ತುಮಕೂರು : ಗಂಡು ಮೆಟ್ಟಿದ ನಾಡಿನಲ್ಲಿ ಹುಟ್ಟಿ,ತನ್ನ ಸಮಯ ಪ್ರಜ್ಞೆಯಿಂದ ಇಡೀ ಶತೃ ಸೈನ್ಯವನ್ನು ಸದೆ ಬಡಿತ ಒನಕೆ ಓಬವ್ವಳ ಧೈರ್ಯ ಮತ್ತು ಸಾಹಸಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ವಿ ವೀರಣ್ಣ ಕಲಾಕ್ಷೇತ್ರದಲ್ಲಿ ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆವತಿಯಿಂದ ಆಯೋಜಿಸಿದ್ದ ಮೂರನೇ ವರ್ಷದ ವೀರ ವನಿತೆ ಒನಕೆ ಓಬವ್ವ ಜಯಂತಿ ಹಾಗೂ ದಿ.ಇರಕಸಂದ್ರ ಜಗನ್ನಾಥ್ ಅವರ ಸ್ಮರರ್ಣಾಥ ರತಿ ಮನ್ಮಥರ ಕಲ್ಯಾಣ ಅಥವಾ ಕೌಂಡ್ಲಿಕನ ಒದೆ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,18ನೇ ಶತಮಾನದಲ್ಲಿ ಚಿತ್ರದುರ್ಗ ಸಮೀಪದ ಗುಡಿಕೋಟೆ ಗ್ರಾಮದಲ್ಲಿ ಹುಟ್ಟಿದ ಓಬವ್ವ ಚಿತ್ರಕಲೆಯಲ್ಲಿ ಹೆಸರುವಾಸಿಯಾದ ಹೆಣ್ಣು ಮಗಳು,ಚಿತ್ರದುರ್ಗದ ಕೋಟೆ ಕಾಯುವ ಕಾಯಕಕ್ಕೆ ನೇಮಕಗೊಂಡಿದ್ದ ಕಹಳೆ ಮುದ್ದಹನುಮಪ್ಪನನ್ನು ಮದುವೆಯಾಗಿ, ಕೋಟೆಗೆ ಬಂದು ಗಂಡನ ಕೆಲಸಕ್ಕೆ ಸಾಥ್ ನೀಡುತ್ತಲೇ ದತ್ತೆಂದು ಒದಗಿ ಬಂದ ಸಮಸ್ಯೆಯನ್ನು ತನ್ನ ಸಮಯ ಪ್ರಜ್ಞೆಯಿಂದ ಬಗೆಹರಿಸಿ,ವೀರ ವನಿತೆ ಎಂಬ ಬಿರುದು ಪಡೆದ ದಿಟ್ಟ ಮಹಿಳೆ ಒನಕೆ ಓಬವ್ವ ಎಂದು ಬಣ್ಣಿಸಿದರು.
ನಾವೆಲ್ಲರೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮಕ್ಕಳು, ಕೀಳಿರಿಮೆ ಬಿಟ್ಟು ಸಮುದಾಯದೊಂದಿಗೆ ಗುರುತಿಸಿಕೊಳ್ಳಬೇಕಿದೆ.ಈ ಹಿಂದೆ ನಾನು ಮಹಾಮಾನವತಾವಾದಿ ಅಂಬೇಡ್ಕರ್ ಕುರಿತು ಕಥಾ ಕೀರ್ತನೆ ಮಾಡಿದ ಸಂದರ್ಭದಲ್ಲಿ ಕೆಲವರು ನನ್ನನ್ನು ಕಥಾ ಕೀರ್ತನೆ ಕರೆಯಲು ಹಿಂದೆ, ಮುಂದೆ ನೋಡಿದರು.ಒಂದು ವರ್ಷಗಳ ಕಾಲ ಯಾವ ಕಾರ್ಯಕ್ರಮವೂ ಸಿಗಲಿಲ್ಲ. ಆದರೆ ಎದುಗುಂದಲಿಲ್ಲ.ಅಂದು ನನ್ನನ್ನು ತಿರಸ್ಕರಿಸಿದವರೆ ಆ ನಂತರ ನನಗಾಗಿ ಬಂದರು. ಆ ರೀತಿಯ ವರ್ಚಸ್ಸು, ಪ್ರತಿಭೆಯನ್ನು ಯುವಜನರು ಬೆಳೆಸಿಕೊಳ್ಳಬೇಕಿದೆ.ಪ್ರತಿಭೆಯೊಂದೇ ನಿಮ್ಮನ್ನು ಕಾಯುವ ಪ್ರಮುಖ ಆಸ್ತç. ಹಾಗಾಗಿ ಮಕ್ಕಳು ವಿದ್ಯೆಯ ಜೊತೆಗೆ ಧೈರ್ಯ, ಸ್ವಾವಲಂಬಿ ಜೀವನವನ್ನು ರೂಢಿಸಿಕೊಳ್ಳಬೇಕೆಂದು ಡಾ.ಲಕ್ಷ್ಮಣದಾಸ್ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶಿರಾ ತಾಲೂಕು ಚನ್ನೇನಹಳ್ಳಿ ಛಲವಾದಿ ಜಗದ್ಗುರು ಪೀಠದ ಶ್ರೀಶ್ರೀಬಸವಲಿಂಗ ಮೂರ್ತಿ ಮಹಾಸ್ವಾಮಿಜೀ ಆಶೀರ್ವಚನ ನೀಡಿ,ರಾಜ,ಮಹಾರಾಜರ ಕಾಲದಲ್ಲಿ ಎಚ್ಚರಿಕೆಯ ಸಂದೇಶವಾಗಿ ನುಡಿಸಲ್ಪ ಡುತಿದ್ದ ಕಹಳೆ ಇಂದು ಸಾಂಸ್ಕೃತಿಕ ಸಾಧನವಾಗಿ ಬದಲಾಗಿದೆ.