ದೇವೇಗೌಡರೇ ನಿಜವಾದ ಅಹಿಂದ ನಾಯಕ : ಎಂ.ಟಿ.ಕೃಷ್ಣಪ್ಪ
ತುರುವೇಕೆರೆಯಲ್ಲಿ ಸಮರ್ಪಕ ವಿದ್ಯುತ್ ಗೆ ಆಗ್ರಹಿಸಿ ಪ್ರತಿಭಟನೆ
ತುರುವೇಕೆರೆ : ಹಿಂದುಳಿದ ವರ್ಗಕ್ಕೆ ರಾಜಕೀಯ ಮೀಸಲಾತಿ ಕಲ್ಪಿಸಿದ್ದ ಮಾಜಿ ಪ್ರಧಾನಿ ದೇವೇಗೌಡರೇ ನಿಜವಾದ ಅಹಿಂದ ನಾಯಕರು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಜೆ.ಡಿ.ಎಸ್. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಅಹಿಂದವರ್ಗದವರಿಗೆ ರಾಜಕೀಯ ಶಕ್ತಿ ತುಂಬುವ ನಿಟ್ಟಿನಲ್ಲಿ ಹೆಚ್.ಡಿ.ದೇವೇಗೌಡರು ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜಕೀಯ ಮೀಸಲಾತಿ ಜಾರಿಗೆ ತಂದಿದ್ದರು. ಬಿ.ಜೆ.ಪಿ. ನೇತೃತ್ವದ ರಾಜ್ಯ ಸರಕಾರಕ್ಕೆ ಅಹಿಂದ ವರ್ಗದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅಹಿಂದ ನಾಯಕರೆಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಅಹಿಂದ ವರ್ಗಕ್ಕೆ ನೀಡಿದ ಕೊಡುಗೆ ಶೂನ್ಯ. ಓಟ್ ಬ್ಯಾಕಿಂಗ್ ರಾಜಕಾರಣಕ್ಕಾಗಿ ಅಹಿಂದ ಹೆಸರೇಳುತ್ತಿರುವ ಸಿದ್ದರಾಮಯ್ಯನವರು ಅಹಿಂದ ನಾಯಕರೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.
ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡದ ಬೆಸ್ಕಾಂ ರೈತರ ಬದುಕಿನೊಂದಿಗೆ ಚಲ್ಲಾಟವಾಡುತ್ತಿದೆ. ಸತತ 7 ಗಂಟೆ ಮೂರು ಪೇಸ್ ವಿದ್ಯುತ್ ನೀಡುವ ಬಗ್ಗೆ ಮಾತನಾಡಿದ್ದ ರಾಜ್ಯ ಸರಕಾರ ಆಡಿದ್ದ ಮಾತನ್ನು ಮರೆತಿದೆ.ರೈತನಿಂದ ರಾಗಿ ಖರೀದಿಸಲು ಸಣ್ಣ ಹಾಗೂ ದೊಡ್ಡ ಹಿಡುವಳಿದಾರ ಎಂಬ ತಾರತಮ್ಯ ಅನುಸರಿಸುತ್ತಿದೆ. ತಾಲೂಕಿನ ರಾಗಿ ಖರೀದಿ ಕೇಂದ್ರದ ಸಿಬ್ಬಂದಿ ರಾಜಣ್ಣ ರೈತರನ್ನು ಶೋಷಿಸುತ್ತಿದ್ದಾರೆ. ರೈತರಿಂದ ರಾಗಿ ಖರೀದಿಸಿದ ನಂತರ ಚೀಲದ ಹಣವನ್ನು ನೀಡದೇ 50 ಸಾವಿರ ಚೀಲದ ಹಣವನ್ನು ಗುಳುಂ ಮಾಡುತ್ತಿದ್ದಾರೆ. ಸರಕಾರ ಈ ಕೂಡಲೇ ಎಲ್ಲಾ ರೈತರಿಂದ ರಾಗಿ ಖರೀದಿಸಬೇಕು ಹಾಗೂ ರಾಗಿ ಖರೀದಿ ಕೇಂದ್ರದ ಅವ್ಯವಹಾರಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಕಮಿಷನ್ ಶಾಸಕ :-
