ಕ್ರೈಂ ನ್ಯೂಸ್ಜಿಲ್ಲೆತುಮಕೂರುಮಧುಗಿರಿ
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 30 ವರ್ಷ ಜೈಲು ಶಿಕ್ಷೆ
ಮಧುಗಿರಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರು ಆರೋಪಿಗಳಿಗೆ 20 ವರ್ಷ ಹಾಗೂ ಓರ್ವ ಆರೋಪಿಗೆ 30 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತುಮಕೂರಿನ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ.
ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುದ್ದೆಕುಂಟೆ ಗ್ರಾಮದ ಮಂಜುಳಾ, ಬಲರಾಮ ಹಾಗೂ ಸಿದ್ದಪ್ಪ ಜೈಲು ಶಿಕ್ಷೆಗೆ ಗುರಿಯಾದವರು.
ಪ್ರಕರಣದ ಹಿನ್ನೆಲೆ : 2021 ಆ.12 ರಂದು 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಸದರಿ ಬಾಲಕಿ 9ನೇ ತರಗತಿ ಓದುತ್ತಿದ್ದು, ಶಾಲೆಯಿಂದ ಬಂದು ಅಜ್ಜಿಯ ಮನೆಯಲ್ಲಿದ್ದಳು. ಈ ವೇಳೆ ಅದೇ ಗ್ರಾಮದ 40 ವರ್ಷದ ಮಂಜುಳಾ(1ನೇ ಆರೋಪಿ) ಬಾಲಕಿಯ ಮನೆಗೆ ಹೋಗಿ ಎಲ್.ಐ.ಸಿ ಗೆ ಫೋಟೋ ತೆಗೆದು ವಾಟ್ಸಾಪ್ ಮಾಡಿಕೊಡು ಬಾ ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಮಂಜುಳಾ ಬಾಲಕಿಯನ್ನು ಮನೆಯ ಮೇಲಿನ ಕೊಠಡಿಗೆ ಕರೆದೊಯ್ದಿದ್ದು, ಅಲ್ಲಿ ಬಾಗಿಲ ಹಿಂದೆ 31 ವರ್ಷದ ಬಲರಾಮ ಮತ್ತು 45 ವರ್ಷದ ಸಿದ್ದಪ್ಪ ರೂಮಿನ ಬಾಗಿಲ ಹಿಂದೆ ಅವಿತುಕೊಂಡಿದ್ದರು. ಬಾಲಕಿ ರೂಮಿಗೆ ಬರುತ್ತಿದ್ದಂತೆ ಆಕೆಯ ಬಾಯಿಗೆ ಟೇಪು ಸುತ್ತಿ ಬಾಲಕಿಯ ಮೇಲೆ ಬಲರಾಮನು ಲೈಂಗಿಕ ದೌರ್ಜನ್ಯ ಎಸಗಿದ್ದನು. ಬಳಿಕ ಬಾಲಕಿಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿ ಕಳುಹಿಸಿದ್ದರು. ಈ ಬಗ್ಗೆ ಬಾಲಕಿಯ ತಾಯಿ ಕೊಡಿಗೇನಹಳ್ಳಿ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಮೂವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತುಮಕೂರಿನ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯವು (ಪೋಕ್ಸೋ) 1ನೇ ಆರೋಪಿ ಮಂಜುಳಾ ಮತ್ತು 3ನೇ ಆರೋಪಿ ಸಿದ್ದಪ್ಪಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 1.30 ಲಕ್ಷ ರೂ.ದಂಡ ವಿಧಿಸಿದೆ. 2ನೇ ಆರೋಪಿ ಬಲರಾಮನಿಗೆ 30 ವರ್ಷಗಳ ಜೈಲು ಶಿಕ್ಷೆ ಹಾಗೂ 1.45 ಲಕ್ಷ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ. ನೊಂದ ಬಾಲಕಿಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್. ಆಶಾ ವಾದ ಮಂಡಿಸಿದ್ದರು.