ತಿಪಟೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ತಾಲ್ಲೂಕಿನ ಮಂತ್ರಿಗಳ ಉದಾಸೀನತೆಯಿಂದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ತಿಪಟೂರು ಹೋರಾಟ ಸಮಿತಿ ಡಿ.14ರಂದು ತಿಪಟೂರು ತಾಲ್ಲೂಕಿನಾದ್ಯಂತ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ತಿಪಟೂರು ಹೋರಾಟ ಸಮಿತಿಯ ಅಧ್ಯಕ್ಷ ಲೋಕೇಶ್ವರ ಮಾತನಾಡಿ ರಾಜ್ಯದಲ್ಲಿ ಕೊಬ್ಬರಿ ಮತ್ತು ತೆಂಗಿನ ಕಾಯಿಗೆ ಪ್ರಸಿದ್ಧವಾಗಿರುವ ತಿಪಟೂರಿನಲ್ಲಿ ಬೆಲೆ ಕುಸಿತದಿಂದಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಿಪಟೂರು ನಗರವೇ ಜನರಿಲ್ಲದೇ ಖಾಲಿ-ಖಾಲಿಯಾಗಿದೆ. ಕೂಡಲೇ ನಫೆಡ್ ಪ್ರಾರಂಭಿಸಿ ಸರ್ಕಾರ ಪ್ರೋತ್ಸಾಹ ಧನ ನೀಡಿ ಕೊಬ್ಬರಿಯನ್ನು ಕೊಳ್ಳುವಂತಾಗಬೇಕು. ಎತ್ತಿನಹೊಳೆ ಯೋಜನೆಯೂ ತಾಲ್ಲೂಕಿನ ಉದ್ದಗಲಕ್ಕೂ ಹಾದು ಹೋಗಿದ್ದು 3 ವರ್ಷಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಸಿಗದೇ ಕಂಗಾಲಾಗಿದ್ದಾರೆ. ಕೂಡಲೇ ರೈತರಿಗೆ 3 ವರ್ಷದ ಬೆಳೆ ಪರಿಹಾರ ಧನದ ಜೊತೆಗೆ ಭೂಮಿಗೆ ವೈಜ್ಞಾನಿಕ ಬೆಲೆಯನ್ನು ನೀಡಬೇಕು ಎಂಬ ಒತ್ತಾಯಿವಿದೆ. ಕಿಬ್ಬನಹಳ್ಳಿ- ಹಿಂಡಿಸ್ಕೆರೆ ಮಧ್ಯದಲ್ಲಿನ ರಸ್ತೆ ಅಗಲೀಕರಣ ತಕ್ಷಣವೇ ಕ್ರಮ ತೆಗೆದುಕೊಳ್ಳುವ ಅಗತ್ಯವಿದ್ದು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದಿಂದ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ಅಗತ್ಯವಾಗಿದೆ. ಡಿ.14ರ ಬುಧವಾರದಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರಗೆ ಸ್ವಯಂ ಪ್ರೇರಿತ ಬಂದ್‌ಗೆ ತಾಲ್ಲೂಕಿನ ಜನತೆ ಸಹಕರಿಸಬೇಕಿದೆ. ನಗರ ಪ್ರದೇಶದಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡಬೇಕು. ಅಲ್ಲದೇ ಹೋಬಳಿ ಕೇಂದ್ರಗಳಾದ ನೊಣವಿನಕೆರೆ, ಕೆ.ಬಿ.ಕ್ರಾಸ್, ಹೊನ್ನವಳ್ಳಿಯಲ್ಲಿಯೂ ಬಂದ್‌ಗೆ ರೈತರು, ವ್ಯಾಪಾರಸ್ಥರು, ವಾಹನ ಮಾಲೀಕರು ಬೆಂಬಲ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ತ್ರಿಯಾಂಬಕ, ಹುಣಸೇಘಟ್ಟ ಗ್ರಾ.ಪಂ. ಮಾಜಿ ಅಧ್ಯಕ್ಷ ರೇಣುಕಾ ಪ್ರಸಾದ್, ನಗರಸಭೆಯ ಉಪಾಧ್ಯಕ್ಷ ಗಣೇಶ್, ಸದಸ್ಯರುಗಳಾದ ಯಮುನಾ ಧರಣೀಶ್, ಆಶ್ರೀಫಾ, ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಸವರಾಜು, ಹೋರಾಟ ಸಮಿತಿ ಮುಖಂಡರಾದ ವನಿತಾ, ಟೆಂಪೋ-ಆಟೋ ಚಾಲಕರ ಸಂಘದ ಮುಖಂಡ ಸಿದ್ದು ಈಚನೂರು, ಲಕ್ಷ್ಮೀಶ್, ಅರುಣ್, ಶಿವಶಂಕರ್, ಹಳೇಪಾಳ್ಯ ಗಿರೀಶ್, ಹೊನ್ನವಳ್ಳಿ ದಶರಥ್, ಕಿಬ್ಬನಹಳ್ಳಿ ಮಲ್ಲೇಶ್, ಗೊರಗೊಂಡನಹಳ್ಳಿ ರಾಜಶೇಖರ್, ಎಂ.ನಿಜಗುಣ ಇದ್ದರು.