ಕರ್ನಾಟಕವನ್ನಾಳಿದ ಗಂಗರು, ಕದಂಬರಾದಿಯಾಗಿ ಎಲ್ಲರೂ ಕೋಟೆಯ ಪಹರೆಗಾಗಿ ಧೈರ್ಯ ಮತ್ತು ಸಹಾಸಕ್ಕೆ ಹೆಸರುವಾಸಿಯಾದ ಛಲವಾದಿ ಸಮುದಾಯದ ಯೋಧರನ್ನು ನೇಮಕ ಮಾಡಿರುವ ಉದಾಹರಣೆಗಳು ಇತಿಹಾಸದಿಂದ ತಿಳಿಯಬಹುದು.ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ,ಆನಾಚಾ ರಣಗಳು ಹೆಚ್ಚಾಗಿರುವ ಈ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ,ಕರಾಟೆ,ಕುಸ್ತಿ ಇನ್ನಿತರ ಆತ್ಮರಕ್ಷಣೆಯ ಕಲೆಗಳನ್ನು ಕಲಿಸಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಯ ರಾಜಣ್ಣ,ಕಳೆದ ಮೂರು ವರ್ಷಗಳ ಹಿಂದೆ ಸರಕಾರ ನಮ್ಮ ಸಮುದಾಯದ ಹೆಣ್ಣು ಮಗಳಾದ ಒನಕೆ ಓಬವ್ವ ಜಯಂತಿ ಆಚರಣೆ ಘೋಷಣೆ ಮಾಡಿದ ಸಂದರ್ಭದಲ್ಲಿ ನಮ್ಮ ಸಂಘದ ಕಾರ್ಯದರ್ಶಿಯಾಗಿದ್ದ ದಿ.ಜಗನ್ನಾಥ್ ಇರಕಸಂದ್ರ ಅವರು ಸಮುದಾಯದ ಯುವಜನರನ್ನು ಒಗ್ಗೂಡಿಸಿ, ಒನಕೆ ಓಬವ್ವ ಜಯಂತಿ ಆಚರಣೆ ಆರಂಭಿಸಿದರು.ಅಂದಿನಿಂದ ಪ್ರತಿವರ್ಷ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ನಿರಂತರವಾಗಿ ಒನಕೆ ಓಬವ್ವ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿ ಹೆಚ್.ಎಸ್.ಪರಮೇಶ್ ಅವರು ಕಾರ್ಯಕ್ರಮಕ್ಕೆ ಮೆರುಗು ನೀಡಿದ ಕಲಾತಂಡಗಳ ಪ್ರಮುಖರುಗಳನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ವೈದ್ಯರಾದ ಡಾ.ಸಿ.ಆರ್.ಸುಮ,ಪಶುವೈದ್ಯಾಧಿಕಾರಿಗಳಾದ ಡಾ.ನಳಿನಾಕ್ಷಿ.ಎಸ್., ಸಮಾಜ ಸೇವಕರಾದ ಶ್ರೀಮತಿ ಗೀತಾಲಕ್ಷ್ಮಿ, ಚಿಟ್ಟಿ ಮೇಳ ಕಲಾವಿದರಾದ ಡಾ.ತಿಮ್ಮಯ್ಯ,ಕೆ.ಎಸ್.ಭೂತೇಶ್, ಕಹಳೆ ವಾದ್ಯ ಕಲಾವಿದರಾದ ದೊಡ್ಡನರಸಪ್ಪ ಅವರುಗಳಿಗೆ ವೀರವನಿತೆ ಒನಕೆ ಓಬವ್ವ ಪ್ರಶಸ್ತಿ ನೀಡಿ ಅಭಿನಂದಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ಡಾ.ಪಿ.ಚಂದ್ರಪ್ಪ,ಆದಿನಾರಾಯಣ್,ಬಿ.ಜಿ.ನಿಂಗರಾಜು,ಲೇಪಾಕ್ಷಯ್ಯ,ಇರಕಸಂದ್ರ ಗ್ರಾ.ಪಂ. ಸದಸ್ಯರಾದ ಶ್ರೀಮತಿ ಶಾಂತಮ್ಮ ಜಗನ್ನಾಥ್,ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಯ ಪದಾಧಿಕಾರಿಗಳಾದ ಎಸ್.ರಾಜಣ್ಣ,ಹೆಚ್.ಎಸ್.ಪರಮೇಶ್,ಹೆಚ್.ಬಿ.ಪುಟ್ಟಬೋರಯ್ಯ,ಟಿ.ಆರ್.ನಾಗೇಶ್,ಡಾ.ಮಹೇಶ್,ಕೆ.ಶಿವಕುಮಾರ್,ಡಿ.ಎನ್.ಭೈರೇಶ್, ಕೆ.ಕುಮಾರ್, ಶ್ರೀನಿವಾಸಮೂರ್ತಿ ನಿನಾಸಂ ಮತ್ತಿತರರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ನಂತರ ಇತ್ತೀಚಗೆ ನಿಧನರಾದ ಹಿರಿಯ ಕಲಾವಿಧ ಜಗನ್ನಾಥ್ ಇರಕಸಂದ್ರ ಅವರ ಸ್ಮರಣಾರ್ಥ ರತಿಮನ್ಮಥ ಕಲ್ಯಾಣ ಅಥವಾ ಕೌಂಡ್ಲಿಕನ ವಧೆ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.