ಮಧುಗಿರಿ : ಕಾಂಗ್ರೆಸ್ ಸರ್ಕಾರವು ಯಾವಾಗಲೂ ಶಿಕ್ಷಣ ಹಾಗೂ ಶಿಕ್ಷಕರ ಪರವಾಗಿದೆ ಎಂಬುದು ಸಾಬೀತಾಗಿದೆ ಎಂದು ಹಿರಿಯೂರಿನ ಮಾಜಿ ಶಾಸಕಿ ಹಾಗೂ ಆಗ್ನೇಯ ಶಿಕ್ಷಕರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ರವರ ಪತ್ನಿ ಪೂರ್ಣಿಮ ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಹಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು , ಈ ಹಿಂದೆ ಎಸ್ ಎಂ ಕೃಷ್ಣ ಸರ್ಕಾರವಿದ್ದಾಗ ಬಿಸಿಯೂಟ ಯೋಜನೆ ಜಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕ್ಷೀರಭಾಗ್ಯ , ಶೂ ಭಾಗ್ಯ , ಗ್ಯಾರಂಟಿಯ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವಂತೆ ಎನ್ ಪಿ ಎಸ್ ತೆಗೆದು ಓಪಿಎಸ್ ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ 7 ನೇ ವೇತನದ ಆಯೋಗ ಮತ್ತು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳುತ್ತಿರುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿರುವುದೇ ನಿದರ್ಶನವಾಗಿದೆ ಎಂದರು.
ನನ್ನ ಪತಿ ಡಿ.ಟಿ. ಶ್ರೀನಿವಾಸ್ ಕೆ ಎ ಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಖಾಸಗಿ ಶಿಕ್ಷಣ ಸಂಸ್ಥೆಯ ನೇತೃತ್ವ ವಹಿಸಿರುವುದರಿಂದ ಎಲ್ಲಾ ಹಂತದ ಶಿಕ್ಷಕರುಗಳ ಮತ್ತು ನೌಕರರ ಸಮಸ್ಯೆಗಳ ಬಗ್ಗೆ ಅರಿವಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಭವಿರುವುದರಿಂದ ಕಾಂಗ್ರೆಸ್ ಪಕ್ಷ ಪ್ರಥಮ ಬಾರಿಗೆ ಚುನಾವಣೆಗೆ ಆರು ತಿಂಗಳ ಮೊದಲೇ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ಆದ್ದರಿಂದ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತಯಾಚಿಸುವುದಾಗಿ ತಿಳಿಸಿದ ಅವರು, ಈಗ ಗೆದ್ದಿರುವವರು ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಶಿಕ್ಷಕರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಈ ಹಿಂದೆ ಎನ್.ಪಿ.ಎಸ್ ಶಿಕ್ಷಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದರು.
ತುಮಕೂರು ಜಿಲ್ಲೆಯ ಸಚಿವರುಗಳಾದ ಡಾ.ಜಿ ಪರಮೇಶ್ವರ್ , ಕೆ.ಎನ್ ರಾಜಣ್ಣ , ಮಾಜಿ ಸಚಿವರುಗಳಾದ ಟಿ.ಬಿ.ಜಯಚಂದ್ರ, ವೆಂಕಟರವಣಪ್ಪ , ಶಾಸಕರುಗಳಾದ ಗುಬ್ಬಿ ಶ್ರೀನಿವಾಸ್ , ಷಡಾಕ್ಷರಿ , ವೆಂಕಟೇಶ್ , ಕೆ.ಹೆಚ್.ರಂಗನಾಥ್ , ರವರುಗಳು ಸಹಕಾರದಿಂದ ತುಮಕೂರು ಜಿಲ್ಲೆಯಲ್ಲಿ ನಮಗೆ ಮತಗಳಿಕೆ ಹೆಚ್ಚು ಸಹಕಾರಿಯಾಗಲಿದ್ದು ಮಠ ಮಾನ್ಯಗಳ ಬೆಂಬಲವು ದೊರೆಯಲಿದೆ ಎಂದರು.