ಜಿಲ್ಲೆತುಮಕೂರುಸುದ್ದಿ

ಎಸ್.ಸಿ, ಎಸ್ಟಿ ಸಾಲದ ಅರ್ಜಿಗಳ ಅನಗತ್ಯ ವಿಳಂಬ ಸಹಿಸಲು ಸಾಧ್ಯವಿಲ್ಲ : ಸಿಇಓ ಜಿ.ಪ್ರಭು

ತುಮಕೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಸಾಲಸೌಲಭ್ಯದ ಅರ್ಜಿಗಳನ್ನು ಸಕಾರಣವಿಲ್ಲದೆ ಪೇಡಿಂಗ್ ಇಟ್ಟುಕೊಳ್ಳುವ ಬ್ಯಾಂಕುಗಳ ವಿರುದ್ದ ಅಕ್ಟಾಸಿಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲು ಎಸ್.ಎಲ್.ಬಿ.ಸಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಪಂಚಾಯಿತಿ ಸಿಇಓ ಜಿ.ಪ್ರಭು ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 2023-24 ಸಾಲಿನ ಬ್ಯಾಂಕುಗಳ ಸಹಕಾರದಿಂದ ಜಾರಿಯಾಗುವ ನಡೆಯುವ ಸರಕಾರಿ ಯೋಜನೆಗಳು ಹಾಗೂ ವಿವಿಧ ಸಾಲ ಸೌಲಭ್ಯಗಳ ಪ್ರಗತಿ ಪರಿಶೀಲನಾ ಸಭೆ ಮತ್ತು ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಅಂಬೇಡ್ಕರ್ ಅಭಿವೃದ್ದಿ ನಿಗಮ,ಆದಿ ಜಾಂಭವ ಅಭಿವೃದ್ದಿ ನಿಗಮ, ವಾಲ್ಮೀಕಿ ಅಭಿವೃದ್ದಿ ನಿಗಮ ಸೇರಿದಂತೆ ಚಾಲ್ತಿಯಲ್ಲಿರುವ 24 ನಿಗಮಗಳಿಂದ ಬರುವ ಸರಕಾರಿ ಯೋಜನೆಗಳ ಬಗ್ಗೆ ಬ್ಯಾಂಕುಗಳ ನಿರ್ಲಕ್ಷ ವಹಿಸಿದರೆ,ಸಿಇಓಗಳ ಸಭೆಯಲ್ಲಿ ನೀಡಿರುವ ನಿರ್ದೇಶನದಂತೆ ಸದರಿ ಬ್ಯಾಂಕುಗಳ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದು ಅನಿವಾರ್ಯ ಎಂದರು.
ಸರಕಾರದ ಯೋಜನೆಯಾದ ಸಾರಥಿ ಯೋಜನೆಯಲ್ಲಿ ಸರಕಾರವೇ ಒಂದು ಯೂನಿಟ್‌ಗೆ 3.50 ಲಕ್ಷ ರೂ ಸಬ್ಸಿಡಿ ನೀಡಲಿದೆ. ಹೀಗಿದ್ದು 6-7 ಲಕ್ಷ ಸಾಲ ನೀಡಲು ನಿಮಗಿರುವ ಕೊರತೆ ಏನು ?,ವಾಹನವೂ ಕೂಡ ಬ್ಯಾಂಕ್ ಹೆಸರಿಗೆ ಇರುತ್ತದೆ. ಇಷ್ಟಿದ್ದೂ ಕೂಡ ಐದು ತಿಂಗಳಿನಿಂದ ಒಂದುವರೆ ವರ್ಷದವರೆಗೆ ಅರ್ಜಿಯನ್ನು ಪೆಡಿಂಗ್ ಉಳಿಸಿಕೊಂಡರೇ ನಾವು ಯಾವ ತೀರ್ಮಾನಕ್ಕೆ ಬರಬೇಕು ಎಂದು ಪ್ರಶ್ನಿಸಿದ ಸಿಇಓ ಅವರು,ಬಾಕಿ ಇರುವ ಪ್ರಕರಣಗಳಲ್ಲಿ ಆರ್ಹರಿರುವವರನ್ನು ಮುಂದಿನ 10 ದಿನದೊಳಗೆ ಕ್ಲಿಯರ್ ಮಾಡದಿದ್ದರೆ,ನಿಗಮಗಳಿಂದ ವರದಿ ಪಡೆದು,ಅಗತ್ಯ ಕ್ರಮಕ್ಕೆ ಶಿಫಾರಸ್ಸು ಮಾಡಲಿದ್ದೇನೆ. ಯೋಜನೆಗಳಿ ರುವುದೇ ಬಡಜನರಿಗೊಸ್ಕರ.ಅರ್ಥಿಕವಾಗಿ ದುರ್ಬಲರನ್ನು ಸರಕಾರದ ಯೋಜನೆಗಳ ಮೂಲಕ ಸಬಲರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಅಧಿಕಾರಿಗಳ ಜೊತೆಗೆ, ಬ್ಯಾಂಕುಗಳು ಕೈಜೋಡಿಸಬೇಕಿದೆ ಎಂದು ಜಿ.ಪ್ರಭು ನುಡಿದರು.

