂಟ್‌ಗೆ ಹೋಗಬೇಕು.ಅವರನ್ನು ಅಲ್ಲಿಗೆ ಕಳುಹಿಸಿಕೊಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದು,ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಸ್ತಕ್ಕೆ ಮತ ನೀಡುವ ಮೂಲಕ ಜನವಿರೋಧಿ, ರೈತವಿರೋಧಿ, ಕಾರ್ಮಿಕ ವಿರೋಧಿ ಬಿಜೆಪಿಯನ್ನು ಸೋಲಿಸವಂತೆ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಹತ್ತು ವರ್ಷಗಳ ಕಾಲ ಡಿಸಿಸಿ ಅಧ್ಯಕ್ಷರಾಗಿ, ಮೂರು ಬಾರಿ ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿರುವ ಎಸ್.ಪಿ.ಮುದ್ದಹನುಮೇಗೌಡರು ಸರಳ ಸಜ್ಜನಿಕೆಗೆ ಹೆಸರಾದವರು.ಅವರನ್ನು ಈ ಬಾರಿ ಗೆಲ್ಲಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಬಿಜೆಪಿ-ಜೆಡಿಎಸದು ಅಪವಿತ್ರ ಮೈತ್ರಿ. ಈ ಹಿಂದೆ ಎರಡು ಪಕ್ಷಗಳ ನಾಯಕರು ಪರಸ್ವರರ ಕುರಿತು ಯಾವ ರೀತಿ ಮಾತನಾಡಿಕೊಂಡಿದ್ದಾರೆ ಎಂಬುದನ್ನು ಒಮ್ಮೆ ಅವಲೋಕಿಸಿದರೆ, ಇದು ಸ್ವಾರ್ಥ ಕುಟುಂಬ ರಾಜಕಾರಣಕ್ಕೆ, ದೇವೇಗೌಡರು ತಮ್ಮ ಕುಟುಂಬದಲ್ಲಿಯೇ ಅಧಿಕಾರ ಉಳಿಯಬೇಕೆಂಬ ಕಾರಣಕ್ಕೆ ಮಾಡಿಕೊಂಡು ಒಪ್ಪಂದವಾಗಿದೆ.ಮಗ, ಮೊಮ್ಮಗ, ಅಳಿಯನಿಗಾಗಿ ದೇವೇಗೌಡರು ಈ ಇಳಿವಯಸ್ಸಿನಲ್ಲಿ ಸುತ್ತುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತದೆ. ಅಧಿಕಾರದ ಆಸೆಗೆ ಅವರ ಮಕ್ಕಳು, ಮೊಮ್ಮಕ್ಕಳು ಸಾಯವ ಕಾಲದಲ್ಲಿಯೂ ಅವರಿಗೆ ನೆಮ್ಮದಿ ಕೊಡಲಿಲ್ಲವಲ್ಲ ಎಂದು ಅನುಕಂಪ ಮೂಡುತ್ತದೆ ಎಂದರು.
ದೇವೇಗೌಡರು ತುಮಕೂರಿಗೆ ಬಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಮತ ಕೇಳುತ್ತಿಲ್ಲ. ಬದಲಿಗೆ ದೇವೇಗೌಡರನ್ನು ಸೋಲಿಸಿದವರನ್ನು ಸೋಲಿಸಿ ಎಂದು ಕರೆ ಕೊಡುತ್ತಿದ್ದಾರೆ. 2019ರ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದು ಇದೇ ಜಿ.ಎಸ್.ಬಸವರಾಜು ಮತ್ತು ವಿ.ಸೋಮಣ್ಣ, ದೇವೇಗೌಡರು ಕೇಳುತ್ತಿರುವುದು ಸಹ ಅವರನ್ನು ಸೋಲಿಸಿ ಎಂದು.ಹಾಗಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಕ್ರಿಯಾಶೀಲ ಸಂಸದರು ಎಂದು ಹೆಸರು ಪಡೆದಿದ್ದ ಮುದ್ದಹನುಮೇಗೌಡರು ಮತ್ತೊಮ್ಮೆ ಗೆಲುವು ಸಾಧಿಸುವಂತೆ ನಾವೆಲ್ಲರು ಮಾಡಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ನುಡಿದರು.

 

ಎಐಸಿಸಿ ಕಾರ್ಯದರ್ಶಿ ಮಯೂರು ಜಯಕುಮಾರ್ ಮಾತನಾಡಿ, ದೇಶದಲ್ಲಿ ಬಿಜೆಪಿ ಸರಕಾರ ತನ್ನ ಕೊನೆಯದಿನಗಳನ್ನು ಎನಿಸುತ್ತಿದೆ.ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ ರೀತಿಯಲ್ಲಿಯೇ ಕೇಂದ್ರದಲ್ಲಿಯೂ ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿಗೆ ತರಲಿದೆ. ಇದನ್ನು ಕಾರ್ಯಕರ್ತರು ಪ್ರತಿ ಮನೆ ಮನೆಗೂ ತಿಳಿಸಿ, ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಮಾಡಿ ಎಂದು ಕರೆ ನೀಡಿದರು.
