ಮಧುಗಿರಿ : ಪಟ್ಟಣದ ಲಿಂಗೇನಹಳ್ಳಿಯಲ್ಲಿ ಸ.ನಂ 5/1 , 5/2 ರಲ್ಲಿನ ಒಟ್ಟು 3 ಎಕರೆ 1 ಗುಂಟೆ ಜಮೀನಿನಲ್ಲಿ ಲೇ ಔಟ್ ನಲ್ಲಿ ಮೋರಿ ಇದ್ದರು ಸಹ ಪಾರ್ಕ್ ಎಂದು ನಮೂದಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಶೇ.55 ರಷ್ಟು ಲೇ ಔಟ್ ಮಾಡಲು ಅನುಮತಿ ನೀಡಿರುವುದು ಸರಿಯೇ ಎಂದು ಪುರಸಭೆ ಅಧಿಕಾರಿಗಳನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪುರಸಭೆಗೆ ಮಂಗಳವಾರ ದಿಢೀರ್ ಬೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಮಾತನಾಡಿದ ಅವರು ಲಿಂಗೇನಹಳ್ಳಿಯಲ್ಲಿ ತಿಪ್ಪೇ ರುದ್ರಯ್ಯ ಎಂಬುವವರ ಲೇ ಔಟ್ ನಲ್ಲಿ ಮೋರಿ ಇದೆ ಆದರೂ ಪುರಸಭೆಯ ಅಧಿಕಾರಿಗಳು ಸೇರಿಕೊಂಡು ಪಾರ್ಕ್ ಎಂದು ನಮೂದಿಸಿ ಲೇ ಔಟ್ ಮಾಡುತ್ತಿರುವುದು ಸರಿಯೇ ಯಾವ ಆಧಾರದ ಮೇಲೆ ಅವರಿಗೆ ಅನುಮತಿ ನೀಡಿದ್ದೀರಾ…! ಈ ಪ್ಲಾನ್ ವಜಾ ಗೊಳಿಸಿ ರಿಜಿಸ್ಟ್ರರ್ ಮಾಡದಂತೆ ಸಬ್ ರಿಜಿಸ್ಟ್ರಾರ್ ಗೆ ಪತ್ರ ಬರೆಯಿರಿ ಎಂದು ಮುಖ್ಯಾಧಿಕಾರಿ ಸುರೇಶ್ ಗೆ ಸೂಚಿಸಿದರು.
ಪಟ್ಟಣಕ್ಕೆ ಹೇಮಾವತಿ ನೀರೋದಗಿಸುವ ಬಳಾಪುರ ಬಳಿ ಮೋಟಾರ್ ಪಂಪ್ ಸೆಟ್ ದುರಸ್ತಿಯ ಬಗ್ಗೆ ಕೇಳಿದಾಗ, ವರ್ಕ್ ಆರ್ಡರ್ ಆಗಿಲ್ಲ ಎಂದು ಪುರಸಭೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ, ಸಂಬಂದ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣ ವರ್ಕ್ ಅರ್ಡರ್ ನೀಡಬೇಕೆಂದು ಸೂಚಿಸಿದರು.
ಪುರಸಭೆಯಲ್ಲಿ ಎಸ್.ಸಿ ಎಸ್.ಟಿ ವಿದ್ಯಾರ್ಥಿಗಳಿಗೆ 2 ವರ್ಷದಿಂದ ಲ್ಯಾಪ್ ಟ್ಯಾಪ್ ನೀಡಿಲ್ಲ ಎಂದು ಪುರಸಭೆ ಸದಸ್ಯರು ಸಚಿವರ ಗಮನ ಸೆಳೆದಾಗ, ಸಂಬಂದಪಟ್ಟವರೊಂದಿಗೆ ಚರ್ಚಿಸಿ ಬಗೆ ಹರಿಸುವುದಾಗಿ ಭರವಸೆ ತಿಳಿಸಿದರು.
ಬೀದಿ ಬದಿಯಲ್ಲಿ ಟೀ ಅಂಗಡಿ ಇಟ್ಟಿರುವವರಿಗೆ ಮತ್ತು ಅಂತಹ ವ್ಯಾಪಾರಿಗಳ ಬಳಿ ನಯಾ ಪೈಸೆ ಸುಂಕ ವಸೂಲು ಮಾಡಬಾರದು. ಪುರಸಭೆಗೆ ಪಾವತಿಸಬೇಕಾದ ನಿವೇಶನ , ಮನೆಗಳ ತೆರಿಗೆ ಹಣ ಸರಿಯಾಗಿ ಸಂಗ್ರಹವಾಗ ಬೇಕು , ಕೆಲವರು ಹಿಂದಿನ ವರ್ಷಗಳ ತೆರಿಗೆಯನ್ನು ವಂಚಿಸಿ ಕೇವಲ ಒಂದು ವರ್ಷದ ತೆರಿಗೆಯನ್ನು ಪಾವತಿಸಿ ಖಾತೆಗಳನ್ನು ಮಾಡುತ್ತಿರುವ ಆರೋಪಗಳು ಸಾರ್ವಜನಿಕರಿಂದ ಬಂದಿವೆ.
ಸಿಬ್ಬಂದಿಗಳು ಸಕಾಲಕ್ಕೆ ಕಚೇರಿಗೆ ಆಗಮಿಸಬೇಕು , ಸಾರ್ವಜನಿಕರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಬಯೋಮೆಟ್ರಿಕ್ ಹಾಜರಾತಿಯನ್ನು ಪರಿಗಣಿಸಬೇಕು , ನಡಾವಳಿ ಪುಸ್ತಕವನ್ನು ಸರಿಯಾಗಿ ಬರೆಯುತ್ತಿಲ್ಲ , ಸದಸ್ಯರ ಸಹಿ ಪಡೆದಿಲ್ಲಾ , ಸದಸ್ಯರಿಗೆ ಸಭೆಯ ನೋಟಿಸ್ ಕಳುಹಿಸಿರುವ ಬಗ್ಗೆ ಮಾಹಿತಿಯೇ ಇಲ್ಲಾ ಎಂದು ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು.
ಪುರಸಭೆ ಗೋಡೌನ್ ನಲ್ಲಿರುವ ಹಳೇಯ ಮೋಟಾರ್ ಗಳು , ಗೇಟ್ ವಾಲ್ ಗಳನ್ನು ಪ್ರತ್ಯೇಕವಾಗಿ ಇಟ್ಟು ಬೆಲೆಯನ್ನು ನಿರ್ಣಯಿಸಿ ಹರಾಜು ಹಾಕಿಸಿ, ಪಟ್ಟಣದಲ್ಲಿ ಕೆಲ ಹಳೇಯ ಬೋರ್ ವೆಲ್ ಗಳನ್ನು ನಿಲ್ಲಿಸಲಾಗಿದ್ದು, ಅವುಗಳನ್ನು ಮತ್ತೆ ಚಾಲೂ ಮಾಡಬೇಕು ಪೈಪ್ ಗಳಿಗೆ ಬಣ್ಣ ಹೊಡೆಸಬೇಕು. 24 ಗಂಟೆ ನೀರಿನ ಸೌಕರ್ಯವಿರವ ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕೆಂದರು.
ವಿನಾ ಕಾರಣ ಪುರಸಭೆಯಲ್ಲಿನ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಬೇಕು. ದುಂದು ವೆಚ್ಚಗಳಿಗೆ ಇತ್ತೀಚೆಗೆ ಬಂದಿರುವ ಮುಖ್ಯಾಧಿಕಾರಿಗಳು ಕಡಿವಾಣ ಹಾಕುವಂತೆ ಸಲಹೆ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ಸುರೇಶ್ . ಸದಸ್ಯರುಗಳಾದ ಲಾಲಪೇಟೆ ಮಂಜುನಾಥ , ಮಂಜುನಾಥ ಆಚಾರ್ , ಎಂಜಿ ಉಮೇಶ್ , ಆನಂದ್ , ಅಲಿಂ , ಸಾಧಿಕ್ , ಆನಂದ ಕೃಷ್ಣ , ಎಂ.ವಿ ಮಂಜುನಾಥ್ , ಡಿ ವೈ ಎಸ್ ಪಿ ರಾಮಚಂದ್ರಪ್ಪ ಹಾಗೂ ಇತರರು ಹಾಜರಿದ್ದರು.