ಇನೋವಾ ಕಾರ್ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ: ಮಗು ಸೇರಿ 8 ಮಂದಿಗೆ ಗಂಭೀರ ಗಾಯ
ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಜೋಡುಗಟ್ಟೆ ಸಮೀಪ ಇನೋವಾ ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಿಂದ ಭೀಕರ ಅಪಘಾತ ಉಂಟಾಗಿ ಒಂದು ಮಗು ಸೇರಿದಂತೆ 8 ಮಂದಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಸೇರಿರುವ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನಜೋಡುಗಟ್ಟೆ ಸಮೀಪ ಮಧ್ಯಾಹ್ನ ಮೈಸೂರಿನಿಂದ ತಿಪಟೂರು ತಾಲ್ಲೂಕಿನ ಮಣಕಿಕೆರೆ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಇನೋವಾ ಕಾರು ಹಾಗು ಹೊಸದುರ್ಗದಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇನೋವಾ ಕಾರ್ ಭಾಗಶಃ ನುಜ್ಜುಗುಜ್ಜಾಗಿದೆ.
ಅಪಘಾತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಲಾವಣ್ಯಸಿಂಗ್(23), ಗೋಪಾಲ್ ಸಿಂಗ್(30), ಶಿವಕುಮಾರ್ ಸಿಂಗ್(45), ಲಕ್ಷ್ಮೀಬಾಯ್(40), ಸರಸ್ವತಿಬಾಯ್ (70), ಸಹನಾ ಬಾಯ್(50), ತುಳಸಿ ಬಾಯ್(35) ನಾಲ್ಕು ವರ್ಷದ ಮಗು ಸ್ನೇಹಾ ಸಿಂಗ್ ಸೇರಿದಂತೆ ಎಂಟು ಮಂದಿ ಗಂಭೀರ ಗಾಯಗೊಂಡಿದ್ದು ಸ್ಥಳೀಯರಸಹಾಯದಿಂದ ಆಂಬುಲೆನ್ಸ್ ಮೂಲಕ ಬೆಳ್ಳೂರು ಕ್ರಾಸ್ ನಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ಸಂಶೋಧನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತುರುವೇಕೆರೆ ಪಿ.ಎಸ್ಐ ಸಂಗಪ್ಪ ಮೇಟಿ ಸಿಪಿಐ ಲೋಹಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ಹಲವು ತಿಂಗಳುಗಳಿಂದ ಇದೇ ಸ್ಥಳದಲ್ಲಿ ಸರಣಿ ಅಪಘಾತಗಳಾಗುತ್ತಿದ್ದು ಈ ಬಗ್ಗೆ ಮುಂಜಾಗ್ರತೆ ಕ್ರಮ ಹಾಗು ಸುರಕ್ಷತೆ ಅನುಸರಿಸುವಂತೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲವೆಂದು ಆರೋಪಿಸಿ ಸ್ಥಳೀಯರು, ಮಾಯಸಂದ್ರ ಗ್ರಾಮಸ್ಥರು, ಜನಪ್ರತಿನಿಧಿಗಳು, ಕನ್ನಡಪರ ಸಂಘಟನೆಯ ಹೋರಾಟಗಾರರು, ರೈತ ಮುಖಂಡರು, ಯುವ ಮುಖಂಡರುಗಳು ಅಪಘಾತ ಸ್ಥಳಕ್ಕೆ ಧಾವಿಸಿ ಕೆಲ ಸಮಯ ರಸ್ತೆ ತಡೆ ನಡೆಸಿ ದಿಢೀರ್ ಪ್ರತಿಭಟನೆ ನಡೆಸಿದರು.