ಕನ್ನಡ ಅಸ್ಮಿತೆಗಾಗಿ ಹೋರಾಡಿದ ಮಹನೀಯರುಗಳನ್ನು ಸ್ಮರಿಸೋಣ : ಶಾಸಕ ಮಸಾಲಜಯರಾಮ್
ತುರುವೇಕೆರೆ : ಕನ್ನಡ ಉಳಿಸಿ, ಬೆಳೆಸುವ ಮಾತು ನಾಡಿನೆಲ್ಲರ ಮನೆ ಮನದ ಮಾತಾಗುವ ಮೂಲಕ ಪ್ರತಿಧ್ವನಿಸಲಿ ಎಂದು ಶಾಸಕ ಮಸಾಲಜಯರಾಮ್ ಆಶಯ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 67 ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ರಾಜ್ಯೋತ್ಸವ ಆಚರಿಸಲು ಮಹಾಮಾರಿ ಕೊರೊನೋ ಅಡ್ಡಿಪಡಿಸಿತ್ತು. ಇದೀಗ ಕೊರೊನೋ ಮರೆಯಾಗಿದ್ದು ಈ ಬಾರಿಯ ರಾಜ್ಯೋತ್ಸವ ಆಚರಣೆ ಕಳೆಗಟ್ಟಿದೆ. ಕನ್ನಡ ಅಸ್ಮಿತೆಗಾಗಿ ಹೋರಾಡಿದ ಮಹನೀಯರುಗಳನ್ನು ಸ್ಮರಿಸುವ ಮೂಲಕ ನಾಡಿನ ನೆಲ,ಜಲ, ಸಂಸ್ಕೃತಿ ಉಳಿಸುವ ಸಂಕಲ್ಪ ಮಾಡೊಣ ಎಂದರು.
ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಣೆಯೆಂಬುದು ಒಂದು ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕಿದೆ, ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಮಹಾಪುರುಷರ ಆದರ್ಶ ಪಾಲಿಸೋಣ, ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬುದನ್ನು ಹೆಮ್ಮೆಯಿಂದ ಹೇಳುವ ಮೂಲಕ ಭುವನೇಶ್ವರಿಯನ್ನು ಆರಾಧಿಸೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ ಕನ್ನಡದ ಕಣ್ವ ಬಿ.ಎಂ. ಶ್ರೀ ಯವರು ಜನ್ಮ ತಾಳೀದ್ದು ತುರುವೇಕೆರೆಯಲ್ಲಿ ಎಂಬುದು ಹೆಮ್ಮೆಯ ಸಂಗತಿ, ನಮ್ಮ ತಾಲೂಕಿನಲ್ಲಿ ಹೊಯ್ಸಳ, ಚಾಲುಕ್ಯರು ನಿರ್ಮಿಸಿದ ದೇಗುಲಗಳು ಇದ್ದು ನಮ್ಮ ಭವ್ಯ ಸಂಸ್ಕೃತಿಯನ್ನು ಸಾಕ್ಷೀಕರಿಸುತ್ತಿವೆ, ನಮ್ಮ ಮಕ್ಕಳಲ್ಲಿ ಕನ್ನಡ ಪುಸ್ತಕಗಳನ್ನು ಓದುವ, ಮಾತನಾಡುವ ಸಂಸ್ಕೃತಿಯನ್ನು ಕಲಿಸಬೇಕಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೆಡೆದ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಸೋಮನಕುಣಿತ ಸೇರಿದಂತೆ ಜಾನಪದ ಕಲಾ ಪ್ರಕಾರಗಳ ಮೆರುಗು ತಂದವು. ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಹಾಗೂ ನಾಡಿನ ಜೀವನದಿಗಳನ್ನು ಪರಿಚಯಿಸುವ ಸ್ಥಬ್ದ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವೇದಿಕೆ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಸಾಧಕರನ್ನು ತಾಲೂಕು ಆಡಳಿತದಿಂದ ಗೌರವಿಸಲಾಯಿತು.ಶಾಲಾ ಮಕ್ಕಳು ನಾಡಗೀತೆಗೆ ಹೆಜ್ಜೆ ಹಾಕುವ ಮೂಲಕ ಮನಸೂರೆಗೊಂಡರು.
ತುಮಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ಕಸಾಪ ಡಿ.ಪಿ.ರಾಜು, ಟಿ.ಎಸ್. ಬೋರೇಗೌಡ, ಪ.ಪಂ. ಅಧ್ಯಕ್ಷೆ ಆಶಾರಾಜಶೇಖರ್, ಸದಸ್ಯ ಚಿದಾನಂದ್, ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್, ಸಿ.ಐ.ಟಿ.ಯು ಸತೀಶ್, ಇ.ಓ. ಸತೀಶ್‌ಕುಮಾರ್, ಬಿ.ಇ.ಓ. ಪದ್ಮನಾಭ,ಮುಖ್ಯಾದಿಕಾರಿ ಲಕ್ಷö್ಮಣಕುಮಾರ್, ಪಿ.ಎಸ್.ಐ. ಕೇಶವಮೂರ್ತಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ನಾನಾ ಶಾಲೆಯ ಮಕ್ಕಳು, ಶಿಕ್ಷಕರುಗಳು, ನಾಗರೀಕರು ಹಾಜರಿದ್ದರು.