ತುಮಕೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಲ್ಲಿಯವರೆಗೆ ಶಾಸಕರ ಬೆಂಬಲ,ಹೈಕಮಾಂಡ್ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕೆ 5 ವರ್ಷ ಪೂರೈಸಬಾರದು.ಮುಖ್ಯಮಂತ್ರಿಗಳಿಗೆ ಶಾಸಕರ ಬೆಂಬಲ,ಪಕ್ಷದ ಹೈಕಮಾಂಡ್ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಅವರೇ ಮುಖ್ಯಮಂತ್ರಿಗಳಾಗಿ ಇರುತ್ತಾರೆ ಎಂದರು.
ಈಗಾಗಲೇ ಮೂರು ಡಿಸಿಎಂ ನೇಮಕದ ವಿಚಾರವನ್ನು ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರ ಮುಂದೆ ಪ್ರಸ್ತಾಪ ಮಾಡಿದ್ದೇವೆ.ಇನ್ನು ಮುಂದೆ ಈ ಸಂಬಂಧ ಯಾರು ತೀರ್ಮಾನ ತೆಗೆದುಕೊಳ್ಳುತ್ತಾರೋ ಅವರ ಮುಂದೆ ಈ ವಿಚಾರ ಪ್ರಸ್ತಾಪ ಮಾಡಿದರೆ ಸೂಕ್ತ ಎನ್ನುವುದು ನನ್ನ ಭಾವನೆ.ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯ ಗಾಂಧಿ,ರಾಹುಲ್‌ಗಾಂ ಧಿಯವರ ಮುಂದೆ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡುತ್ತೇವೆ. ನಂತರ ಅವರು ತೀರ್ಮಾನ ಕೈಗೊಳ್ಳು ತ್ತಾರೆ.ಹೊಸದಾಗಿ ಡಿಸಿಎಂ ಆಗುವವರು,ಹಾಲಿ ಡಿಸಿಎಂ ಅವರ ಅಧಿಕಾರವನ್ನು ಕಿತ್ತುಕೊಳ್ಳಲ್ಲ ಎಂದು ಕೆ.ಎನ್.ರಾಜಣ್ಣ ನುಡಿದರು.
ಕೊಬ್ಬರಿ ಬೆಲೆ: ಕೇಂದ್ರ ಹೆಚ್ಚಳ ಮಾಡಲಿ:ಕೇಂದ್ರ ಸರಕಾರ ಮೊದಲು ಕ್ವಿಂಟಲ್ ಕೊಬ್ಬರಿಗೆ ಕೊಬ್ಬರಿ 12 ಸಾವಿರ ರೂ. ಬೆಲೆ ನೀಡಲಿ. ನಂತರ ರಾಜ್ಯ ಸರಕಾರ 3 ಸಾವಿರ ಸೇರಿಸಿ ಕ್ವಿಂಟಾಲ್‌ಗೆ 15 ಸಾವಿರ ರೂ. ನೀಡುತ್ತದೆ.ನಫೆಡ್ ಮೂಲಕ 15 ಸಾವಿರಕ್ಕೆ ರೈತರಿಂದ ಕೊಬ್ಬರಿ ಖರೀದಿಸಲು ಕೇಂದ್ರ ಸರಕಾರ ಪ್ರಕ್ಯೂರ್‌ಮೆಂಟ್ ಮಾಡಲು ಅನುಮತಿ ನೀಡಬೇಕು. ಪ್ರಕ್ಯೂರ್‌ಮೆಂಟ್ ಮಾಡಿದರೆ ಕಳೆದ ಬಾರಿಯಂತೆ 15 ಸಾವಿರ ರೂ.ಗಳಿಗೆ ರೈತರಿಂದ ನಫೆಡ್ ಮೂಲಕ ಕೊಬ್ಬರಿ ಖರೀದಿ ನಡೆಯಲಿದೆ.ನಮ್ಮ ಸರಕಾರ ಸದಾ ರೈತರು, ಬಡವರ ಪರವಾಗಿದೆ ಎಂದರು.
