ತುಮಕೂರು : ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಉತ್ತಮವಾದ ಸೇವೆಯನ್ನು ನೀಡಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಇಲಾಖೆಯ ಸಿಬ್ಬಂದಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಸಮಗ್ರ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಆರೋಗ್ಯ ಇಲಾಖೆಯು ಅನುಷ್ಠಾನ ಮಾಡುವುದರ ಜೊತೆಗೆ ಆ ಯೋಜನೆಯ ಸೌಲಭ್ಯಗಳು ಜನ ಸಾಮಾನ್ಯರಿಗೂ ತಲುಪುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು.
ಯಾವುದೇ ಒಂದು ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸುವುದಕ್ಕಿಂತ ಮೊದಲು ಕ್ರಿಯಾಯೋಜನೆಗೆ ಸೇರಿಸಿ ಅನುಮೋದನೆ ಪಡೆದ ನಂತರ ಅನುಷ್ಠಾನ ಮಾಡಬೇಕು. ಜಾರಿಯಾದ ಕಾರ್ಯಕ್ರಮಗಳ ಕುರಿತು ಸಮಗ್ರವಾಗಿ ಪರಿಶೀಲನೆ ಮಾಡಿದಾಗ ಮಾತ್ರ ಆ ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಎನ್‌ಸಿಡಿ, ಎಬಿಆರ್‌ಕೆ ಹಾಗೂ ಎನ್‌ಹೆಚ್‌ಎಂ ಯೋಜನೆಗಳ ಕುರಿತು ಒಂದು ವರ್ಷದಲ್ಲಿ ಎಷ್ಟು ಕಾರ್ಯಕ್ರಮಗಳನ್ನು ಯಾವ ಯಾವ ಸ್ಥಳಗಳಲ್ಲಿ ಆಯೋಜನೆ ಮಾಡಬೇಕು ಎಂಬುವುದನ್ನು ಮೊದಲೇ ಕ್ರಿಯಾಯೋಜನೆ ಸಿದ್ದಪಡಿಸಿ ಅನುಮೋದನೆ ಪಡೆಯಬೇಕು ಎಂದು ಹೇಳಿದರು.
ಯಾವುದೇ ಒಂದು ಯೋಜನೆಗಳ ಕಾರ್ಯಕ್ರಮಗಳನ್ನು ಕ್ರಿಯಾ ಯೋಜನೆಗೆ ಸೇರಿಸದೆ, ಹಣವನ್ನು ವ್ಯರ್ಥವಾಗಿ ಬಳಕೆ ಮಾಡಬಾರದು. ಕಡತಗಳನ್ನು ಸರ್ಕಾರದ ಮಾರ್ಗಸೂಚಿಗಳಂತೆ ಸಿದ್ಧಪಡಿಸುವಂತೆ ಕ್ರಮ ವಹಿಸಬೇಕೆಂದು ಎಂದು ಹೇಳಿದರು.
ಯಾವುದೇ ಇಲಾಖೆಗಳಲ್ಲಿ ಜನರಿಗೆ ಉತ್ತಮ ಆಡಳಿತ ಸೌಲಭ್ಯವನ್ನು ನೀಡಬೇಕಾದರೆ, ಪ್ರತಿವಾರ ತಮ್ಮ ಇಲಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಗತಿಯನ್ನು ಪರಿಶೀಲನೆ ನಡೆಸಬೇಕು. ಆಗ ಮಾತ್ರ ಸುವ್ಯವಸ್ಥಿತವಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಜಿಲ್ಲೆಯ ಜನರಿಗೆ ಉತ್ತಮವಾದ ಆರೋಗ್ಯ ಸೇವೆಗಳನ್ನು ಕೊಡುವ ನಿಟ್ಟಿನಲ್ಲಿ ಡಿಹೆಚ್‌ಓ ಅವರು ಕೆಲಸ ಮಾಡಬೇಕು. ಇಲ್ಲವಾದರೆ ಮುಂದಿನ ಕೆಡಿಪಿ ಹಾಗೂ ದಿಶಾ ಸಭೆಯಲ್ಲಿ ಇಲಾಖೆಯ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಸಚಿವರ ಗಮನಕ್ಕೆ ತಂದು ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯ 10 ತಾಲ್ಲೂಕುಗಳ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಅತ್ಯಾವಶ್ಯಕವಾಗಿರುವ ಅಂಶಗಳನ್ನು ಪಟ್ಟಿಮಾಡಿ ಕ್ರಿಯಾಯೋಜನೆಯಲ್ಲಿ ಸೇರಿಸಿ ಅನುಮೋದನೆ ಪಡೆದುಕೊಳ್ಳಬೇಕು. ಯಾವ ಯಾವ ಯೋಜನೆಗೆ ಎಷ್ಟು ಅನುದಾನದ ಅವಶ್ಯಕತೆಯಿದೆ ಎಂಬುವುದರ ಕುರಿತು ಎಲ್ಲಾ ಯೋಜನಾಧಿಕಾರಿಗಳು ಸೇರಿ ಚರ್ಚಿಸಿ ಅಂತಿಮ ಪಟ್ಟಿ ಸಿದ್ಧಪಡಿಸಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಯ ಐಇಸಿ ಕಾರ್ಯಕ್ರಮಗಳನ್ನು ತಾಲ್ಲೂಕು ಮಟ್ಟದಲ್ಲಿ ದೊಡ್ಡದಾಗಿ ಆಯೋಜನೆ ಮಾಡಬೇಕು ಹಾಗೂ ಜಿಲ್ಲಾ ಮಟ್ಟದಲ್ಲಿ 3 ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಸಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಗೆ ಬರುವ ಅನುದಾನವನ್ನು ಸಮರ್ಪಕವಾಗಿ ಮೂರು ವರ್ಷಗಳ ಕಾಲ ಬಳಕೆ ಮಾಡಿದ್ದೇ ಆದರೆ, ಜಿಲ್ಲಾಸ್ಪತ್ರೆಯನ್ನು ಯಾವುದೇ ಖಾಸಗೀ ಆಸ್ಪತ್ರೆಗಿಂತ ಕಡಿಮೆ ಇಲ್ಲದ ಹಾಗೆ ಅಭಿವೃದ್ದಿ ಮಾಡಬಹುದು ಎಂದು ಹೇಳಿದರು.
ಅಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ)ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಮುಂದಿನ ವಾರದಲ್ಲಿ ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಆಯೋಜಿಸುವುದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಹೇಳಿದರು.
ಎನ್.ಸಿ.ಡಿ.ಕಾರ್ಯಕ್ರಮದಡಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಯಾವ ರೀತಿಯ ಚಿಕಿತ್ಸೆ ಕೊಡಬಹುದು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವ ಚಿಕಿತ್ಸೆ ನೀಡಬಹುದು ಎಂಬುವುದರ ಕುರಿತು ಪಟ್ಟಿ ಸಿದ್ದಪಡಿಸಿ ಎಂದರಲ್ಲದೆ, ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳಲ್ಲಿಯೂ ಜಾನಪದ ಕಲಾತಂಡಗಳ ಮೂಲಕ ಹಾಗೂ ಕಸ ಸಂಗ್ರಹಣೆ ಮಾಡುವ ವಾಹನಗಳಲ್ಲಿ ಒಂದು ನಿಮಿಷದ ಧ್ವನಿ ಸುರುಳಿಯನ್ನು ಹಾಕುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಯನ್ನು ಬಳಸಿಕೊಂಡು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ(ಎಬಿಆರ್‌ಕೆ) ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವುದರ ಮೂಲಕ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಸಾವಿರಾರು ಜನರಿಗೆ ಈ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸುವುದಕ್ಕೆ ಕ್ರಮ ವಹಿಸಬೇಕೆಂದು ಯೋಜನಾಧಿಕಾರಿಗೆ ಸೂಚನೆ ನೀಡಿದರು.
ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಶೌಚಾಲಯ ನಿರ್ವಹಣೆ, ಆಸ್ಪತ್ರೆ ಆವರಣದ ಸ್ವಚ್ಚತೆ, ಪಾರ್ಕಿಂಗ್ ವ್ಯವಸ್ಥೆ ಕುರಿತು ಪರಿಶೀಲಿಸಿ ವರದಿಯನ್ನು ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಹಾಲಸಿದ್ದಪ್ಪ ಪೂಜೇರಿ, ಉಪ ಕಾರ್ಯದರ್ಶಿ (ಅಭಿವೃದ್ದಿ) ಜಿ.ಎನ್.ನರಸಿಂಹಮೂರ್ತಿ, ಡಿಹೆಚ್‌ಓ ಡಾ:ಮಂಜುನಾಥ್ ಸೇರಿದಂತೆ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.