ನೀರು ಸರಬರಾಜು ಓವರ್ ಹೆಡ್ ಟ್ಯಾಂಕ್ ಶಿಥಿಲ : ತೆರವಿಗೆ ಜ್ಯೋತಿನಗರ ಗ್ರಾಮಸ್ಥರ ಆಗ್ರಹ : ತಾಪಂ ಇಓ ಶಿವಪ್ರಕಾಶ್ ಸ್ಥಳಕ್ಕೆ ಭೇಟಿ,ಪರಿಶೀಲನೆ
ಗುಬ್ಬಿ: ತಾಲ್ಲೂಕಿನ ಚಿಕ್ಕೋನಹಳ್ಳಿ ಮಜರೆ ಜ್ಯೋತಿನಗರದ ಅಂಗನವಾಡಿ ಹಾಗೂ ಶಾಲೆಯ ಮಧ್ಯೆ ಇರುವ ನೀರು ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು ಅಪಾಯದ ಸಂಭವಿಸುವ ಮುನ್ನ ತೆರವಿಗೆ ಆಗ್ರಹಿಸಿದ ಹಿನ್ನಲೆ ಸ್ಥಳಕ್ಕೆ ತಾಪಂ ಇಓ ಶಿವಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಕ್ಕೆ ನೀರು ಸರಬರಾಜು ಮಾಡುವ ಓವರ್ ಹೆಡ್ ಟ್ಯಾಂಕ್ ಹಳೆಯದಾಗಿದೆ. ಈಗಾಗಲೇ ಕಬ್ಬಿಣ ಕಾಣುವ ಟ್ಯಾಂಕ್ ಶಿಥಿಲಾವಸ್ಥೆ ಕಂಡಿದೆ. ಈ ಬಗ್ಗೆ ಕಳೆದ ಒಂದು ವರ್ಷದಿಂದ ದೂರು ನೀಡಿದರೂ ಗ್ರಾಮೀಣಾಭಿವೃದ್ಧಿ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಇತ್ತ ಕಡೆ ಗಮನಹರಿಸಿಲ್ಲ. ಮಕ್ಕಳು, ಪೋಷಕರು ಭಯದಲ್ಲೇ ಓಡಾಡುವ ದುಸ್ಥಿತಿ ಬಂದಿದೆ. ಕೂಡಲೇ ಟ್ಯಾಂಕ್ ತೆರವಿಗೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಅವರಿಗೆ ಮನವಿ ಮಾಡಿದ್ದರು. ಈ ಹಿನ್ನಲೆ ತಾಪಂ ಇಓ ಶಿವಪ್ರಕಾಶ್ ಅವರೊಟ್ಟಿಗೆ ಚರ್ಚಿಸಿದ ಸಿದ್ದಲಿಂಗೇಗೌಡರು ಕೂಡಲೇ ಟ್ಯಾಂಕ್ ತೆರವಿಗೆ ಒತ್ತಾಯಿಸಿದರು.
ಕೂಡಲೇ ಕಾರ್ಯ ಪ್ರವೃತ್ತರಾದ ಇಓ ಶಿವಪ್ರಕಾಶ್ ಅವರು ಜ್ಯೋತಿನಗರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ಸ್ಥಳೀಯ ಜನರು ಹಾಗೂ ರೈತ ಸಂಘದ ಪದಾಧಿಕಾರಿಗಳ ಜೊತೆ ಇಲ್ಲಿನ ಸಮಸ್ಯೆ ಚರ್ಚಿಸಿದರು. ಶಾಲೆ ಮತ್ತು ಅಂಗನವಾಡಿ ಕೇಂದ್ರದ ಪರಿಸ್ಥಿತಿ ಸಹ ಅವಲೋಕಿಸಿದರು ನಂತರ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಹೇರೂರು ಗ್ರಾಪಂ ಪಿಡಿಓ ಪ್ರಶಾಂತ್ ಕುಮಾರ್ ಇತರರು ಇದ್ದರು.