ಕನ್ನಡಿಗರಿಗೆ ಮಾಡಿದ ಅಪಮಾನ: ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕಳೆದ ವರ್ಷವೂ ಟ್ಯಾಬ್ಲೋನಲ್ಲಿ ನಾರಾಯಣ ಗುರುಗಳ ಭಾವಚಿತ್ರ ನಿರಾಕರಣೆ ಮಾಡಲಾಗಿತ್ತು. ಜನರು ಇದಕ್ಕೆ ಪ್ರತಿಕ್ರಿಯೆ ಸಹ ನೀಡಿದ್ದರು. ರಾಷ್ಟಿçÃಯ ಹಬ್ಬಗಳಲ್ಲಿ ಸಮಾಜ ಸುಧಾಕರಿಗೆ ಅನ್ಯಾಯ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ.ಮುಂದಿನ ವರ್ಷಗಳಲ್ಲಿ ಗೂಡ್ಸೆ ಟ್ಯಾಬ್ಲೋ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.ತಳಸಮುದಾಯದಿಂದ ಬಂದಿರುವ ಸಮಾಜ ಸುಧಾರಕ ನಾರಾಯಣಗುರುಗಳ ನಿರಾಕರಣೆ ಮಾಡಿರುವುದು ಕನ್ನಡಿಗರಿಗೆ ಮಾಡಿರುವ ಘೋರ ಅಪಮಾನ ಎಂದರು.
ಹೆಚ್‌ಡಿಕೆಗೆ ತಿರುಗೇಟು: ನಮ್ಮ ಕಾಂಗ್ರೆಸ್ ದಲಿತರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿಲ್ಲ. ಎಲ್ಲ ಬಡವರ ಪರವಾಗಿ ನಮ್ಮ ಸರಕಾರ ಕೆಲಸ ಮಾಡುತ್ತಿದೆ.ಬಡವರು,ದಲಿತರು ಸೇರಿದಂತೆ ಎಲ್ಲ ವರ್ಗದ ಶೋಷಿತರ ಪರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೆ.ಎನ್. ರಾಜಣ್ಣ ಅವರು, ಕುಮಾರಸ್ವಾಮಿ ಯಾರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ನಾವು ಇನ್ನೊಬ್ಬರ ಕಡೆ ಒಂದು ಬೊಟ್ಟು ಮಾಡಿ ತೋರಿಸಿ ಟೀಕೆ ಮಾಡಿದರೆ ಇನ್ನು ಮೂರು ಬೊಟ್ಟುಗಳು ನಮ್ಮ ಕಡೆ ತೋರಿಸುತ್ತವೆ. ಇದನ್ನು ನಾವುಗಳು ಬೇರೆಯವರ ಬಗ್ಗೆ ಮಾತನಾಡುವ ಮುನ್ನ ಅರ್ಥ ಮಾಡಿಕೊಳ್ಳಬೇಕು.ಕಾಂಗ್ರೆಸ್ ಪಕ್ಷ ಸಮುದ್ದ ಇದ್ದಂತೆ. ಸಮುದ್ರಕ್ಕೆ ಶುದ್ಧ ಗಂಗಾ ನದಿಯ ನೀರು ಹರಿದು ಬರುತ್ತದೆ. ಹಾಗೆಯೇ ಚರಂಡಿ ನೀರು ಸಹ ಬರುತ್ತದೆ. ಹಾಗಾಗಿ ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮುದ್ದಹನುಮೇಗೌಡ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಯಾರೇ ಬಂದರೂ ಸ್ವಾಗತಿಸುತ್ತೇವೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇವೆ. ಮುದ್ದಹನುಮೇಗೌಡರು ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ಮಾಡಲು ನನ್ನನ್ನು ಭೇಟಿ ಮಾಡಿಲ್ಲ. ಬ್ಯಾಂಕ್‌ನಿಂದ ಸಾಲ ಪಡೆಯುವ ವಿಚಾರವಾಗಿ ಚರ್ಚಿಸಲು ಭೇಟಿ ಮಾಡಿದ್ದಾರೆ. ಇದಕ್ಕೆ ಯಾವುದೇ ರೀತಿಯ ರಾಜಕೀಯ ಲೇಪ ಬಳಿಯುವ ಅವಶ್ಯಕತೆ ಇಲ್ಲ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ನಾನು ಇಂದು ಸಹಕಾರ ಸಚಿವ ಕೆ.ಎನ್. ರಾಜಣ್ಣನವರನ್ನು ಭೇಟಿ ಮಾಡಿರುವುದು ಸಾಲ ಪಡೆಯುವ ವಿಚಾರವಾಗಿ ಚರ್ಚಿಸಲು ಅಷ್ಟೇ.ಯಾವುದೇ ರಾಜಕೀಯ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್. ನಿಂಗಪ್ಪ ಉಪಸ್ಥಿತರಿದ್ದರು.