ಮಧುಗಿರಿ : ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಸಂಘರ್ಷ , ಹೋರಾಟಗಳನ್ನು ಸಕಾರಾತ್ಮಕವಾಗಿ ಎದುರಿಸಬೇಕು ಎಂದು ವೈದ್ಯಾಧಿಕಾರಿ ಡಾ. ಮಮತ ಕರೆ ನೀಡಿದರು.
ಅವರು ತಾಲೂಕಿನ ಐ ಡಿ ಹಳ್ಳಿ ಹೋಬಳಿಯ ಮುದ್ದೇನೇರಳೇಕೆರೆ ಗ್ರಾಮದಲ್ಲಿ ಲಕ್ಷ್ಮಮ್ಮ ನರಸಿಂಹಯ್ಯ ಚಾರಿಟಬಲ್ ಟ್ರಸ್ಟ್ ನ ಕಟ್ಟಡ ಉದ್ಘಾಟನೆ ಮತ್ತು ಪ್ರತಿಭಾಪುರಸ್ಕಾರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲ್ಯಾವಸ್ಥೆಯಿಂದಲೇ ಶಿಸ್ತುಬದ್ದ ಅಧ್ಯಯನ ನಡೆಸಿ, ಅನೇಕ ವಿಷಯಗಳ ಕಲಿತು ತಮ್ಮ ಜ್ಞಾನವೃದ್ದಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸಾಕಷ್ಟು ಪರಿಶ್ರಮ ವಹಿಸಿ ಪ್ರಯತ್ನಪಟ್ಟಲ್ಲಿ ಯಶಸ್ಸು ನಿಮ್ಮದಾಗಲಿದೆ.
ನಮ್ಮ ತಂದೆಯವರಾದ ಎನ್.ಗಂಗಪ್ಪನವರು ಮುದ್ದೇನೇರಳೇಕೆರೆಯಲ್ಲಿ ಬಡಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ, ಕೃಷಿ ಇಲಾಖೆಯ ಅಪರ ನಿರ್ದೇಶಕರ ಹುದ್ದೆಯವರೆಗೂ ವಿವಿಧ ಹಂತಗಳಲ್ಲಿ ಸಾರ್ವಜನಿಕ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ.
ಹುಟ್ಟೂರಿನ ಜನರ ಸೇವೆಗಾಗಿ ತಂದೆತಾಯಿ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸುವುದರ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನೆರವನ್ನು ನೀಡುವುದಾಗಿ ತಿಳಿಸಿದರು.
ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕ ಪ್ರೊ.ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ಯಾವುದೇ ಪ್ರತಿಫಲಾಫೇಕ್ಷೆಯಿಲ್ಲದೆ ಮಾಡಿದ ಸೇವೆ, ಉತ್ತಮ ಫಲ ನೀಡುತ್ತದೆ. ಸರ್ಕಾರದ ಉನ್ನತ ಹುದ್ದೆಗೇರಿದರೂ ಹುಟ್ಟೂರನ್ನು ಮರೆಯದ ಎನ್.ಗಂಗಪ್ಪನವರು ಅವರ ತಂದೆತಾಯಿ ಹೆಸರಲ್ಲಿ ಟ್ರಸ್ಟ್ , ಗ್ರಂಥಾಲಯ ಪ್ರಾರಂಭಿಸಿ, ಶಾಲಾ ಮಕ್ಕಳಿಗೆ ವಿವಿಧ ಸೌಲಭ್ಯ ಗಳನ್ನು ನೀಡುತ್ತಾ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.
ಡಾ.ಮಮತಾ ಮತ್ತು ಸುನೀತ ರವರುಗಳು ಅವರ ತಂದೆಯವರ ಸಮಾಜಮುಖಿ ಚುಟುವಟಿಕೆಗಳನ್ನು ಮುಂದುವರೆಸುತ್ತಿದ್ದಾರೆ. ಶಿಕ್ಷಣದ ಮಹತ್ವವನ್ನರಿತು ಎಲ್ಲರೂ ಶಿಕ್ಷಿತರಾಗಿ ದೇಶವನ್ನು ಸಧೃಢಗೊಳಿಸಬೇಕು. ಪ್ರತಿಭಾಪುರಸ್ಕಾರ ಪಡೆದ ವಿದ್ಯಾರ್ಥಿಗಳು ಸತ್ಪ್ರಜೆಳಾಗಿ, ಉನ್ನತ ಉದ್ಯೋಗಗಳಿಸಿದರೆ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದರು.
ನಿವೃತ್ತ ಶಿಕ್ಷಕರಾದ ಅಶ್ವತ್ಥಪ್ಪ ಮಾತನಾಡಿ ಬಡತನವನ್ನು ವರವಾಗಿಸಿಕೊಂಡ ಎನ್.ಗಂಗಪ್ಪನವರು ಬಡತನವನ್ನು ಮೆಟ್ಟಿನಿಂತವರು , ಶಿಕ್ಷಣದಲ್ಲಿ ಮಂಚೂಣ ಯಲ್ಲಿದ್ದ ಅವರಿಗೆ ಉನ್ನತ ಉದ್ಯೋಗಗಳು ಅರಸಿಬಂದವು. ಅತ್ಯಂತ ಉನ್ನತ ಹುದ್ದೆಯಲ್ಲಿದ್ದರೂ ಎಲ್ಲರೊಂದಿಗೆ ಸರಳವಾಗಿ ಬೆರೆತು, ಜನರಿಗೆ ನೆರವಾಗುತ್ತಿದ್ದರು ಎಂದರು.
ಎ.ಇ.ಇ. ಶಿವಕುಮಾರ್ ಮಾತನಾಡಿ ಎನ್.ಗಂಗಪ್ಪನವರು ಹುಟ್ಟೂರಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ರಜಾದಿನಗಳಲ್ಲಿ ಸ್ವಗ್ರಾಮಕ್ಕೆ ಬಂದು ಎಲ್ಲರೊಂದಿಗೆ ಬೆರೆತು ಅವರ ಕಷ್ಟಕಾರ್ಪಣ್ಯಗಳಿಗೆ ತಮ್ಮ ಸಹಾಯಹಸ್ತ ಚಾಚಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿತ್ತು. ಮುದ್ದೇನೇರಳೇಕೆರೆ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಬಿ.ಐ. ಮ್ಯಾನೇಜರ್ ವೇಣುಗೋಪಾಲ್ , ಟ್ರಸ್ಟ್ ಅಧ್ಯಕ್ಷೆ ಗಂಗರಾಜಮ್ಮ ಕಾರ್ಯದರ್ಶಿ ಕೆ.ವಿ.ಅನುಶ್ರೀ, ಎ.ಇ.ಇ. ರಾಜಗೋಪಾಲ್ ,ಮುಖ್ಯಶಿಕ್ಷಕಿ ನರಸಮ್ಮ , ಶಿಕ್ಷಕ ಮಂಜುನಾಥ್ , ರಮಾಪುರ ಲಕ್ಷ್ಮೀಪತಿ , ದಿಲೀಪ್, ಪವನ್, ಲಕ್ಷ್ಮೀನಾರಾಯಣ, ಗ್ರಾ.ಪಂ.ಸದಸ್ಯರಾದ ಮೇಘ , ಮನೋಜ್ , ಎಂಜಿನಿಯರ್ ರಮೇಶ್ ಹಾಗೂ ಇತರರು ಭಾಗವಹಿಸಿದ್ದರು.