ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗಾ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮದ ತಂಗುದಾಣದಲ್ಲಿ ಬಿಳಿಗಡ್ಡ , ಕೊಳಕು ಹರಿದ ಬಟ್ಟೆ , ಕೆದರಿದ ಕೊದಲು ಬಿಟ್ಟುಕೊಂಡು ಕೈಯಲ್ಲೊಂದು ಚೀಲ ಹಿಡಿದುಕೊಂಡು ಓಡಾಡುತ್ತಿದ್ದ ಭಿಕ್ಷುಕನನ್ನು ಕಂಡು ಜನ ಅನುಮಾನಗೊಂಡು ಇವನ್ಯಾರೋ ಗಾಂಜಾ ಮಾರುವ ವ್ಯಕ್ತಿ ಇರಬೇಕು ಎಂದು ಅವಮಾನಿಸಿ ಕೂಡಲೇ ಪೋಲೀಸ್ ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಪೋಲೀಸರು ಬಂದು ವಿಚಾರಿಸಿದಾಗ ಕ್ಷುಲ್ಲಕ ಕಾರಣಕ್ಕೆ ಕುಟುಂಬವನ್ನು ತೊರೆದಿದ್ದ ಗುರುಸಿದ್ದಪ್ಪನ 10 ವರ್ಷದ ಅಲೆದಾಟದ ಕಥೆ ಹೊರಬಂದಿದೆ.
64 ವರ್ಷದ ಗುರುಸಿದ್ದಪ್ಪನನ್ನು 10 ವರ್ಷದ ಬಳಿಕ ಪತ್ನಿ ಮತ್ತು ಪುತ್ರನನ್ನು ಕರೆಸಿ ಒಂದುಗೂಡಿಸಿದ ಕೊರಟಗೆರೆ ಪೋಲೀಸರು ಜನಸ್ನೇಹಿ ಪೋಲೀಸ್ ವ್ಯವಸ್ಥೆಗೆ ಮಾದರಿಯಾಗಿದ್ದಾರೆ.
50 ಸಾವಿರ ರೂ ಹಣವನ್ನು ಭೀಕ್ಷೆ ಬೇಡಿ ಸಂಗ್ರಹಿಸಿದ್ದರು :
ಎಎಸ್ಐ ಹನುಮಂತರಾಯಪ್ಪ ಎಚ್ ಪಿ ಸಿ ರಾಮಕೃಷ್ಣಯ್ಯ ಮತ್ತು ಪೋಲೀಸರು ಗುರುಸಿದ್ದಪ್ಪನನ್ನು ವಿಚಾರಿಸಿ ಚೀಲ ತೆಗೆದಾಗ ಅದರಲ್ಲಿ ನಾಣ್ಯ ಹಾಗೂ ನೋಟುಗಳ ಸಹಿತ ಸುಮಾರು 50 ಸಾವಿರ ರೂ ಇತ್ತು . ಈ ಹಣವನ್ನು ಭೀಕ್ಷೆ ಬೇಡಿ ಸಂಗ್ರಹಿಸಿದ್ದ ಹಣವೆಂದು ಗುರುಸಿದ್ದಪ್ಪ ತಿಳಿಸಿದ್ದಾರೆ.
ಬರಿಗೈಲಿ ಮನೆ ಬಿಟ್ಟು ಬಂದಿದ್ರು :
ಗುಬ್ಬಿ ತಾಲೂಕು ಚೇಳೂರು ಹೋಬಳಿ ಎಂ.ಹೆಚ್ ಪಟ್ಟಣ ಗ್ರಾ.ಪಂ ವ್ಯಾಪ್ತಿಯ ಮಾದಪುರ ಗ್ರಾಮದ ಗುರುಸಿದ್ದಪ್ಪ ಪತ್ನಿ ಜೊತೆ ಜಗಳವಾಡಿ ಮನೆ ಬಿಟ್ಟು ಬಂದಿದ್ದರು. ತುಮಕೂರು , ದೇವರಾಯನದುರ್ಗ , ಮಧುಗಿರಿ , ಪಾವಗಡ , ಕೊರಟಗೆರೆ , ಸಿದ್ದರಬೆಟ್ಟ ಸೇರಿದಂತೆ ನಾನಾ ಕಡೆಗಳಲ್ಲಿ ಭೀಕ್ಷೆ ಬೇಡುತ್ತಾ ಬಸ್ ತಂಗುದಾಣ ಸೇರಿದಂತೆ ಸೂರುಗಳಲ್ಲಿ ಗುರುಸಿದ್ದಪ್ಪ ತಂಗುತ್ತಿದ್ದರು.
ಮನೆ ಸೇರಿಸಿದ ಪೋಲೀಸರು :
ಭೀಕ್ಷುಕ ಗುರುಸಿದ್ದಪ್ಪನ ಕಥೆ ಕೇಳಿದ ಬಳಿಕ ಪೋಲೀಸರು ಆತನ ವಿಳಾಸ ಪತ್ತೆ ಮಾಡಿ ಬಳಿಕ ಸ್ಥಳಕ್ಕೆ ಗುರುಸಿದ್ದಪ್ಪನ ಪತ್ನಿ ಮಂಗಳಮ್ಮ ಹಾಗೂ ಪುತ್ರ ಪ್ರವೀಣ್ ನನ್ನು ಕರೆಸಿಕೊಂಡು ಗುರುಸಿದ್ದಪ್ಪನ ಚೀಲದಲ್ಲಿದ್ದ 50.000 ಹಣ ಸಹಿತ ಆತನನ್ನು ಮನೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಪೋಲೀಸರ ಜನಸ್ನೇಹಿ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.