 

ಕೃಷಿಕರಿಗೆ ನೀಡುವ ಸಾಲದಲ್ಲಿ ನಿಗಧಿತ ಗುರಿಗಿಂತ 500 ರೂ ಕಡಿಮೆ ನೀಡಲಾಗಿದೆ.ಆದರೆ ಉದ್ದಿಮೆ ಮಾಡುವವರಿಗೆ, ವ್ಯಾಪಾರಸ್ಥರಿಗೆ ನಿಗಧಿತ ಗುರಿಗಳಿಗಿಂತ ಹೆಚ್ಚು ಸಾಲ ಮಂಜೂರು ಮಾಡಲಾಗಿದೆ.ಕರ್ನಾಟಕದಲ್ಲಿ ಕೃಷಿಯೂ ಒಂದು ಪ್ರಮುಖ ಅಂಶ.ಹಾಗಾಗಿ ಕೃಷಿ ವಲಯಕ್ಕೆ ಸಾಲವನ್ನು ಪ್ರಮುಖ ಅದ್ಯತಾ ವಲಯವಾಗಿ ಬ್ಯಾಂಕುಗಳು ಪರಿಗಣಿಸಬೇಕೆಂದ ಸಿಇಓ ಪ್ರಭು ಅವರು,ಕೃಷಿ,ಎಂ.ಎಸ್.ಎಂ.ಇ, ಪ್ರಧಾನಮಂತ್ರಿ ಸ್ವನಿಧಿ ಯೋಜನೆಗಳ ಬಗ್ಗೆ ಖಾಸಗಿ ಬ್ಯಾಂಕುಗಳು ತೀವ್ರ ನಿರ್ಲಕ್ಷ ತಾಳಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ.ಈ ನೆಲದ ಕಾನೂನಿಗೆ ಬದ್ದತೆ ತೋರಿಸಬೇಕು.ಇದೇ ರೀತಿಯ ನಿರ್ಲಕ್ಷ ಮುಂದುವರೆದರೆ ನಿಮ್ಮ ತಾತ್ಸರವನ್ನು ಸಾರ್ವಜನಿಕರ ಮುಂದೆ ಇಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಭಾರತೀಯ ರಿಸರ್ವ ಬ್ಯಾಂಕ್‌ನಿಯಮದಂತೆ ಸಾರ್ವಜನಿಕರಿಗೆ 10 ಲಕ್ಷದವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಸಾಲ ನೀಡಬೇಕು.ಆದರೆ ಕೆಲ ಬ್ಯಾಂಕುಗಳು ನಿರ್ಲಕ್ಷ ತೋರಿವೆ.ಬ್ಯಾಂಕ್ ಮ್ಯಾನೇಜರ್‌ಗಳ ಸಹ ಸರಕಾರದ ಯೋಜನೆಗಳೆಂದರೆ ಗಮನವನ್ನೇ ನೀಡುತ್ತಿಲ್ಲ.ಕೃಷಿ,ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅರ್ಜಿಗಳು ಹಾಗೂ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮಾ ಅರ್ಜಿಗಳು ಸಹ ವಿಲೇವಾರಿಯಾಗದೆ ಬಾಕಿ ಇವೆ.ಹಾಗಾಗಿ ಇಲಾಖೆಗಳ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ,ಎಲ್ಲಾ ಮಾಹಿತಿಯೊಂದಿಗೆ ವರದಿ ಮಾಡಿ, ಇಲ್ಲದಿದ್ದರೆ ನಿಮ್ಮ ವಿರುದ್ದ ಶಿಸ್ತು ಕ್ರಮವಾಗಲಿದೆ.ಜನವರಿ 23ರಂದು ಮತ್ತೊಂದು ಸಭೆಯಿದ್ದುಮ, ಅಷ್ಟರೊಳಗೆ ಬಾಕಿ ಇರುವ ಅರ್ಹರಿಗೆ ಸಾಲ ಸೌಲಭ್ಯ ನೀಡಲು ಅಂತಿಮ ಗಡುವು ನೀಡಿದರು.
ಜನವರಿ 29 ರಂದು ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸಿ ಸುಮಾರು 800 ಕೋಟಿ ರೂಗಳ ವಿವಿಧ ಸವಲತ್ತುಗಳನ್ನು ವಿತರಿಸುತಿದ್ದು,ಬ್ಯಾಂಕುಗಳು ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ.ಸರಕಾರ ಸಹ ಇಂತಹ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಅರ್ಹರ ಅರ್ಜಿಗಳ ವಿಳಂಬ ಮಾಡಿದರೆ ಯಾವ ಮುಲಾಜಿಗೆ ಒಳಗಾಗದೆ ಅಂತಹ ಬ್ಯಾಂಕುಗಳ ವಿರುದ್ದ ಎಸ್.ಎಲ್.ಬಿ.ಸಿಗೆ ವರದಿ ನೀಡುವುದಾಗಿ ಸಿ.ಇ.ಓ ಜಿ.ಪ್ರಭು ತಿಳಿಸಿದರು.
ಇದೇ ವೇಳೆ ನಬಾರ್ಡ್ನವರು ಹೊರತಂದಿರುವ ಮಹಿಳಾ ಸಬಲೀಕರಣದ ಮಹಿಳಾ ಮಾರ್ಟ್ ತೆರೆಯಲು 15 ಲಕ್ಷ ರೂಗಳ ಸಾಲ ಸೌಲಭ್ಯ ಕುರಿತು ಕಿರು ಹೊತ್ತಿಗೆಯನ್ನು, ಹಾಗು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಿಂದ ತಂದಿರುವ ಕ್ಯಾಲೆಂಡರ್‌ನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ನಬಾರ್ಡ್ ಅಧಿಕಾರಿ ಶ್ರೀಮತಿ ಪ್ರಭಾ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಪ್ರಕಾಶ್,ಜಿಲ್ಲಾ ಪಂಚಾಯಿಸಿ ಉಪ ಕಾರ್ಯದರ್ಶಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker