ಹಾಸನ : ಜನಮಾನಸದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಾರಾಸಾದ್ಯರ “ತಂಪ್ರೀತಿ” ಮಹತ್ವದ ಪಾತ್ರ ವಹಿಸುತ್ತದೆ, ಇಲ್ಲಿನ ಹಲವು ಕವಿತೆಗಳು ನಿತ್ಯ ಜೀವನದ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ಯಶಸ್ವೀಯಾಗಿವೆ ಎಂದು ಕವಯಿತ್ರಿ ವಸುಮತಿ ಜೈನ್ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕವು ಹಾಸನ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಸಹಕಾರದಲ್ಲಿ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ೨೮ ನೆಯ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಕವಿ ಪಾರಸಾದ್ಯರವರ “ತಂಪ್ರೀತಿ” ಕವನ ಸಂಕಲನ ಕುರಿತು ಮಾತನಾಡಿ ಹೆಸರು ಹೇಳುವಂತೆ ಓದುಗರ ಮನಕ್ಕೆ ತಂಪಾದ ಪ್ರೀತಿ ಕೊಡುವುದರಲ್ಲಿ ಸಂಶಯವಿಲ್ಲ .ಪುಸ್ತಕದಲ್ಲಿನ ಅದಷ್ಟು ಕವಿತೆಗಳು ಸರಳವಾದ ಪದ ಜೋಡಣೆ, ಸುಂದರ ನಿರೂಪಣೆ, ನೈಜತೆಯ ವಿಚಾರಗಳನ್ನೇ ಹೊತ್ತು ನಿಂತಿದೆ. ಓದುಗ ವರ್ಗದವರಿಗೆ ಬಹಳ ದಿನವರೆಗೂ ಈ ಪುಸ್ತಕದಲ್ಲಿನ ಕವಿತೆಗಳು ನೆಪಮಾತ್ರವಾಗಿ ಬಂದು ಕಾಡುತ್ತವೆ ಅಂದರೆ ಅದು ಸಂಪ್ರೀತಿಯಿಂದ ತಂಪ್ರೀತಿಯನ್ನು ಓದುವ ಶೈಲಿ. ಇವರು ತಮ್ಮ ಕವನಗಳಲ್ಲಿ ಸಾಮಾಜಿಕ ಮೌಲ್ಯಗಳೆಷ್ಟಿದೆ ಏನಿದೆ ಎಂಬುದನ್ನು ಕಟ್ಟಿಕೊಡುವುದರ ಜೊತೆ ಜೊತೆಗೆ ಜನರ ಮನದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಶಸ್ಸನ್ನು ಕಂಡಿರುವುದು ಸತ್ಯವೇ ಸರಿ. ಸಮಾಜದಲ್ಲಿನ ಮೌಢ್ಯಗಳನ್ನು ಮುಗ್ಧರಾಗಿ ಒಪ್ಪಿಕೊಳ್ಳುವ ಜನರ ಕುರಿತು, ಮೂಢನಂಬಿಕೆಯ ಆಚರಣೆಗಳ ಬಗ್ಗೆ ಬಹಳ ಕಳಕಳಿಯಿಂದ ಬರೆದಿರುತ್ತಾರೆ. ಸುಮಾರು ೫೧ ಕವನಗಳ ಗುಚ್ಚವನ್ನೇ ಹೊತ್ತು ತಂದಿರುವ ಈ “ತಂಪ್ರೀತಿ” ಕೃತಿಯು ಗಾತ್ರದಲ್ಲಿ ಚಿಕ್ಕ ಚೊಕ್ಕದಾಗಿದ್ದರು ಇದರೊಳಗಿನ ಪ್ರತಿಯೊಂದು ಕವನಗಳು ಜೀವಿಸುವ ಪಾತ್ರ ದೊಡ್ಡದು ಎಂದರೆ ತಪ್ಪಾಗಲಾರದು. ಈ ನಾಡು ಕಂಡಂತಹ ಕವಿ ಶ್ರೇಷ್ಠರಾದ ಜಿ .ಎಸ್. ಶಿವರುದ್ರಪ್ಪನವರ ಅಗಲಿಕೆ ಕೃತಿಕಾರರ ವೃತ್ತಿ ಬದುಕಿನ ಕಾಲಘಟ್ಟದಲ್ಲಿ ಇನ್ನಿಲ್ಲದಂತೆ ಕಾಡಲು ಶುರು ಮಾಡಿದಾಗ ಜೊತೆಗೆ ಬದುಕು ಕಟ್ಟಿಕೊಳ್ಳಲು ಹೊರದೇಶದಲ್ಲಿ ತಾವೊಬ್ಬರೇ ಇರಬೇಕಾದ ಸಂದರ್ಭದಲ್ಲಿ ಮಾತೃ ಭಾಷೆ ಕನ್ನಡವನ್ನು ಬಹಳವಾಗಿ ನೆನೆಯ ತೊಡಗುತ್ತಾರೆ ಇಂತಹ ಮೌಲ್ಯಯುತ ಸು ಸಂದರ್ಭದ ಕ್ಷಣಗಳೇ ಇವರನ್ನು ಕವಿತೆ ಬರೆಯುವಲ್ಲಿ ಸಫಲರಾಗಿಸುತ್ತದೆ. ಆ ನಿಟ್ಟಿನಲ್ಲಿ ಬರೆದಂತಹ ಕವಿತೆಗಳ ಅನಾವರಣವೇ ಈ “ತಂಪ್ರೀತಿ” ಇವರಿಗಿದ್ದ ಕನ್ನಡ ಭಾಷೆಯ ಮೇಲಿನ ಪ್ರೀತಿ, ಭಕ್ತಿಯೇ ಸಾಹಿತ್ಯದೆಡೆಗೆ ಚಿತ್ತ ಹರಿಸುವಂತೆ ಮಾಡಿದೆ. ಕವಿ ತಮ್ಮ ಅನುಭಾವದ ಪರಾಕಾಷ್ಟೆಯನ್ನು ಬರವಣಿಗೆಗೆ ಬುನಾದಿ ಮಾಡಿಕೊಂಡು ,ತಮ್ಮ ಕವನಗಳಲ್ಲಿನ ಭಾವದಲೆಗಳನ್ನು ಅಕ್ಷರ ರೂಪಕ್ಕೆ ಪರಿವರ್ತಿಸುವುದರ ಮುಖೇನ, ವಾಸ್ತವ ಸಂಗತಿಯನ್ನು ಅವರ ಕಾವ್ಯ ಮೂಸೆಯಲ್ಲಿ ಮೂಡಿಸುವ ನಿಟ್ಟಿನಲ್ಲಿ ಯಶಸ್ಸನ್ನು ಕಂಡಿರುವುದು ಸತ್ಯವೇ ಸರಿ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಕೆ.