ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತುಮಕೂರು ವಿಭಾಗದ ವತಿಯಿಂದ ಕರ್ನಾಟಕ “ನಮ್ಮ ಕಾರ್ಗೋ-ಟ್ರಕ್ ಸೇವೆ(ಲಾಜಿಸ್ಟಿಕ್)”ಯನ್ನು ಆರಂಭಿಸಿದೆ. ಈಗಾಗಲೇ ಸಾರ್ವಜನಿಕ ಸೇವೆಯಲ್ಲಿ ಮೈಲುಗಲ್ಲು ಸಾಧಿಸಿರುವ ನಿಗಮವು “ನಿಮ್ಮ ವಿಶ್ವಾಸ-ನಮ್ಮ ಕಾಳಜಿ” ಎಂಬ ಧ್ಯೇಯದೊಂದಿಗೆ ಹೊಸದಾಗಿ ಲಾಜಿಸ್ಟಿಕ್ ಸೇವೆಯನ್ನು ಪ್ರಾರಂಭಿಸಿದೆ.
ಅತೀ ಕಡಿಮೆ ದರದಲ್ಲಿ ಲಾಜಿಸ್ಟಿಕ್ ಸೇವೆ:-
ಸಾರ್ವಜನಿಕ ಸಾರಿಗೆಯಲ್ಲಿರುವ ತನ್ನ ಪ್ರಾಬಲ್ಯವನ್ನು ಆರ್ಥಿಕವಾಗಿ ಬಲಗೊಳಿಸಲು ರಾಜ್ಯ ರಸ್ತೆ ಸಾರಿಗೆ ನಿಗಮವು “ನಮ್ಮ ಕಾರ್ಗೋ” ಹೆಸರಿನಿಂದ ಲಾಜಿಸ್ಟಿಕ್ ಸೇವೆಯನ್ನು ಪ್ರಾರಂಭಿಸಿ ತನ್ನ ಬಸ್ಸುಗಳಲ್ಲಿ ಪಾರ್ಸಲ್‌ಗಳನ್ನು ಸಾಗಿಸುತ್ತಿದ್ದು, ಈ ಯೋಜನೆಯನ್ನು ಮತ್ತೊಂದು ಹಂತಕ್ಕೆ ಅಭಿವೃದ್ಧಿಪಡಿಸುವ ಸಲುವಾಗಿ ನಿಗಮವು ತನ್ನ ಗ್ರಾಹಕರಿಗಾಗಿ ಅತೀ ಕಡಿಮೆ ದರದಲ್ಲಿ “ನಮ್ಮ ಕಾರ್ಗೋ-ಟ್ರಕ್ ಸೇವೆ(ಲಾಜಿಸ್ಟಿಕ್)”ಯನ್ನು ಪರಿಚಯಿಸುತ್ತಿದೆ.
ಸುರಕ್ಷಿತ ಸರಕು ಸಾಗಣೆಗೆ ಜಿಪಿಎಸ್ ಟ್ರಾö್ಯಕಿಂಗ್ ವ್ಯವಸ್ಥೆ:-
ಈ ಸೇವೆಯಡಿ ಗ್ರಾಹಕರ ಸರಕುಗಳನ್ನು ಟ್ರಕ್‌ಗಳ ಮೂಲಕ ರಾಜ್ಯ ವ್ಯಾಪ್ತಿ ಸುರಕ್ಷತೆ, ವಿಶ್ವಾಸಾರ್ಹ ಹಾಗೂ ವೇಗವಾಗಿ ಸಾಗಿಸಲಾಗುವುದು. ಈ ಟ್ರಕ್‌ಗಳು ಮುಚ್ಚಲಾದ ಕಂಟೈನರ್ ಮಾದರಿಯ 14ಅ x 7ಅ x 7ಅ ಅಳತೆಯದ್ದಾಗಿದ್ದು, ಬಲವಾದ ನೆಟ್‌ವರ್ಕ್ ಹಾಗೂ ವಿಶ್ವಾಸಾರ್ಹ ಸಿಬ್ಬಂದಿ ವರ್ಗವನ್ನು ಒಳಗೊಂಡಿದೆ. ಸರಕುಗಳನ್ನು ಸುರಕ್ಷಿತವಾಗಿ ಸರಿಯಾದ ಸಮಯಕ್ಕೆ ಸಾಗಿಸಲು ಜಿಪಿಎಸ್ ಟ್ರಾö್ಯಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
