ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ… ನನ್ನ ಹೇಳಿಕೆ ತಿರುಚಿ ಬಿತ್ತರಿಸಲಾಗಿದೆ : ಕೆ.ಎನ್.ರಾಜಣ್ಣ
ತುಮಕೂರು : ದೊಡ್ಡೇರಿ ಹೋಬಳಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರೊಬ್ಬರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ದೇವೇಗೌಡರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿಲ್ಲ.ಅವರ ಸಾವನ್ನು ನಾನು ಬಯಸುವುದಿಲ್ಲ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಾರ್ಯಕ್ರಮದಲ್ಲಿ ನಾನು ಪದೇ ಪದೇ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿರುವುದನ್ನು ಗಮನಿಸಿದ ಮುಂಭಾಗದಲ್ಲಿ ಪ್ರೇಕ್ಷಕರೊಬ್ಬರು,ನಿಮಗೆ ದೇವೇಗೌಡರಿಗಿಂತ ವಯಸ್ಸಾಗಿದೆಯೇ ಸ್ವಾಮಿ ಎಂದು ಪ್ರಶ್ನಿಸಿದ ಈ ವೇಳೆ ನಾನು ಅವರು ಇಬ್ಬರು, ನಾಲ್ವರ ಸಹಾಯ ಪಡೆದು ನಡೆದಾಡಿ ಚುನಾವಣೆ ನಡೆಸುತ್ತಾರೆ. ನನ್ನಿಂದ ಆದಾಗದು ಎಂದು ಹೇಳಿದೆ. ಆದರೆ ನನ್ನ ಹೇಳಿಕೆಯನ್ನು ತಿರುಚಿ ಬಿತ್ತರಿಸಲಾಗಿದೆ.ಈ ವಿಚಾರವಾಗಿ ನಾನೇ ಖುದ್ದಾಗಿ ದೇವೇಗೌಡರನ್ನು ಭೇಟಿಯಾಗಿ ನಡೆದ ವಿಷಯಗಳನ್ನು ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.
ದೇವೇಗೌಡರ ಬಗ್ಗೆ ನನಗೆ ಆಪಾರವಾದ ಗೌರವವಿದೆ.2004ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಟಿಕೇಟ್ ನೀಡಿ, ಜ್ವರದ ನಡುವೆಯೂ ಬಂದು ಪ್ರಚಾರ ಮಾಡಿ,ನನಗೆ ರಾಜಕೀಯ ಪುನರಜನ್ಮ ನೀಡಿದವರು.ಅವರ ಸಾವನ್ನು ನಾನು ಬಯಸುವುದಿಲ್ಲ. ಆದರೆ ಕೆಲವರು ಇದೇ ವಿಚಾರವನ್ನು ಮುಂದಿಟ್ಟುಕೊಂಡು ನನ್ನ ತೇಜೋವಧೆಗೆ ಮುಂದಾಗಿದ್ದಾರೆ.ತಳಸಮುದಾಯದಕ್ಕೆ ಸೇರಿದ ನನ್ನನ್ನು ರಾಜಕೀಯ ಅಧಿಕಾರದಿಂದ ದೂರ ಇರಿಸಲು ಈ ರೀತಿಯ ಪ್ರಯತ್ನ ನಡೆಸಿದ್ದಾರೆ ಎಂದು ಕೆ.ಎನ್.ಆರ್. ಅಸಮಾಧಾನ ವ್ಯಕ್ತಪಡಿಸಿದರು.
ಮಾಧ್ಯಮಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ.ಅವರ ಹೇಳಿಕೆಗಳನ್ನು ಗಮನಿಸಿದರೆ ತಳಸಮುದಾಯಗಳು ರಾಜಕೀಯ ಅಧಿಕಾರ ಪಡೆಯುವುದನ್ನು ತಡೆಯುವ ಹುನ್ನಾರ ಅಡಗಿದೆ.ರಾಜ್ಯ ಮಟ್ಟದಲ್ಲಿ ಜೆಡಿಎಸ್‌ನವರು ಸಿದ್ದರಾಮಯ್ಯ ಅವರ ವಿರುದ್ದ ನಿಂತಂತೆ, ತುಮಕೂರು ಜಿಲ್ಲೆಯಲ್ಲಿ ನನ್ನ ವಿರುದ್ದ ಕತ್ತಿ ಮಸೆಯುತ್ತಿದ್ದಾರೆ.ಇವುಗಳಿಗೆ ಹೆದರುವುದಿಲ್ಲ. ಚುನಾವಣೆಯ ಗೆಲುವು,ಸೋಲು ಎರಡನ್ನು ನಾನು ಕಂಡಿದ್ದೇನೆ.ಅದು ಜನರ ಮೇಲೆ ನಿಂತಿರುತ್ತದೆ.ಯಾರ ಮತದಾರರ ಮನಸ್ಸು ಗೆಲ್ಲುತ್ತಾರೆ ಅವರಿಗೆ ಜಯಶಾಲಿಗಳಾ ಗುತ್ತಾರೆ.ಒಂದು ಜಾತಿಯ ಮತಗಳಿಂದ ಯಾರು ಚುನಾವಣೆ ಗೆಲ್ಲಲ್ಲು ಸಾಧ್ಯವಿಲ್ಲ.ಎಲ್ಲ ವರ್ಗದವರ ಮತಗಳ ಅಗತ್ಯವೂ ಇದೆ.ನನಗೂ ವಯಸ್ಸಾಗಿದೆ. ಹಾಗಾಗಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೇನೆ. ಆ ನಂತರ ಕರೆದು ಟಿಕೇಟ್ ನೀಡಿದರೂ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮುಖಂಡರಾದ ಕಲ್ಲಹಳ್ಳಿ ದೇವರಾಜು,ಗಂಗಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.