ಚಿಕ್ಕನಾಯಕನಹಳ್ಳಿ : ಮೈತ್ರಿ ಅಭ್ಯರ್ಥಿ ಸೋಮಣ್ಣನವರ ಪಾಲಿಗೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಕಬ್ಬಿಣದ ಕಡಲೆಯಾಗಿದ್ದು ಅವರು ಚುನಾವಣೆಯಲ್ಲಿ ಕಾಯ್ದುಕೊಂಡಿರುವ ಅಂತರದಿಂದ ಫಲಿತಾಂಶ ಏರುಪೇರು ಮಾಡುವ ಆತಂಕ ಅಭ್ಯರ್ಥಿಗೆ ಆವರಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುತ್ತದೆ ಎಂಬ ಆಶಾವಾದ ಇಟ್ಟುಕೊಂಡಿದ್ದ ಜೆಸಿಎಂ ನಿರಾಶೆ ಅನುಭವಿಸಿ ತಟಸ್ಥರಾಗಿದ್ದಾರೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿದ್ದು ಅದಕ್ಕೆ ಪೂರಕವಾಗಿ ಅವರ ನಡವಳಿಕೆಗಳು ಕಾಣಿಸುತ್ತಿವೆ. ಬಹಿರಂಗವಾಗಿಯೇ ಸೋಮಣ್ಣನವರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಅವರ ಬಂಡಾಯ ಶಮನ ಮಾಡಲು ಯಡಿಯೂರಪ್ಪನವರೇ ರಂಗ ಪ್ರವೇಶಿಸಬೇಕಾಯಿತು. ಈ ನಡುವೆ ವೀರಶೈವ- ಲಿಂಗಾಯತ ಮತಬ್ಯಾಂಕನ್ನು ಯಡಿಯೂರಪ್ಪನವರ ನಾಮಬಲದಿಂದ ಪಡೆಯುವ ತಂತ್ರ ಹಣೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಭ್ಯರ್ಥಿ ಮೇಲೆ ಬೇಸರಪಟ್ಟು ಕಾಂಗ್ರೆಸ್‌ಗೆ ಮತ ಹಾಕಿಸಿದರೆ ಕಷ್ಟ, ಸುಮ್ಮನಿದ್ದರೆ ಕಸಿವಿಸಿ ಭವಿಷ್ಯದ ಚಿಂತೆ ಜೆಸಿಎಂ ಹಿಂಬಾಲಕರಿಗೆ ಕಾಡಲಿದೆ.
ಕಾಂಗ್ರೆಸ್‌ನಲ್ಲೂ ಇದೇ ಚಿಂತೆ
ಮುರುಳೀಧರ ಹಾಲಪ್ಪ ಸೇರಿದಂತೆ ಅನೇಕ ಕಾಂಗ್ರೆಸ್ಸಿಗರಿಗೆ ಮುದ್ದುಹನುಮೇಗೌಡರ ನೆಂಟಸ್ತಿಕೆ ಬೇಡವಾಗಿದೆ. ಸಿ.ಎಂ. ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರೇ ಅಭ್ಯರ್ಥಿ ಪರವಾಗಿ ಫೀಲ್ಡಿಗೆ ಇಳಿದಿರುವುದರಿಂದ ನಾಯಕರ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳವ ಜವಾಬ್ದಾರಿ ಮುಖಂಡರ ಮೇಲಿದೆ. ಹಾಲಪ್ಪ ಹಾಗು ನಿಕೇತ್ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಿರುವ ಕಾರಣ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕಿದೆ.
ಸೋಮಣ್ಣನಿಗೆ ಒಳೇಟಿನ ಆತಂಕ
ಮಾಧುಸ್ವಾಮಿಯವರು ಸ್ವಪಕ್ಷದ ಅಭ್ಯರ್ಥಿ ಪರ ನಿಲ್ಲದೆ ಇರುವ ಧೋರಣೆ ಪ್ರದರ್ಶಿಸಿದರೆ ಪಕ್ಷದ ಚುನಾವಣೆ ಚಟುವಟಿಕೆಗೆ ಹಿನ್ನಡೆಯಾಗಲಿದೆ. ಲಿಂಗಾಯತ ಮತಬ್ಯಾಂಕಿನ ಲೆಕ್ಕಚಾರದಲ್ಲಿ ಏರುಪೇರು ಉಂಟಾಗಲಿದೆ. ಆ ಮತಗಳು ಸಹಜವಾಗಿ ಕಾಂಗ್ರೆಸ್ ಕಡೆ ವಾಲುತ್ತದೆ. ಜೆಡಿಎಸ್ ಮುಖಂಡರು, ಕೆಲ ಬಿಜೆಪಿ ಕಾರ್ಯಕರ್ತರು ತಾಲ್ಲೂಕಿನಲ್ಲಿ ಸೋಮಣ್ಣ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದು ಬಿಟ್ಟರೆ ಮಾಧುಸ್ವಾಮಿ ಕಟ್ಟಾ ಬೆಂಬಲಿಗರು ಮೈತ್ರಿ ಅಭ್ಯರ್ಥಿಯಿಂದ ಅಂತರ ಕಾಯ್ದುಕೊಂಡಿದ್ದಾರೆ.
ಜೆಡಿಎಸ್ ಹಾಗು ಬಿಜೆಪಿಯ ನಾಯಕರೊಂದಿಗೆ ಜಿಲ್ಲೆಯಲ್ಲಿ ಒಂದು ಸುತ್ತಿನ ಚುನಾವಣೆ ಪ್ರಚಾರ ನಡೆಸಿ ಫಲಿತಾಂಶದ ಕುರಿತು ಧನಾತ್ಮಕವಾಗಿರುವ ಸೋಮಣ್ಣ ಚಿಕ್ಕನಾಯಕನಹಳ್ಳಿಯಲ್ಲಿ ಲಿಂಗಾಯತ ಮತಗಳು ಲುಕ್ಸಾನವಾಗದಂತೆ ತಡೆಯಲು ಹೊನ್ನೆಬಾಗಿ ಶಶಿಧರ್ ಅವರಿಗೆ ಟಾಸ್ಕ್ ನೀಡಿದ್ದಾರೆ. ಅದನ್ನು ಸ್ವೀಕರಿಸಿರುವ ಶಶಿಧರ್ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಹಿಂದುಳಿದ, ಮುಸ್ಲಿಂ ಹಾಗು ಕುರುಬ ಸಮುದಾಯದ ಮತಗಳು ಸುರೇಶ್ ಬಾಬು ಪರ ನಿಂತರೆ ಕ್ಷೇತ್ರದಲ್ಲಿ ಸೋಮಣ್ಣನವರಿಗೆ ಲೀಡ್ ಸಿಗಲಿದೆ.
ವರದಿ : ಧನಂಜಯ್