ಬಸ್ ಟಾಪ್ ಮೇಲೆ ಪ್ರಯಾಣಿಸದಂತೆ ಕ್ರಮವಹಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ : ಸಚಿವ ಅರಗ ಜ್ಞಾನೇಂದ್ರ
ತುಮಕೂರು : ಪ್ರಯಾಣಿಕರು ಬಸ್ಸಿನ ಟಾಪ್ ಮೇಲೆ ಪ್ರಯಾಣಿಸದಂತೆ ಸೂಕ್ತ ಕ್ರಮ ವಹಿಸಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಪಾವಗಡ ತಾಲೂಕು ಪಳವಳ್ಳಿ ಕಟ್ಟೆ ಕೆರೆ ಬಳಿ ಶನಿವಾರ ಸಂಭವಿಸಿದ ಬಸ್ ಅವಘಡದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾದ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಟಾಪ್ ಮೇಲೆ ಸೇರಿದಂತೆ ಬಸ್ಸಿನಲ್ಲಿ ಹೆಚ್ಚಿನ ಜನ ಪ್ರಯಾಣಿಸುತ್ತಿದ್ದುದರಿಂದ ಚಾಲಕನ ನಿಯಂತ್ರಣ ತಪ್ಪಿ ಭೀಕರ ದುರಂತ ಸಂಭವಿಸಿದೆ. ಯಾವುದೇ ಕಾರಣಕ್ಕೂ ಟಾಪ್ ಮೇಲೆ ಕೂತು ಪ್ರಯಾಣಿಸದಂತೆ ಎಚ್ಚರವಹಿಸಬೇಕೆಂದ ಅವರು ಘಟನೆ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಪಾವಗಡದ ಪಳವಳ್ಳಿಕಟ್ಟೆ ಬಳಿ ನಡೆದ ರಸ್ತೆ ಅವಘಡದಲ್ಲಿ ಪೋತಗಾನಹಳ್ಳಿ ಗ್ರಾಮದ ಅಕ್ಕ-ತಂಗಿಯರಾದ ಅಮೂಲ್ಯ(18) ಹಾಗೂ ಹರ್ಷಿತ, ವೈ.ಎನ್. ಹೊಸಕೋಟೆಯ ಕಲ್ಯಾಣ(22), ಸೂಲನಾಯಕನಹಳ್ಳಿಯ ಅಜಿತ್‌ಕುಮಾರ್(22), ಬೆಸ್ತರಹಳ್ಳಿ ಶಾನ್‌ವಾಜ್(20), ನೀಲಮಮ್ಮನಹಳ್ಳಿಯ ದಾದಾವಳಿ(18) ಸೇರಿದಂತೆ 6 ಮಂದಿ ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ 5 ಲಕ್ಷ ರೂ.ಗಳ ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಸಕಾಲಕ್ಕೆ ತಲುಪಿದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಬಹುದಾಗಿದ್ದ ಸಾವು-ನೋವುಗಳನ್ನು ತಪ್ಪಿಸಲಾಗಿದ್ದು, ಗಾಯಗೊಂಡವರನ್ನು ಬೆಂಗಳೂರು, ತುಮಕೂರು ಮತ್ತು ಪಾವಗಡ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.