ತಿಪಟೂರು : ರಾಜ್ಯದ ಶಿಕ್ಷಣ ಸಚಿವರ ತವರಿನಲ್ಲಿನ ಶಾಲೆಯಲ್ಲಿ ಒಂದು ವರ್ಷದಿಂದ ಮುಖ್ಯೋಪಾಧ್ಯಯರು ಇಲ್ಲದೇ ತರಗತಿಗಳು ನಡೆದಿದ್ದು, ಬಿಸಿಯೂಟದಲ್ಲಿ ಹುಳು ಸಿಗುತ್ತಿದ್ದು, ಸ್ವಚ್ಛತೆಯಿಲ್ಲದೇ ವಿದ್ಯಾರ್ಥಿಗಳು ಮನೆಯಿಂದ ಊಟ ತರುವ ಸ್ಥಿತಿ ನಿರ್ಮಾಣವಾಗಿದೆ.
ತಿಪಟೂರು ತಾಲ್ಲೂಕಿನ ಹಳೇಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಬುಧವಾರ ಪೋಷಕರುಗಳು ಮುತ್ತಿಗೆ ಹಾಕಿ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ಹಳೇಪಾಳ್ಯದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 1 ರಿಂದ 8ನೇ ತರಗತಿವರಗೆ ಸುಮಾರು 405 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಒಟ್ಟು 14 ಮಂದಿ ಶಿಕ್ಷಕರು ಕರ್ತವ್ಯನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದಲೂ ಶಾಲೆಯ ಮುಖ್ಯೋಪಾಧ್ಯರ ಹುದ್ದೆ ಖಾಲಿ ಇದ್ದು, ಇರುವ ಶಿಕ್ಷಕರಿಗೆ ಜವಾಬ್ದಾರಿ ನೀಡಲು ಮುಂದಾದರೂ ಯಾರೊಬ್ಬರು ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ಶಾಲೆಯ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಜೊತೆಗೆ ಬಿಸಿಯೂಟ ನಿರ್ವಹಣೆ, ಸ್ವಚ್ಛತೆ ಕಣ್ಮರೆಯಾಗಿದ್ದು ಮಕ್ಕಳಿಗೆ ಮನೆಯಿಂದ ಊಟವನ್ನು ನೀಡುವ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೊದಂಡರಾಮ್ ಮಾತನಾಡಿ ಶಾಲೆಗೆ ಬರುತ್ತಿರುವ ಅನುದಾನಗಳ ಬಗ್ಗೆ ಮಾಹಿತಿ ಕೊರತೆ ಇದ್ದು, ಮುಖ್ಯಶಿಕ್ಷಕರು ಇಲ್ಲದಿರುವುದು ತೊಂದರೆಗೆ ಕಾರಣವಾಗಿದೆ.
ದಾಸ್ತಾನು ಇಟ್ಟಿರುವ ಮಳಿಗೆಯಲ್ಲಿ ಸರಿಯಾದ ಸುರಕ್ಷತೆಯಿಲ್ಲದೆ ಇರುವುದರಿಂದ ಇಲಿ ಹೆಗ್ಗಣಗಳು ತಿಂದಿರುವ ಅಕ್ಕಿ-ಗೋದಿ, ಬೇಳೆ ತರಕಾರಿಗಳಿಂದ ತಯಾರಿಸಿದ ಬಿಸಿಯೂಟವನ್ನು ನೀಡಲಾಗುತ್ತಿದೆ. ಇದರಿಂದ ಮಕ್ಕಳು ಅಸ್ವಸ್ಥರಾಗುತ್ತಿದ್ದು ಮದ್ಯಾಹ್ನಕ್ಕೆ ಮನೆಯಿಂದಲೇ ನಮ್ಮ ಮಕ್ಕಳಿಗೆ ಡಬ್ಬದಲ್ಲಿ ಊಟವನ್ನು ಕೊಡಲಾಗುತ್ತಿದೆ ಎಂದು ಪೋಷಕರು ತಮ್ಮ ಅಳಲನ್ನು ತಿಳಿಸಿದರು.
ದಾಸ್ತಾನು ಇಟ್ಟಿರುವ ಮಳಿಗೆಯಲ್ಲಿ ಸರಿಯಾದ ಸುರಕ್ಷತೆಯಿಲ್ಲದೆ ಇರುವುದರಿಂದ ಇಲಿ ಹೆಗ್ಗಣಗಳು ತಿಂದಿರುವ ಅಕ್ಕಿ-ಗೋದಿ, ಬೇಳೆಯ ಚಿತ್ರ
ಶಾಲೆಯಲ್ಲಿ ಇರುವ ಹಳೆ ಅಡುಗೆ ಮನೆ ಕೊಠಡಿಯ ಹೊರಾಂಗಣ ಚಿತ್ರ
ಪೋಷಕಿ ಪಂಕಜ ಮಾತನಾಡಿ ಸುಮಾರು ಬಾರಿ ಶಿಕ್ಷಣ ಸಚಿವರಿಗೆ ಮನವಿ ಮಾಡಿದರೂ ನಮ್ಮ ಶಾಲೆಗೆ ಮುಖ್ಯೋಪಾಧ್ಯಾಯರನ್ನು ನಿಯೋಜನೆ ಮಾಡುತ್ತಿಲ್ಲ , ನಮ್ಮ ತಾಲ್ಲೂಕಿನಲ್ಲಿ ಬಡ್ತಿ ಹೊಂದಿರುವ ಶಿಕ್ಷಕರು ಸಹ ಯಾರೂ ಸಹ ಬರುತ್ತಿಲ್ಲ ಎನ್ನುತ್ತಾರೆ.
ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ ಪ್ರಭುಸ್ವಾಮಿ ಮಾತನಾಡಿ ಇಲ್ಲಿನ ಅಡುಗೆ ಸಿಬ್ಬಂದಿಯಿಂದ ಶಾಲೆಯ ಪರಿಸರವು ಹಾಳಾಗುತ್ತಿದ್ದು ಸದ್ಯದಲ್ಲಿಯೇ ಅವರನ್ನು ಬದಲಾವಣೆ ಮಾಡಲಾಗುವುದು. ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಉಪ ಸಮಿತಿಗಳನ್ನು ರಚನೆ ಮಾಡಲಾಗುವುದು. ಕಳೆದ ಹಲವು ದಿನಗಳಿಂದ ಖಾಲಿಯಿರುವ ಮುಖ್ಯೋಪಾಧ್ಯಯರ ಹುದ್ದೆಗೆ ಶಿಕ್ಷಕರ ಕೌನ್ಸಲಿಂಗ್‌ನಲ್ಲೂ ಸಹ ಯಾವ ಶಿಕ್ಷಕರು ಈ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ, ಇದರ ಬಗ್ಗೆ ಮೇಲಾಧಿಕಾರಿಗಳಿಗೆ ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ತಂದು ಬೇಗನೆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.