ನನ್ನ ಅವಧಿಯಲ್ಲಿ ತಂದಿದ್ದ 65 ಕೋಟಿ ಹಣವನ್ನು ನಾನೇ ತಂದಿದ್ದು ಶಾಸಕ ಮಸಾಲ ಜಯರಾಂ ಹೇಳಿಕೊಳ್ಳುತಿದ್ದಾರೆ. ತಾಲೂಕಿಗೆ ಒಂದು ಕಾಲೇಜು, ಶಾಲೆಯನ್ನು ನಿರ್ಮಾಣ ಮಾಡದ ಶಾಸಕರು ಗುತ್ತಿಗೆದಾರರಿಂದ ಕಮಿಷನ್ ಬೇಡಿಕೆ ಇಡುತ್ತಿದ್ದಾರೆಂಬ ದೂರಿದೆ.ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಆಡಳಿತ ಯಂತ್ರ ಹಳಿ ತಪ್ಪಿದೆ. ನೂರಾರು ಕೋಟಿಯ ಕಾಮಗಾರಿ ತಂದಿದ್ದೇನೆ ಎಂದು ಹೇಳುವ ಶಾಸಕ ಮಸಾಲಜಯರಾಮ್ ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಕಳೆದ 6 ವರ್ಷಗಳ ಅವಧಿಯಲ್ಲಿ ಜೆ.ಡಿ.ಎಸ್. ಸಹಕಾರದಿಂದ ಎಂ.ಎಲ್.ಸಿ. ಆಗಿದ್ದ ಬೆಮೆಲ್ ಕಾಂತರಾಜ್ ನನ್ನ ಅವಧಿಯ ಅಭಿವೃದ್ದಿ ಬಗ್ಗೆ ಮಾತನಾಡುತ್ತಾರೆ. ಇವರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು? ಸ್ಥಳೀಯವಾಗಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ದಿಸಲು ಅನೇಕರಿದ್ದಾರೆ. ತುರುವೇಕೆರೆಯಿಂದ ನಾನೂ ಸ್ಪರ್ದಿಸಿ ಎಂದು ಹೇಳುವ ಕಾಂತರಾಜ್ ಅವರ ತವರು ನೆಲೆಯಲ್ಲಿ ಸ್ಪರ್ದಿಸಿ ಗೆಲ್ಲಲಿ ಎಂದು ಸವಾಲು ಹಾಕಿದ ಅವರು. ಕಾಂಗ್ರೇಸ್ ಪಕ್ಷ ತುರುವೇಕೆರೆಯಲ್ಲಿ 20 ವರ್ಷ ಗೆಲ್ಲಲ್ಲ ಎಂದು ಭವಿಷ್ಯ ನುಡಿದರು.
ರಾಜ್ಯ ಯುವ ಜೆ.ಡಿ.ಎಸ್. ಪ್ರಧಾನಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್ ಮಾತನಾಡಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ದೂರದೃಷ್ಟಿಯ ಫಲವಾಗಿ ಅನೇಕ ಶಾಲಾ ಕಾಲೇಜುಗಳು, ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದವು. ಹಾಲಿ ಶಾಸಕ ಮಸಾಲಜಯರಾಮ್ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ದೂರಿದ ಅವರು 2023 ಕ್ಕೆ ಎಂ.ಟಿ.ಕೃಷ್ಣಪ್ಪನವರು ಈ ಕ್ಷೇತ್ರದ ಶಾಸಕರಾಗುತ್ತಾರೆ. ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿಯಾಗ್ತಾರೆಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್. ಅಧ್ಯಕ್ಷ ಸ್ವಾಮಿ, ಯುವ ಘಟಕದ ಅಧ್ಯಕ್ಷ ರಮೇಶ್, ಚಂದ್ರೇಶ್, ಯೋಗೀಶ್ ವೆಂಕಟಾಪುರ, ಮಹಿಳಾಘಟಕದ ಅಧ್ಯಕ್ಷೆ ಲೀಲಾವತಿ,ಹಿಂಧುಳಿದ ವರ್ಗಗಳ ಅಧ್ಯಕ್ಷಜಪ್ರುಲ್ಲಾಖಾನ್, ಮುಖಂಡರಾದ ಅಮ್ಮಸಂದ್ರಸಿದ್ದಗಂಗಯ್ಯ, ಬೋರಪ್ಪನಹಳ್ಳಿಕುಮಾರ, ದೊಡ್ಡೇಗೌಡ, ವಿಜಯೇಂದ್ರ, ಬಸವರಾಜು, ಮಲ್ಲಾಘಟ್ಟರವಿ, ಸೇರಿದಂತೆ ಇತರರಿದ್ದರು.