ದೇವನಹಳ್ಳಿ ಬಳಿ ಭೀಕರ ಅಪಘಾತ: ವಾರಣಾಸಿ ಪ್ರವಾಸಕ್ಕೆ ತೆರಳುತ್ತಿದ್ದ ತಿಪಟೂರಿನ ಮೂವರು ಮಹಿಳೆಯರ ದುರ್ಮರಣ

ತಿಪಟೂರು : ವಾರಣಾಸಿಗೆ ವಿಮಾನ ಮೂಲಕ ಧಾರ್ಮಿಕ ಪ್ರವಾಸ ಕೈಗೊಳ್ಳಲು ಹೊರಟಿದ್ದ ತಿಪಟೂರಿನ 13 ಜನರ ತಂಡವು ದುರಂತಕ್ಕೀಡಾದ ಘಟನೆ ಶನಿವಾರ ರಾತ್ರಿ ಸುಮಾರು 11:30ರ ಸಮಯದಲ್ಲಿ ದೇವನಹಳ್ಳಿ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದೆ. ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಗಂಗಮ್ಮ (38), ಜಯಮ್ಮ (65) ಹಾಗೂ ಯಶೋಧಮ್ಮ (60) ಎಂದು ಗುರುತಿಸಲಾಗಿದೆ. ಇವರು ತಿಪಟೂರು ನಗರದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ವಿದ್ಯಾನಗರ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
13 ಜನ ಪ್ರಯಾಣಿಕರ ತಂಡದಲ್ಲಿ ಮೂವರು ಮಹಿಳೆಯರು ತಮ್ಮ ಸಂಬಂಧಿಕರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರಲು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ತಿಪಟೂರಿನಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ಪರಿಣಾಮವಾಗಿ ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಅಪಘಾತದ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.



