2023ರ ವಿಧಾನಸಭಾ ಚುನಾವಣೆಗೆ ತುಮಕೂರು ನಗರ ಬಿಜೆಪಿ ಅಭ್ಯರ್ಥಿ ನಾನೇ : ಸೊಗಡು ಶಿವಣ್ಣ
ತುಮಕೂರು : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದೆ ಮಾಡುವುದು ಖಚಿತ ಎಂದು ಘಂಟಾಘೋಷವಾಗಿ ಸೊಗಡು ಶಿವಣ್ಣ ಹೇಳಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು 1977ರ ಜನಸಂಘದಿಂದ ಭಾರತೀಯ ಜನತಾ ಪಕ್ಷ ಕಟ್ಟಿಕೊಂಡು ಬಂದು 1994 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿ, ಸಚಿವನಾಗಿ ಜನಪರ ಕೆಲಸ ಮಾಡಿದ್ದೇನೆ, ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆಯಾಗಿದೆ. ತುಮಕೂರು ಜನತೆ ನನ್ನ ಪರವಾಗಿದ್ದಾರೆ, ಎಲ್ಲವನ್ನೂ ಪಕ್ಷ ಮತ್ತು ಜನತೆಯ ಮುಂದೆ ಇಡುತ್ತೇನೆ ಎಂದರು.
2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷ ನನಗೆ ಬಿ. ಪಾರಂ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ಯಾರು ಏನೇ ಹೇಳಿಕೊಂಡರೂ ನಾನು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ ಶಿವಣ್ಣನವರು, ನನ್ನ ಅಭಿಮಾನಿಗಳು, ಹಿತೈಶಿಗಳೇ ನನ್ನನ್ನು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದು, ಈ ಹಿಂದಿನ ನಾಲ್ಕು ಬಾರಿಯ ಅವಧಿಯಲ್ಲಿನ ಶಾಂತಿ ಮಂತ್ರ ಮತ್ತು ಕಾಯಕ ಮಂತ್ರವೇ ನನಗೆ ಶ್ರೀರಕ್ಷೆ ಎಂದರು.
ಸದ್ಯದಲ್ಲೇ ಎನ್.ಆರ್.ಕಾಲೋನಿಯಿಂದ ಜೋಳಿಗೆ ಹಿಡಿದು ಠೇವಣಿ ಸಂಗ್ರಹದ ಮತ ಭಿಕ್ಷೆಯ ಮೂಲಕ ಪ್ರಚಾರ ಪ್ರಾರಂಭಿಸುತ್ತೇನೆ ಎಂದು ತಿಳಿಸಿದರು.
ನನ್ನ ಚುನಾವಣೆಯ ಎಲ್ಲಾ ಖರ್ಚು-ವೆಚ್ಚವನ್ನು ನನ್ನ ಬೆಂಬಲಿಗರು ಅಭಿಮಾನಿಗಳು ಹಿತೈಷಿಗಳು ಭರಿಸಲಿದ್ದಾರೆ ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕೆಲವರು ರಾಜಕೀಯ ಆಸೆ-ಅಕಾಂಕ್ಷೆಗಳನ್ನಿಟ್ಟುಕೊಂಡು ಪಕ್ಷಾಂತರಿಗಳಾಗುತ್ತಾರೆ, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ನನ್ನದು ಜನಸಂಘದ ರಕ್ತ, ಆದ್ದರಿಂದ ಯಾವ ಆಸೆ, ಆಮಿಷಗಳಿಗೆ ಒಳಗಾಗಿ ಪಕ್ಷಾಂತರ ಮಾಡುವುದಿಲ್ಲ, ನಾನು ಕೊನೆಯವರಿಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಆಣೆ ಪ್ರಮಾಣದ ಬಗ್ಗೆ ಮಾತನಾಡಿದ ಅವರು ಯಾರು ಏನೇ ಆಣೆ ಪ್ರಮಾಣ ಮಾಡಿಸಿದರೂ ದೇವರಿಗೆ ತಪ್ಪು ಕಾಣಿಕೆ ಹಾಕಿ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಂತಕುಮಾರ್, ಜಯಸಿಂಹ,ಪಂಚಾಕ್ಷರಯ್ಯ,ಶಬ್ಬೀರ್, ಆಟೋ ನವೀನ್, ಚೌಡೇಶ್, ಹಾಜರಿದ್ದರು.