6 ಟನ್ ಸರಕು ಸಾಗಣೆ ಸಾಮರ್ಥ್ಯದ ವಾಹನ:-
ತುಮಕೂರು ವಿಭಾಗದಲ್ಲಿ 6 ಟನ್ ಸರಕು ಸಾಗಣೆ ಸಾಮರ್ಥ್ಯದ 2 ವಾಹನ (ಟ್ರಕ್) ಸದಾ ಲಭ್ಯವಿರುತ್ತದೆ. ನಿಗಮದಿಂದ ಗ್ರಾಹಕರಿಗೆ ಸರಕು ಸಾಗಣೆ ವ್ಯವಸ್ಥೆಯನ್ನು ಒಡಂಬಡಿಕೆಯ ಮೂಲಕ ಕಲ್ಪಿಸಲಾಗುವುದು. ಗ್ರಾಹಕರ ಅಗತ್ಯತೆಗನುಗುಣವಾಗಿ ಟ್ರಕ್ ಸೇವೆ ಒದಗಿಸಲಿದ್ದು, ಆಸಕ್ತ ಗ್ರಾಹಕರು ತಮ್ಮ ಅಗತ್ಯತೆಯ ಮಾಹಿತಿ/ವಿವರಗಳನ್ನು ಒದಗಿಸಬೇಕು. ಪ್ರಸ್ತುತ ಈ ಟ್ರಕ್ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆಯಿಂದ ಕರ್ನಾಟಕದ ವಿವಿಧ ಸ್ಥಳಗಳಿಗೆ ಲಭ್ಯವಿರುತ್ತದೆ.
ಸಾಗಣೆ ದರ ನಿಗಧಿ:-
ಟ್ರಕ್ ಸೇವೆಗಾಗಿ 1 ರಿಂದ 100 ಕಿ.ಮೀ.ವರೆಗೆ ಪ್ರತಿ ಕಿ.ಮೀ. ದರ 50 ರೂ.ಗಳಂತೆ ಕನಿಷ್ಠ 100 ಕಿ.ಮೀ. (ಗರಿಷ್ಠ 12 ಗಂಟೆ)ವರೆಗೆ ಕನಿಷ್ಠ 5,000 ರೂ.ಗಳನ್ನು ನಿಗಧಿಪಡಿಸಲಾಗಿದೆ. 1 ರಿಂದ 200 ಕಿ.ಮೀ.ವರೆಗೆ ಪ್ರತಿ ಕಿ.ಮೀ. ದರ 40 ರೂ.ನಂತೆ ಕನಿಷ್ಠ 200 ಕಿ.ಮೀ.(24 ಗಂಟೆ)ವರೆಗೆ 8,000 ರೂ. ಹಾಗೂ 200 ಕಿ.ಮೀ. ಮೇಲ್ಪಟ್ಟ ಹೆಚ್ಚುವರಿ ಕಿ.ಮೀ.ಗೆ ಪ್ರತಿ ಕಿ.ಮೀ. ದರ 35 ರೂ. (ನಿರ್ಗಮನದ ಸಮಯದಿಂದ 24 ಗಂಟೆ ಅವಧಿ)ನಂತೆ ಕನಿಷ್ಠ 8000 ರೂ.ಗಳ ದರವನ್ನು ನಿಗಧಿಪಡಿಸಲಾಗಿದೆ
ಲಾಜಿಸ್ಟಿಕ್ ಸೇವೆ ಈಗಾಗಲೇ ಡಿಸೆಂಬರ್ 23ರಿಂದ ಪ್ರಾರಂಭವಾಗಿದ್ದು, ಸಾರ್ವಜನಿಕರು/ಉದ್ಯಮಿಗಳು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಚಂದ್ರಶೇಖರ್ ಮನವಿ ಮಾಡಿದ್ದಾರೆ.
ವರದಿ: ಆರ್. ರೂಪಕಲಾ
ವಾರ್ತಾ ಇಲಾಖೆ.