ಗುಬ್ಬಿ ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿ,ತುಮಕೂರು ಲೋಕಸಭಾ ಕ್ಷೇತ್ರದ ಜನತೆಗೆ ಸ್ವಾಭಿಮಾನಿಗಳು, ಈ ಹಿಂದೆ ಎ.ಕೃಷ್ಣಪ್ಪ, ಕೋದಂಡರಾಮಯ್ಯ,ಮಂಜುನಾಥ್,ಹೆಚ್.ಡಿ.ದೇವೇಗೌಡರನ್ನೇ ಸೋಲಿಸಿ ಮನೆಗೆ ಕಳುಹಿಸುವ ಮೂಲಕ ಜಿಲ್ಲೆಯಲ್ಲಿ ಹೊರಗಿನವರಿಗೆ ಅವಕಾಶ ಇಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ.ಈ ಬಾರಿಯೂ ತುಮಕೂರು ಲೋಕಸಭಾ ಕ್ಷೇತ್ರದ ಮತದಾರರು ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕಾಗಿದೆ.ಈ ಹಿಂದಿನ ಐದು ವರ್ಷಗಳಲ್ಲಿ ಒಮ್ಮೆಯೂ ಜಿಲ್ಲೆಯ ಜಲ್ವಂತ ಸಮಸ್ಯೆಗಳ ಕುರಿತು ಮಾತನಾಡದ ಜಿ.ಎಸ್.ಬಸವರಾಜು ಅವರ ಮಾತಿಗೆ ಮರಳಾದರೆ ಜಿಲ್ಲೆಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್ ಪಕ್ಷ ಬೇಕೋ, ಕಳೆದ 10 ವರ್ಷಗಳಲ್ಲಿ ತಾವು ಕೊಟ್ಟ ಒಂದು ಭರವಸೆ ಈಡೇರಿಸದ ಬಿಜೆಪಿ ಪಕ್ಷ ಬೇಕೋ ಎಂಬುದನ್ನು ಜನತೆ ತೀರ್ಮಾನಿಸಬೇಕು.ಹಣವಿದ್ದರೆ ಚುನಾವಣೆ ಗೆಲ್ಲಬಹುದು ಎಂಬ ಬಿಜೆಪಿ ಅಭ್ಯರ್ಥಿಯ ಮುಂದೆ ಸ್ವಾಭಿಮಾನವೆಂಬ ಗುಣವನ್ನು ನಾವೆಲ್ಲರೂ ಎತ್ತಿ ಹಿಡಿಯಬೇಕಿದೆ ಎಂದರು.
ಕಾAಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,2014ರಿಂದ 2019ರವರೆಗೆ ಐದು ವರ್ಷಗಳ ಕಾಲ ಸಂಸದನಾಗಿ ಈ ಜಿಲ್ಲೆ, ರಾಜ್ಯದ ಹಲವಾರು ವಿಚಾರಗಳನ್ನು ಸಂಸತ್ತಿನಲ್ಲಿ ಪ್ರಾಸ್ತಾಪಿಸುವ ಮೂಲಕ ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದೇನೆ. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡಿದ್ದೇನೆ. ರಾಜ್ಯದ ನೆಲ, ಜಲ, ಭಾಷೆ, ಕೈಗಾರಿಕೆ, ರೈತರ ಸಮಸ್ಯೆ, ಕೊಬ್ಬರಿ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿ, ಪರಿಹಾರ ದೊರಕಿಸುವ ಪ್ರಯತ್ನ ನಡೆಸಿದ್ದು, ಮುಂದೆ ಜನತೆ ಅವಕಾಶ ಮಾಡಿಕೊಟ್ಟರೆ, ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪಾರ್ಲಿಮೆಂಟಿನ ಒಳ, ಹೊರಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್,ವೆಂಕಟರಮಣಪ್ಪ, ಎಸ್.ಷಪಿಅಹಮದ್,ಬೆಮೆಲ್ ಕಾಂತರಾಜು, ಕೆ.ಎಸ್.ಕಿರಣ ಕುಮಾರ್,ರಾಜ್ಯ ವಕ್ತಾರ ನಿಕೇತ್‌ರಾಜ್ ಮೌರ್ಯ ಅವರುಗಳು ಕಾರ್ಯಕರ್ತರು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್,ಗಂಗಹನುಮಯ್ಯ,ಇಕ್ಬಾಲ್ ಅಹಮದ್,ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲ ರಾಜಣ್ಣ,ಸದಸ್ಯರಾದ ರಾಧಾ ದೇವರಾಜು, ಮಾಜಿ ಮೇಯರಗಳಾದ ಪ್ರಭಾವತಿ, ಫರ್ಹಾನ ಬೇಗಂ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಗೀತಾ ರಾಜಣ್ಣ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಎತ್ತಿನ ಗಾಡಿಯಲ್ಲಿ ಹಸಿರು ಶಾಲಿನೊಂದಿಗೆ ಮೆರವಣಿಗೆ :-
ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ವಿಶೇಷವಾಗಿ ವಾಹನ ಸಿದ್ದಗೊಂಡಿದ್ದರೂ ಕೊನೆಯ ಗಳಿಗೆಯಲ್ಲಿ ಚಿಕ್ಕಣ್ಣಸ್ವಾಮಿ ದೇವಾಲಯದ ಧರ್ಮದರ್ಶಿ ಪಾಪಣ್ಣ ಅವರು ಸಾರಥಿಯಾಗಿ, ತಾವು ಸಾಕಿರುವ ಎತ್ತುಗಳಿಗೆ ಟೈರ್‌ಗಾಡಿ ಹೂಡಿ, ಅದರಲ್ಲಿ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದ ಹನುಮೇಗೌಡರು, ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಎಸ್,.ಆರ್.ಶ್ರೀನಿವಾಸ್, ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಮಾಜಿ ಸಚಿವ ವೆಂಕಟರವಣಪ್ಪ, ಕೆ.ಎಸ್.ಕಿರಣ್ ಕುಮಾರ್ ಸೇರಿದಂತೆ ಹಲವರು ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಅಶೋಕ ರಸ್ತೆ ಮೂಲಕ ಮೆರವಣಿಗೆ ನಡೆಸಿ, ನಾಮಪತ್ರ ಸಲ್ಲಿಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker