ಜಿಲ್ಲೆತುಮಕೂರುದೇಶರಾಜಕೀಯರಾಜ್ಯ

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಮೋದಿ ನೇತೃತ್ವದ ಅಭಿವೃದ್ಧಿಗೆ ಮನ್ನಣೆ : ಶಾಸಕ ಬಿ. ಸುರೇಶಗೌಡ

ತುಮಕೂರು : ಮಧ್ಯಪ್ರದೇಶ, ರಾಜಸ್ತಾನ,ತೆಲಂಗಾಣ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತದ ಫಲಿತಾಂಶ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವಕ್ಕೆ ಮತ್ತು ಅವರ ನೇತೃತ್ವದ ಅಭಿವೃದ್ಧಿ ಯೋಜನೆಗಳಿಗೆ ಕೊಟ್ಟ ಜನಾದೇಶವಾಗಿದೆ. ಈ ಫಲಿತಾಂಶದ ಮೂಲಕ ಜನರು ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ್ದಾರೆ ಎಂದು ಶಾಸಕ ಬಿ. ಸುರೇಶಗೌಡ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಇಡೀ ದೇಶದಾದ್ಯಂತ ಸಾಧಿಸಲಿರುವ ದಿಗ್ವಿಜಯಕ್ಕೆ ಇದು ಮುನ್ನುಡಿಯಂತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದೆ. ರಾಜಸ್ತಾನ ಮತ್ತು ಛತ್ತೀಸಗಡದಲ್ಲಿ ಜನರು ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಬಿಜೆಪಿಗೆ ಮರಳಿ ಅಧಿಕಾರ ಕೊಟ್ಟಿದ್ದಾರೆ. ಅಂದರೆ ಇದು ಬಿಜೆಪಿಗೆ ಸಿಕ್ಕ ಸಕಾರಾತ್ಮಕ ಜಯವಾಗಿದೆ ಮತ್ತು ಇದುವರೆಗೆ ಕಾಂಗ್ರೆಸ್‌ ಪಕ್ಷ ಮಾಡಿಕೊಂಡಿರುವ ಬಂದಿರುವ ನಕಾರಾತ್ಮಕ ರಾಜಕಾರಣವನ್ನು ಜನರು ಧಿಕ್ಕರಿಸಿರುವುದರ ದ್ಯೋತಕವಾಗಿದೆ.
ಭಾರತ ದೇಶವನ್ನು ಜಾಗತಿಕ ಐದು ಬಲಿಷ್ಠ ಆರ್ಥಿಕತೆಗಳಲ್ಲಿ ಒಂದಾಗಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕೀರ್ತಿಯನ್ನು ಪ್ರಪಂಚದ ಬಲಿಷ್ಠ ರಾಷ್ಟ್ರಗಳ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರ ಜತೆಗೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಕೈ ಜೋಡಿಸಿ ರೂಪಿಸಿದ ಚುನಾವಣಾ ಕಾರ್ಯತಂತ್ರ ಕಾಂಗ್ರೆಸ್‌ ಮಾತ್ರವಲ್ಲ ಇತರ ಎಲ್ಲ ವಿರೋಧ ಪಕ್ಷಗಳಿಗೆ ಮರ್ಮಾಘಾತ ಕೊಟ್ಟಿದೆ.
ಕಾಂಗ್ರೆಸ್‌ ಪಕ್ಷವು ಕೊಟ್ಟ ಸುಳ್ಳು ಗ್ಯಾರಂಟಿ ಯೋಜನೆಗಳಿಗೆ ಜನರು ಮರುಳಾಗಲಿಲ್ಲ. ದೇಶದ ಅಭಿವೃದ್ಧಿ ಮುಖ್ಯ, ದುಡಿಯುವ ಕೈಗಳಿಗೆ ಕೆಲಸ ಮುಖ್ಯ ಎಂಬುದನ್ನು ಅವರು ಈ ಫಲಿತಾಂಶದ ಮೂಲಕ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳಿಗೆ ಸಾರಿ ಹೇಳಿದ್ದಾರೆ.
ಕಾಂಗ್ರೆಸ್‌ನ ನಾಯಕರಾದ ರಾಹುಲ್‌ ಗಾಂಧಿಯವರು ಚುನಾವಣಾ ಸಮಯದಲ್ಲಿ ಪ್ರಧಾನಿಯವರ ವಿರುದ್ಧ ʻದುರದೃಷ್ಟ (ಪನೌತಿ)ʼ ಎಂಬ ಹೊಣೆಗೇಡಿತನದ ಟೀಕೆ ಮಾಡಿದ್ದರು. ಈಗ ಸ್ವತಃ ರಾಹುಲ್‌ ಗಾಂಧಿಯವರು ತಮ್ಮ ಪಕ್ಷಕ್ಕೆ ಎಂಥ ʼದುರದೃಷ್ಟʼ ಎಂಬುದು ಸಾಬೀತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ವೈಯಕ್ತಿಕ ಮತ್ತು ನಿರಾಧಾರದ ಆರೋಪಗಳನ್ನು ಜನರು ಸಹಿಸುವುದಿಲ್ಲ ಎಂದು ಇನ್ನಾದರೂ ಕೇಂದ್ರದ ಮತ್ತು ರಾಜ್ಯದ ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಳ್ಳಬೇಕು.
ರಾಜಸ್ಥಾನ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಒಳಜಗಳ, ಅಧಿಕಾರಕ್ಕಾಗಿ ನಡೆದ ಕಚ್ಚಾಟ ಆ ಪಕ್ಷಕ್ಕೆ ಮುಳುವಾಗಿದೆ. ಇಲ್ಲಿಯೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಅದೇ ಮುಸುಕಿನ ಗುದ್ದಾಟ ನಡೆದಿದೆ. ಅದು ಅವರ ಪಕ್ಷಕ್ಕೆ ಮುಳುವಾಗಲಿದೆ.ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತವು ಜನರನ್ನು ಭ್ರಮ ನಿರಸನದಲ್ಲಿ ಮುಳುಗಿಸಿದೆ. ಯಾಕಾದರೂ ನಾವು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದೆವು ಎಂದು ಪರಿತಾಪ ಪಡುತ್ತಿದ್ದಾರೆ. ಅವರ ಸಿಟ್ಟು ಮತ್ತು ಆಕ್ರೋಶ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವ್ಯಕ್ತವಾಗಲಿದೆ. ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಡ ರಾಜ್ಯಗಳ ಫಲಿತಾಂಶ ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪನ್ನು ಮತ್ತು ಹುಮ್ಮಸ್ಸನ್ನು ತುಂಬಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಾದಿಯಾಗಿ ಎಲ್ಲ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕರ್ನಾಟಕದ ಎಲ್ಲ ಇಪ್ಪತ್ತೆಂಟು ಸೀಟುಗಳಲ್ಲಿ ಕಾಂಗ್ರೆಸ್‌ ಅನ್ನು ಪರಾಜಯಗೊಳಿಸಿ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker