ತುಮಕೂರು : ರಾಜ್ಯದ ಹಲವು ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಲಾಗಿದೆ. ಈ ಸಾಲಿನಲ್ಲಿ ತುಮಕೂರು ಜಿಲ್ಲೆಯು ಕೂಡ ಸೇರಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಬೇಡಿಕೆ ಹೆಚ್ಚಿದೆ. ಇದೇ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗವಕಾಶವನ್ನು ನೀಡಿ ವಲಸೆ ತಪ್ಪಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿಯು ಹಲವು ರೀತಿಯ ಶ್ರಮಗಳನ್ನು ಹಾಕಿದ ಫಲವಾಗಿ ಮಾನವ ದಿನಗಳ ಸೃಜನೆಯಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ನರೇಗಾ ಪ್ರಗತಿಯಲ್ಲಿ ರಾಜ್ಯದಲ್ಲೇ ತುಮಕೂರು ಮೊದಲ ಸ್ಥಾನ:-
ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಪ್ರಗತಿ ಸಾಧಿಸುವ ಉದ್ದೇಶದಿಂದ ಪ್ರತಿದಿನ ಶ್ರಮ ಹಾಕಲಾಗಿದೆ. ಇದರ ಫಲವಾಗಿ ಕಳೆದ ಮೂರು ತಿಂಗಳಿನಿಂದಲೂ ತುಮಕೂರು ಜಿಲ್ಲೆ ನರೇಗಾ ಯೋಜನೆಯಡಿ ಮಾನವ ದಿಗಳ ಸೃಜನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ.
ಗ್ರಾಮೀಣ ರೈತರಿಗೆ ಆದ್ಯತೆ:-
ಬರ ಪರಿಹಾರದ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೂಲಿ ಆಧಾರಿತ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಬರ ತಡೆಗಟ್ಟುವ ನಿಟ್ಟಿನಲ್ಲಿ ಬದು ನಿರ್ಮಾಣ ಕಾಮಗಾರಿ, ಕೂಲಿ ಆಧಾರಿತ ಸಮುದಾಯ ಕಾಮಗಾರಿಗಳಾದ ಕೆರೆ ಹೂಳು ತೆಗೆಯುವ ಕಾಮಗಾರಿಗಳು, ರೈತರ ವೈಯಕ್ತಿಕ ಜಮೀನುಗಳಲ್ಲಿ ಸಸಿ ನೆಡುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರ ಫಲವಾಗಿ ಜಿಲ್ಲೆಯಲ್ಲಿ ಬರ ನಿರ್ವಹಣೆಯ ಜೊತೆಗೆ ನರೇಗಾ ಪ್ರಗತಿಯಲ್ಲಿ ರಾಜ್ಯದಲ್ಲಿಯೇ ತುಮಕೂರು ಜಿಲ್ಲೆ ಮೊದಲ ಸ್ಥಾನಕ್ಕೆ ಜಿಗಿದಿದೆ.
ಜಿಲ್ಲೆಯಲ್ಲಿ 4.27 ಲಕ್ಷ ನರೇಗಾ ಕ್ರಿಯಾಶೀಲ ಕೂಲಿ ಕಾರ್ಮಿಕರು:-
ತುಮಕೂರು ಜಿಲ್ಲೆಯಲ್ಲಿ ಜನವರಿ 5 ರವರೆಗೆ 2.22 ಲಕ್ಷ ಕುಟುಂಬಗಳು ನರೇಗಾ ಉದ್ಯೋಗ ಚೀಟಿಯನ್ನು ಹೊಂದಿರುವ
ಕುಟುಂಬಗಳಿವೆ. ಅಲ್ಲದೆ ಒಟ್ಟು 4.27 ಲಕ್ಷ ಕ್ರಿಯಾಶೀಲ ನರೇಗಾ ಕೂಲಿ ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ.
ವಾರ್ಷಿಕ 42 ಲಕ್ಷ ಮನವ ದಿನಗಳ ಗುರಿ ತುಮಕೂರು ಜಿಲ್ಲೆಗೆ ನರೇಗಾ ಯೋಜನೆ ಅನುಷ್ಠಾನ ಮಾಡುವ ಉದ್ದೇಶದಿಂದ 42 ಲಕ್ಷ ಮಾನವ ದಿನಗಳ ಗುರಿಯನ್ನು ನಿಗದಿ ಮಾಡಲಾಗಿತ್ತು. ಡಿಸೆಂಬರ್ ಅಂತ್ಯದ ವೇಳೆಗೆ 48 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ತುಮಕೂರು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ಗ್ರಾ. ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಓಗಳಿಗೆ ಕಾರ್ಯಾಗಾರ:-
ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಹಿನ್ನೆಲೆಯಲ್ಲಿ ಸೆಪ್ಟಂಬರ್‌ನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾದ್ಯಕ್ಷರು ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೂಲಿ ಆಧಾರಿತ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಿ, ಜಿಲ್ಲೆಯ ರೈತರು ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿತ್ತು ಈ ಕಾರ್ಯಕ್ರಮವನ್ನು ಗೃಹ ಸಚಿವರು, ಸಹಕಾರ ಸಚಿವರು ಸೇರಿದಂತೆ ಜಿಲ್ಲೆಯ ವಿಧಾನ ಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ಉದ್ಘಾಟಿಸಿದ್ದರು.
ಒಟ್ಟಾರೆಯಾಗಿ 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ನರೇಗಾ ಪ್ರಗತಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿ
ಯೋಜನೆಯ ಅನುಕೂಲಗಳು ಗ್ರಾಮೀಣ ಭಾಗದ ಜನರಿಗೆ ಸಿಗಲಿ ಎಂಬುದೆ ಎಲ್ಲರ ಆಶಯವಾಗಿದೆ.
ತುಮಕೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಜನರು ಕೆಲಸವನ್ನು ಕೋರಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಬೇಕು ಮತ್ತು ಗ್ರಾಮೀಣ ರೈತರಿಗೆ ಉದ್ಯೋಗವಕಾಶ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಮಿಷನ್ 500 ಅಭಿಯಾನವನ್ನು ಕೈಗೊಳ್ಳಲಾಗಿದೆ. ಇದರಿಂದ 70 ಸಾವಿರ ಕೂಲಿ ಆಧಾರಿತ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗಿದ್ದು, ರೈತರಿಗೆ ಅನುಕೂಲ ಮಾಡಲಾಗಿದೆ. ಅಲ್ಲದೆ ಸದ್ಯ ಬರ ಇರುವುದರಿಂದ ಜನರು ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
-ಪ್ರಭು ಜಿ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯತ್, ತುಮಕೂರು