ತುಮಕೂರು ನಗರ

ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿ : ಶಾಸಕ ಜಿ.ಬಿ.ಜ್ಯೋತಿ ಗಣೇಶ್

ತುಮಕೂರು : ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ವ್ಯವಸ್ಥೆಯಡಿಯಲ್ಲಿ ಲೋಪಗಳದಾಗ ಅವುಗಳನ್ನು ವಿಮರ್ಶಿಸಿ ಸರಿಯಾದ ದಾರಿಗೆ ತರುವಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳ ಪಾತ್ರ ಬಹುಮುಖ್ಯವಾದದ್ದು ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದರು.
ನಗರದ ಪತ್ರಕರ್ತರಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ ವತಿಯಿಂದ ಏರ್ಪಡಿಸಲಾಗಿದ್ದ, 2022ನೇ ಸಾಲಿನ ‘ಪತ್ರಿಕಾ ದಿನಾಚರಣೆ’ಯನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬೇಕು. ಹಸಿರು ತುಮಕೂರಿಗಾಗಿ ಗಿಡಗಳನ್ನು ನೆಡುವುದು, ಉದ್ಯಾನವನಗಳನ್ನು ದತ್ತು ತೆಗೆದುಕೊಳ್ಳುವಂತಹ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು.

ತುಮಕೂರು ಮಹಾನಗರಪಾಲಿಕೆ ಪೂಜ್ಯ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಮಾಧ್ಯಮಗಳು ಇಂದು ಅತೀ ವೇಗವಾಗಿ ಮುಂದುವರೆಯುತ್ತಿವೆ. ಪತ್ರಿಕೆಗಳು ವಾಚಕರಿಗೆಂದೇ ವಾಚಕರ ವಾಣಿಯನ್ನು ಮೀಸಲಿಟ್ಟ ಹಾಗೆ ವಿದ್ಯುನ್ಮಾನ ಮಾಧ್ಯಮಗಳು ಸಾಧನೆಯ ಹಾದಿಯಲ್ಲಿರುವವರ ಯಶೋಗಾಥೆಗೆಂದೇ ಸ್ವಲ್ಪ ಜಾಗವನ್ನು ಮೀಸಲಿಡುವುದರಿಂದ ಸಾರ್ವಜನಿಕರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಮಾಧ್ಯಮ ಮಿತ್ರರಿಗೆ ಸಲಹೆ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದ ಸಂಯೋಜಕರಾದ ಸಿಬಂತಿ ಪದ್ಮನಾಭ್ ಅವರು ಮಾತನಾಡಿ, 1834ರಲ್ಲಿ ಹರ್ಮನ್ ಪೆಡ್ರಿಕ್ ಮೊಗ್ಗಿಲ್ ಭಾರತಕ್ಕೆ ಬಂದ ನಂತರ ತಮ್ಮ ಜೀವನದ ಬಹುಭಾಗವನ್ನು ಕರ್ನಾಟಕದಲ್ಲಿಯೇ ಕಳೆದಿದ್ದಾರೆ. ಮಂಗಳೂರ ಸಮಾಚಾರ ಕನ್ನಡ ಪತ್ರಿಕೆ ಆರಂಭವಾದ ಜುಲೈ 1ರಂದೇ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಮಂಗಳೂರ ಹಾಗೂ ಇಂಗ್ಲೆಂಡ್‌ನ ರಾಷ್ಟಿçÃಯ ಗ್ರಂಥಾಲಯದಲ್ಲಿ ಮಂಗಳೂರು ಸಮಾಚಾರ ಪತ್ರಿಕೆಯ ಮೂಲ ಪ್ರತಿ ದೊರೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಯುಡಬ್ಲ್ಯುಜೆ ಜಿಲ್ಲಾಧ್ಯಕ್ಷರಾದ ಚಿ.ನಿ. ಪುರುಷೋತ್ತಮ್ ಮಾತನಾಡಿ, ತಂತ್ರಜ್ಞಾನ, ತಾಂತ್ರಿಕತೆ ಬೆಳೆದಂತೆ ಪತ್ರಿಕೆಗಳು ಸಹ ಸಾರ್ವಜನಿಕರಿಗೆ ಒಳ್ಳೆಯ ಮಾಹಿತಿಗಳನ್ನು ತಲುಪಿಸುವ ಮೂಲಕ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ತುಮಕೂರು ನಗರದಲ್ಲಿ ಪತ್ರಿಕಾ ಭವನ ಕಟ್ಟಡವು 18 ಲಕ್ಷ ರೂಗಳ ಅನುದಾನದಲ್ಲಿ ಈಗಾಗಲೇ ನವೀಕರಣವಾಗುತ್ತಿದ್ದು, ಪತ್ರಿಕಾ ಸದಸ್ಯರಿಗೆ ಆರೋಗ್ಯ ಕಾರ್ಡ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಪತ್ರಕರ್ತರ ಸಮುದಾಯ ಭವನ, ನಿವೇಶನಕ್ಕೆ ಸ್ಥಳವನ್ನು ಗುರುತಿಸಲಾಗುತ್ತಿದೆ ಎಂದರು.
ತುಮಕೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಆರ್. ಮಮತಾ ಅವರು ಮಾತನಾಡಿ, ಸರ್ಕಾರವು ಬಡವರು, ದೀನ-ದಲಿತರಿಗೆಂದೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಮಾಧ್ಯಮಗಳು ಸರ್ಕಾರಿ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ವಿದ್ಯುನ್ಮಾನ ಮಾಧ್ಯಮಗಳು ಸಹ ಸರ್ಕಾರಿ ಯೋಜನೆಗಳ ಬಗ್ಗೆ, ಯಶೋಗಾಥೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಭವನದ ಆವರಣದಲ್ಲಿ ಸಸಿ ನೆಡುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಎಲ್. ಚಿಕ್ಕೀರಪ್ಪ, ಟಿ.ಇ.ರಘುರಾಮ್, ಸತೀಶ್ ಹೆಚ್.ಈ(ಹಾರೋಗೆರೆ), ಹೆಚ್.ಎಸ್. ಪರಮೇಶ್, ಟಿ.ಎಸ್. ಕೃಷ್ಣ ಮೂರ್ತಿ, ಮಂಜುನಾಥ ನಾಯ್ಕ್, ಯಶಸ್ ಕೆ.ಪದ್ಮನಾಭ್, ಜಯನುಡಿ ಸಿ ಜಯಣ್ಣ, ಎಸ್.ಡಿ. ಚಿಕ್ಕಣ್ಣ, ನಾಗರಾಜು ಎನ್.ಎನ್., ಪಿ.ಎಸ್. ಮಲ್ಲಿಕಾರ್ಜುನ ಸ್ವಾಮಿ, ಛಾಯಾಗ್ರಾಹಕ ಶಾಂತರಾಜ್, ಛಾಯಾಗ್ರಾಹಕ ಸುರೇಶ್ ಮತ್ತು ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳಾದ ಮಹೇಶ್, ಮಂಜುನಾಥ್, ಮಹಂತೇಶ್‌, ಹೇಮಂತ್, ಮಧು,ಜಗದೀಶ್‌, ಸೇರಿದಂತೆ ಜಿಲ್ಲಾ ಮಟ್ಟದ ಪ್ರತಿನಿಧಿಗಳು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker