ಬಿ.ಜೆ.ಪಿ. ಬೆಂಬಲಕ್ಕೆ ವೀರಶೈವ ಸಮುದಾಯ, ಮತ್ತೆ ಮಸಾಲಜಯರಾಮ್ ಶಾಸಕರಾಗುವುದು ಖಚಿತ : ವಿ.ಬಿ.ಸುರೇಶ್
ತುರುವೇಕೆರೆ : ಕ್ಷೇತ್ರ ವ್ಯಾಪ್ತಿಯ ವೀರಶೈವ ಸಮುದಾಯದ ಬಹುತೇಕ ಮತದಾರರು ಬಿ.ಜೆ.ಪಿ.ಯನ್ನು ಬೆಂಬಲಿಸಲಿದ್ದು, ಮಸಾಲಜಯರಾಮ್ ಮತ್ತೆ ಶಾಸಕರಾಗಿ ಆಯ್ಕೆಯಾಗುವುದು ಖಚಿತ ಎಂದು ವೀರಶೈವ ಮುಖಂಡರೂ ,ಪೀಕಾಡ್ ಬ್ಯಾಂಕ್ ಸದಸ್ಯರೂ ಆದ ವಿ.ಬಿ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬಿ.ಜೆ,ಪಿ. ಪಕ್ಷದ ವೀರಶೈವ ಮುಖಂಡರುಗಳು ಕರೆದಿದ್ದ ಸುದ್ದಿಗೋಷ್ಟಿನ್ನುದ್ದೇಶಿಸಿ ಮಾತನಾಡಿದ ಅವರು ವೀರಶೈವ ಮುಖಂಡರುಗಳ ಸೋಗಿನಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜೆ.ಡಿ.ಎಸ್. ಮತ್ತಿತರ ಪಕ್ಷಗಳಿಗೆ ಹೋಗಿದ್ದಾರೆ. ಮಸಾಲಜಯರಾಮ್ ಮತ್ತೆ ಶಾಸಕರಾಗುವುದನ್ನು ಸಹಿಸದ ಜೆ.ಡಿ.ಎಸ್. ನವರು ವೀರಶೈವರಲ್ಲಿ ಗೊಂದಲ ಮೂಡಿಸಲು ವೀರಶೈವರ ಬೆಂಬಲ ನಮಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ನಮ್ಮ ಪಕ್ಷ ಬಿಟ್ಟು ಅನ್ಯ ಪಕ್ಷಗಳಿಗೆ ಸೇರಿರುವ ವೀರಶೈವರು ಮಸಾಲಜಯರಾಮ್ ಅವರನ್ನು ಸೋಲಿಸುತ್ತೇವೆಂದು ತೊಡೆ ತಟ್ಟುತ್ತಿದ್ದಾರೆ. ಯಾರೇ ತೊಡೆ ತಟ್ಟಿದರೂ ಮಸಾಲಜಯರಾಮ್ ಶಾಸಕರಾಗುವುದನ್ನು ತಡೆಯಲಾಗದು ಎಂದರು.
ಯಲದಬಾಗಿ ಸೋಮಶೇಖರ್ ಮಾತನಾಡಿ ಕಳೆದ 20 ವರ್ಷಗಳಲ್ಲಿ ಅಭಿವೃದ್ದಿಯಿಂದ ವಂಚಿತವಾಗಿದ್ದ ಸಂಪಿಗೆ ಪಂಚಾಯಿತಿ ಹಾಗೂ ದಂಢಿನಶಿವರ ಹೋಬಳಿಯಲ್ಲಿ ಕೋಟ್ಯಾಂತರ ರೂ ವೆಚ್ಚದಲ್ಲಿ ಮಸಾಲಜಯರಾಮ್ ಅಭಿವೃದ್ದಿ ಮಾಡಿದ್ದಾರೆ. ಒಕ್ಕಲಿಗ ಪ್ರಾಬಲ್ಯವಿರುವ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 120 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಂಡಿರುವ ಮಸಾಲಜಯರಾಮ್ ಜಾತ್ಯಾತೀತ ನಾಯಕರು ಎಂದು ಬಣ್ಣಿಸಿದರು.
ಎ.ಪಿ.ಎಂ.ಸಿ.ನಾಮಿನಿ ಸದಸ್ಯ ಹರಿಕಾರನಹಳ್ಳಿ ಪ್ರಸಾದ್ ಮಾತನಾಡಿ ಜೆ.ಡಿ.ಎಸ್. ಪಕ್ಷದಲ್ಲಿ ವೀರಶೈವರಿಗೆ ಪ್ರಾತಿನಿಧ್ಯವಿಲ್ಲ, ತಮ್ಮ ವೈಯಕ್ತಿಕ ಲಾಭಕ್ಕಾಗಿ ಜೆ.ಡಿ.ಎಸ್. ಪಕ್ಷ ಸೇರಿದ ವೀರಶೈವರಿಂದ ಬಿ.ಜೆ.ಪಿ.ಗೆ ಯಾವುದೇ ನಷ್ಟವಿಲ್ಲ, ಮುಂದಿನ ಚುನಾವಣೆಯಲ್ಲಿ ವೀರಶೈವ ಮತದಾರರು ಹೆಚ್ಚಿರುವ ಬೂತ್‌ಗಳಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಹೆಚ್ಚು ಮತ ಹಾಕಿಸಿ, ಇತ್ತೀಚೆಗೆ ಜೆ.ಡಿ.ಎಸ್. ಸೇರಿರುವ ವೀರಶೈವ ಮುಖಂಡರುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.
ಗೋಷ್ಟಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಬೊಮ್ಮಲಿಂಗಯ್ಯ,ಕಿರಣ್, ಗ್ರಾ.ಪಂ. ಸದಸ್ಯ ಆದರ್ಶ, ಅರಳಿಕೆರೆ ಬಸವರಾಜು,ಸಿದ್ದಪ್ಪಾಜಿ, ವೀರಭಧ್ರಯ್ಯ, ಮತ್ತಿತರಿದ್ದರು.