ಗುಬ್ಬಿ: ಲೋಕಸಭಾ ಚುನಾವಣಾ ಹಿನ್ನೆಲೆ ಮೈತ್ರಿ ವಿಚಾರ ಮುನ್ನಲೆಗೆ ಬಂದ ನಂತರದಲ್ಲಿ ಜಿಲ್ಲೆಯಲ್ಲೇ ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆಯುವ ದೊಡ್ಡ ತಂಡ ಸಿದ್ಧವಿದೆ ಅವರೆಲ್ಲರೂ ಇಂದಿಗೂ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಗುಬ್ಬಿ ಕಾಂಗ್ರೆಸ್ ಪಕ್ಷದ ಶಾಸಕ ಎಸ್.ಆರ್.ಶ್ರೀನಿವಾಸ್ ಯಾರ ಹೆಸರು ತಿಳಿಸದೇ ಅಚ್ಚರಿಯ ಹೇಳಿಕೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಚಿಕ್ಕೋನಹಳ್ಳಿಪಾಳ್ಯ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ 99 ಲಕ್ಷ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಈಗಾಗಲೇ ಆ ಎರಡೂ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿದೆ.ಈ ಸಂದರ್ಭದಲ್ಲಿ ಜಿಲ್ಲೆಯ ಹಲವು ಕ್ಷೇತ್ರದ ಮುಖಂಡರು ಕಾರ್ಯಕರ್ತರು ನನ್ನ ಸಂಪರ್ಕದಲ್ಲಿದ್ದು ಮಾಹಿತಿ ಪ್ರಕಾರ ಜೆಡಿಎಸ್ ಪಕ್ಷ ತೊರೆಯುವ ಮುಖಂಡರ ದೊಡ್ಡ ಪಟ್ಟಿ ಸಿದ್ಧವಿರುವ ಬಗ್ಗೆ ತಿಳಿದಿದೆ.ಅವರು ನನ್ನ ಟೆಚ್ ನಲ್ಲಿದ್ದಾರೆ ಎಂದು ಯಾರ ಹೆಸರು ಹೇಳದೇ ಅಚ್ಚರಿಯ ಹೇಳಿಕೆ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯನ್ನು ಕ್ಷೇತ್ರದ ಪ್ರತಿ ತಾಲ್ಲೂಕಿನಲ್ಲಿರುವ ಎಲ್ಲಾ ಗ್ರಾಮಗಳಿಗೂ ಒಳಪಡಿಸಲಾಗುತ್ತದೆ. ಶೀಘ್ರದಲ್ಲಿ ಘಂಟೆಪಾಳ್ಯ, ಕಡೆಪಾಳ್ಯ ಗ್ರಾಮದಲ್ಲೂ ಮನೆ ಮನೆಗೆ ನೀರು ಹರಿಯಲಿದೆ ಎಂದ ಅವರು ಗೊಲ್ಲ ಸಮುದಾಯದಲ್ಲಿ ಆಚರಣೆಗಳು ಸಂಪ್ರದಾಯಗಳು ಅತಿಯಾಗಿ ನಡೆಯುತ್ತವೆ.ಈ ಜೊತೆಗೆ ಹಲವು ಮೂಢನಂಬಿಕೆ,ಕಂದಾಚಾರ ಮಹಿಳೆಯರನ್ನು ಶೋಷಿಸುತ್ತಿವೆ.ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸುವ ಕಾರ್ಯ ನಡೆಸಿದೆ. ಸಾಕಷ್ಟು ಗೊಲ್ಲರಹಟ್ಟಿ ಸುಧಾರಣೆಯಾಗಿದೆ.ಬೆರಳೆಣಿಕೆ ಹಟ್ಟಿಗಳು ಸ್ವಲ್ಪ ಸುಧಾರಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ರಸ್ತೆ ಕಾಮಗಾರಿಗೆ ಹಣ ಮಂಜೂರು ಮಾಡಿರುವ ಬಗ್ಗೆ ತಿಳಿಸಿ ಸ್ಥಳೀಯ ನೂತನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯಕ್ಕೆ ಅನುದಾನ ನೀಡುವ ಬಗ್ಗೆ ಸಹ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೇರೂರು ಗ್ರಾಪಂ ಅಧ್ಯಕ್ಷೆ ರಾಧಾಮಣಿ ಶ್ರೀನಿವಾಸ್,ಉಪಾಧ್ಯಕ್ಷೆ ಶೋಭಾ ರಾಮು,ಮಾಜಿ ಅಧ್ಯಕ್ಷ ಶಿವಪ್ಪ,ಸದಸ್ಯರಾದ ಉಮಾದೇವಿ, ಸೋಮಶೇಖರ್,ರಾಧಾ,ಜಯಣ್ಣ, ರಮೇಶ್,ಮುಖಂಡರಾದ ಟೈಲರ್ ರಾಜಣ್ಣ,ಉಂಡೆರಾಮಣ್ಣ,ಬಸವರಾಜು,ಮೂರ್ತಿ,ಪ್ರಕಾಶ್,ನಾಗರಾಜು, ಎಇಇ ನಟರಾಜ್,ಗುತ್ತಿಗೆದಾರ ಸಂದೀಪ್ ಇತರರು ಸ್ಥಳದಲ್ಲಿದ್ದರು.