ಸಿ.ಗೀತಾ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ಹುಟ್ಟಿರುವುದೇ ಎಲೆಮರೆಯಂತಹ ಸಾಧಕರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ, ಅಂತೆಯೇ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಸಾರಥ್ಯದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುತ್ತಾಬಂದಿದೆ. ಗುಣಾತ್ಮಕ ಹಾಗೂ ಹೊಸತನದ ಕಾರ್ಯಕ್ರಮಗಳನ್ನು ರೂಪುರೇಷೆ ಮಾಡುತ್ತಾ ಹೊಸತಲೆಮಾರಿನ ಕವಿಗಳಿಗೆ ತರಬೇತಿಯುಕ್ತ ಮಾಹಿತಿ ನೀಡುವುದರ ಮುಖೇನ ರಸಪ್ರಶ್ನೆ, ಪ್ರಬಂಧ ರಚನೆ, ಕಾವ್ಯ ವಾಚನ, ಕಾವ್ಯಕಮ್ಮಟ ಮುಂತಾದ ಹತ್ತು ಹಲವು ಮೌಲ್ಯಭರಿತ ಕಾರ್ಯಕ್ರಮಗಳನ್ನು ನೀಡಿದೆ ಎಂದರು.
ಹಿರಿಯ ಸಾಹಿತಿ ಬಿ.ಎಂ. ಭಾರತಿ ಹಾದಿಗೆ ಕಾರ್ಯಕ್ರಮದ ಕವಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕವಿತೆಗಳು ಜನ ಸಾಮಾನ್ಯರ ಬದುಕಿನ ದೈನಂದಿನ ತಲ್ಲಣಗಳಿಗೆ ಧ್ವನಿಯಾಗುವುದರ ಜೊತೆಗೆ ಹೃದ್ಯಭಾಷೆ ಹೊಂದಿರಬೇಕು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಡೆಗಣಿತ ಬರಹಗಾರರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇಂದಿನ ಕವಿಗೋಷ್ಠಿಯಲ್ಲಿ ವಾಚಿಸಿದ ಕವಿತೆಗಳು ಹಲವು ಗಮನ ಸೆಳೆದರೆ ಇನ್ನೂ ಕೆಲವು ಅಧ್ಯಯನದ ನಿಮಿತ್ತ ಪಳಗಬೇಕಿತ್ತು. ರೇಖಾ ಪ್ರಕಾಶ್‌ರವರ ಸಾವೆಂಬ ಸಖ ಕವಿತೆ ಬಹಳ ಗಮನ ಸೆಳೆಯಿತು. ನಿರಂತರ ಕಾವ್ಯದ ಅಧ್ಯಯನ ಮಾಡಿದಾಗ ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿಕೊಂಡು ಸಾಗಬೇಕಿದೆ ಎಂದರು.
ವೇದಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ಉಪಾಧ್ಯಕ್ಷರಾದ ನಾಗರಾಜ್ ದೊಡ್ಡಮನಿ, ಕೃತಿಕರ್ತೃ ಪಾರಾಸಾದ್ಯ(ಪಾರ್ಥರಾಜು) ಇನ್ನೂ ಮುಂತಾದವರು ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯಲ್ಲಿ ಬಿ.ಎಂ. ಭಾರತಿ ಹಾದಿಗೆ, ಕೊಟ್ರೇಶ್ ಎಸ್.ಉಪ್ಪಾರ್, ನಾಗರಾಜ್ ದೊಡ್ಡಮನಿ, ಎಚ್.ಎಸ್.ಬಸವರಾಜ್, ವಾಸು ಸಮುದ್ರವಳ್ಳಿ, ಜಯಂತಿ ಚಂದ್ರಶೇಖರ್, ರೇಖಾಪ್ರಕಾಶ್, ನೀಲಾವತಿ ಸಿ.ಎನ್, ಗಿರಿಜಾ ನಿರ್ವಾಣಿ, ಪಾರ್ಥರಾಜು, ವಸುಮತಿ ಜೈನ್, ಸುರೇಶ್ ಸೇರಿದಂತೆ ಹಲವರು ಕಾವ್ಯ ವಾಚನ ಮಾಡಿದರು.