ಗ್ಯಾಸ್ ಕಟರ್ ಬಳಸಿ ಜ್ಯೂಯಲರಿ ಶಾಪ್ ಗೆ ಕನ್ನ : 6 ಕೆಜಿ ಬೆಳ್ಳಿ ಕದ್ದು ಪರಾರಿಯಾದ ಕಳ್ಳರು..!
ಗುಬ್ಬಿ: ಗ್ಯಾಸ್ ಕಟರ್ ಬಳಸಿ ರಾತ್ರೋರಾತ್ರಿ ಜ್ಯುಯಲರಿ ಶಾಪ್ ಗೆ ಕನ್ನ ಹಾಕಿದ ಕಳ್ಳರು ಸುಮಾರು ಐದು ಲಕ್ಷ ರೂ ಬೆಲೆ ಬಾಳುವ ಸುಮಾರು 6 ಕೆ.ಜಿ ಬೆಳ್ಳಿ ವಸ್ತುಗಳನ್ನ ದೋಚಿ ನಂತರ ಅಂಗಡಿಯ ಹಿಂಬದಿಯಿಂದ ಹೊರಬಂದು ಪರಾರಿಯಾಗಿರುವ ಘಟನೆ ಕೆ.ಜಿ.ಟೆಂಪಲ್ ಗ್ರಾಮದಲ್ಲಿ ನಡೆದಿದೆ.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಜಿ.ಟೆಂಪಲ್ ಗ್ರಾಮದ ಮೋಹನ್ ಲಾಲ್ ಮಾಲೀಕತ್ವದ ಭವಾನಿ ಜ್ಯೂಯಲರಿ ಶಾಪ್ ನಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಒಂದು ಗಂಟೆ ಸಮಯದಲ್ಲಿ ಅಂಗಡಿ ಮಾಲೀಕ ಮೋಹನ್ ಲಾಲ್ ಅವರ ಮೊಬೈಲ್ ಗೆ ಅಲಾರಾಂ ಸೆನ್ಸಾರ್ ಎಚ್ಚರಿಕೆ ಕೊಟ್ಟ ಹಿನ್ನಲೆ ಹೆಬ್ಬೂರು ನಿವಾಸಿ ಅಂಗಡಿ ಮಾಲೀಕ ತಕ್ಷಣ ಕೆ.ಜಿ.ಟೆಂಪಲ್ ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅಂಗಡಿ ಬಳಿ ಬಂದವರು ಗಲಾಟೆ ಮಾಡಲಾಗಿ ಹಿಂಬದಿಯಿಂದ ಕಳ್ಳರು ಓಡಿ ಹೋಗಿದ್ದಾರೆ ಎನ್ನಲಾಗಿದೆ.
ಗ್ಯಾಸ್ ಕಟರ್ ಸಿಲಿಂಡರ್ ಹಗ್ಗದ ಮೂಲಕ ತಂದು ಅದನ್ನು ಬಳಸಿ ತಡರಾತ್ರಿ ಜ್ಯುಯಲರಿ ಶಾಪ್ ಗೆ ನುಗ್ಗಿರುವ ಆರೇಳು ಮಂದಿಯ ಮುಸುಕುಧಾರಿ ಖದೀಮರ ಗುಂಪಿನ ಚಲನ ವಲನ ಸಿ.ಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಜ್ಯುಯಲರಿ ಶಾಪ್ ನಲ್ಲಿದ್ದ ಸುಮಾರು ಆರೇಳು ಕೆ.ಜಿ ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಪ್ರಕರಣ ನಡೆದಿದೆ. ಈ ಮಧ್ಯೆ ಚಿನ್ನಾಭರಣ ಲಾಕರ್ ನಲ್ಲಿದ್ದ ಕಾರಣ ಲಕ್ಷಾಂತರ ಬೆಲೆಯ ಬಂಗಾರ ಒಡವೆಗಳು ಉಳಿದುಕೊಂಡಿದೆ.
ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರ ಹುಡುಕಾಟಕ್ಕೆ ತೀವ್ರ ಶೋಧ ನಡೆಸಿದ್ದಾರೆ.