ಮಕ್ಕಳಿಂದ ಬರಿಗೈನಲ್ಲಿಯೇ ಶಾಲೆಯ ಆವರಣ ಸ್ವಚ್ಚತೆ : ಶಿಕ್ಷಕರ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹ
ತುಮಕೂರು : ಸರಕಾರಿ ಶಾಲೆಯ ಆವರಣವನ್ನು ಸರಕಾರದ ಸುತ್ತೋಲೆಯ ನಡುವೆಯೂ ಬರಿ ಕೈನಿಂದಲೇ ಸ್ವಚ್ಚ ಮಾಡಿಸಿ,ಕಸವನ್ನು ಬೆಂಕಿ ಹಾಕಿ ಸುಟ್ಟು ಹಾಕಿರುವ ಘಟನೆ ತುಮಕೂರು ನಗರದ ಉಪ್ಪಾರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಬುಧವಾರ ಬೆಳಗ್ಗೆ ಶಾಲಾ ಪ್ರಾರ್ಥನೆ ಆರಂಭಕ್ಕೂ ಮುನ್ನ ಶಾಲೆಯ ಆವರಣವನ್ನು ಮಕ್ಕಳಿಂದ ಬರಿಗೈಯಲ್ಲಿ ಸ್ವಚ್ಚ ಮಾಡಿಸಿರುವ ಇಲ್ಲಿನ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ,ನಗರದಲ್ಲಿ ಉಂಟಾಗುವ ಕಸವನ್ನು ಬೆಂಕಿಗೆ ಹಾಕದೆ, ಮನೆಯ ಮುಂಭಾಗಕ್ಕೆ ಬರುವ ಕಸದ ಗಾಡಿಗೆ ಹಾಕಬೇಕೆಂಬ ನಿಯಮವನ್ನು ಉಲ್ಲಂಘಿಸಿ, ಕಸವನ್ನು ಬೆಂಕಿಗೆ ಹಾಕಿ ವಾಯು ಮಾಲಿನ್ಯಕ್ಕೆ ಕಾರಣವಾಗಿದ್ದಾರೆ.
ಉಪ್ಪಾರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗಿನ ಮಕ್ಕಳು ಕಲಿಯುತಿದ್ದಾರೆ. ಶಾಲಾ ಆವರಣದಲ್ಲಿ ಕೆಲ ಮರಗಳಿದ್ದು,ಮರದಿಂದ ಉದುರಿದ ಎಲೆಗಳು ಹಾಗೂ ಇನ್ನಿತರೆ ಕಸಗಳನ್ನು ಮಕ್ಕಳಿಗೆ ಕೈಗವಸವಾಗಲಿ, ಕಸ ಎತ್ತಲು ಅಗತ್ಯವಿರುವ ಪರಿಕರಗಳನ್ನಾಗಲಿ ನೀಡದೆ ಬರಿಗೈಯಲ್ಲಿಯೇ ಕಸ ಎತ್ತಿಸಿರುವ ಕ್ರಮವನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ. ಅದರಲ್ಲೂ ಇತ್ತೀಚಿಗೆ ಕೋವಿಡ್ ಜೆಎನ್ 1 ಪ್ರಕರಣಗಳು ಜಿಲ್ಲೆಯಲ್ಲಿಯೂ ಸಹ ಉಲ್ಬಣಗೊಳ್ಳತ್ತಿದ್ದು ಮಕ್ಕಳಿಂದ ಸ್ವಚ್ಚತೆ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದು ಕೂಡಲೇ ಸರಕಾರ ಶಾಲೆಯ ಮುಖ್ಯಶಿಕ್ಷಕರು ಹಾಗೂ ಬಿಇಓ ಅವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇತ್ತೀಚಗೆ ಕೋಲಾರ ತಾಲೂಕು ಮಾಲೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶೌಚಗುಂಡಿಗೆ ಮಕ್ಕಳನ್ನು ಇಳಿಸಿ ಸ್ವಚ್ಚಗೊಳಿಸಿದ ಘಟನೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳ ಕೈಯಿಂದಲೇ ಶಾಲಾ ಶೌಚಾಲಯ ಸ್ವಚ್ಚಗೊಳಿಸಿ ಪ್ರಕರಣ ಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸರಕಾರ,ಶಿಕ್ಷಣ ಇಲಾಖೆಯ ಮೂಲಕ ಸುತ್ತೋಲೆ ಹೊರಡಿಸಿ,ಮಕ್ಕಳ ಕೈಯಿಂದ ಯಾವುದೇ ರೀತಿಯ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಲ್ಲದೆ,ಒಂದು ವೇಳೆ ಇಂತಹ ಘಟನೆ ನಡೆದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದರು. ಆದರೆ ಈ ಸುತ್ತೊಲೆಯನ್ನು ಗಾಳಿಗೆ ತೂರಿರುವ ಉಪ್ಪಾರಹಳ್ಳಿ ಸರಕಾರಿ ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಬರಿಗೈಯಿಂದಲೇ ಶಾಲಾ ಆವರಣ ಸ್ವಚ್ಚಗೊಳಿಸಿ,ಉತ್ಪತ್ತಿಯಾದ ಕಸವನ್ನು ಬೆಂಕಿ ಹಾಕಿ ಸುಟ್ಟು ಹಾಕಿರುವುದು ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇತ್ತೀಚಗೆ ಕೋಲಾರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆದ ಶಾಲಾ ಮಕ್ಕಳಿಂದ ಶೌಚಾಲಯ,ಶೌಚಗುಂಡಿ ಸ್ವಚ್ಚ ವಿಚಾರವಾಗಿ ಸರಕಾರ ಬಹಳ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದರೂ ಸಹ ಶಿಕ್ಷಕರು,ಕರೋನ ಉಲ್ಬಣಗೊಳ್ಳುತಿರುವ ಕಾಲದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಜರುಗಿಸದೆ,ಬರಿಗೈಯಲ್ಲಿ ಪುಟ್ಟ, ಪುಟ್ಟ ಮಕ್ಕಳಿಂದ ಶಾಲಾ ಆವರಣ ಸ್ವಚ್ಚ ಮಾಡಿಸಿರುವುದು ಸರಿಯಲ್ಲ. ಅಲ್ಲದೆ ಉತ್ಪತ್ತಿಯಾದ ಕಸಕ್ಕೆ ಬೆಂಕಿ ಹಾಕಿ ಸುತ್ತಮುತ್ತಲ ಮನೆಗಳ ಜನರಿಗು ಮಾಲಿನ್ಯ ಹೊಗೆ ಹರಡುವಂತೆ ಮಾಡಿದ್ದಾರೆ.ಸರಕಾರ,ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡಲೇ ಪರಿಶೀಲಿಸಿ, ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂಬುದು ನಮ್ಮ ಆಗ್ರಹವಾಗಿದೆ
–ಶ್ರೀಮತಿ ಭಾಗ್ಯ ಉಪ್ಪಾರಹಳ್ಳಿ ನಿವಾಸಿಗಳು
ಈಗಾಗಲೇ ತಾಲೂಕಿನ ಎಲ್ಲಾ ಶಾಲೆಗಳಿಗೆ ಮಕ್ಕಳಿಂದ ಸ್ವಚ್ಚತೆ ಕೈಗೊಳ್ಳದಂತೆ ಸೂಚನೆ ನೀಡಿದ್ದೇವೆ.ಆದರೂ ಇಂತಹದೊಂದು ಘಟನೆ ನಡೆದಿರುವುದು ಗಮನಕ್ಕೆ ಬಂದಿದೆ.ಇಂದು ಕೇಸೊಂದರ ವಿಚಾರವಾಗಿ ನ್ಯಾಯಾಲಯದಲ್ಲಿದ್ದು, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಒಂದು ವೇಳೆ ಮಕ್ಕಳಿಂದ ಬರಿಗೈಯಲ್ಲಿ ಸ್ವಚ್ಚಗೊಳಿಸಿದ್ದರೆ,ಶಿಕ್ಷಕರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು. –ಡಾ.ಸೂರ್ಯಕಲಾ ಬಿಇಓ ತುಮಕೂರು ತಾಲ್ಲೂಕು