ಮಧುಗಿರಿ : ಏಕಶಿಲಾ ನಗರಿಯ ಇತಿಹಾಸದಲ್ಲಿಯೇ ಅದ್ದೂರಿ ಕಾರ್ಯಕ್ರಮವನ್ನು ಮಧುಗಿರಿಯಲ್ಲಿ ಹಮ್ಮಿಕೊಂಡಿದ್ದು ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿರುವ ಕಾರ್ಯಕ್ರಮಕ್ಕೆ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇಂದು ಚಾಲನೆ ನೀಡಲಿದ್ದಾರೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ , ಬೆಂಗಳೂರು ಹಾಗೂ
ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ಸಹಯೋಗದೊಂದಿಗೆ
ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆಯ ಸಮಾರಂಭವು
ಸೆ.06 ಬುಧವಾರ ಬೆಳಗ್ಗೆ 11:30 ಕ್ಕೆ ರಾಜೀವ್‌ಗಾಂಧಿ ಕ್ರೀಡಾಂಗಣ, ಮಧುಗಿರಿಯಲ್ಲಿ ಜರುಗಲಿದ್ದು
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇರವೇರಿಸಲಿದ್ದಾರೆ. ಉಪ ಮುಖ್ಯಮಂತ್ರಿಗಳು ಹಾಗೂ ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ರವರು ವಿವಿಧ ಮಳಿಗೆಗಳ ಉದ್ಘಾಟನೆ ಮಾಡಲಿದ್ದಾರೆ.
ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮಕ್ಕೆ ಸಿದ್ದಗೊಂಡಿರುವ ಬೃಹತ್ ವೇದಿಕೆ
ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಿಶ್ರತಳಿ ಹೈನು ರಾಸುಗಳ ಚೆಕ್ ವಿತರಣೆಯನ್ನು ಗೃಹ ಸಚಿವರು, ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ರವರು ವಿತರಿಸಲಿದ್ದು
ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ರಾಜ್ಯ ಖಾತೆ ಸಚಿವರು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸಂಸದರಾದ ಎ. ನಾರಾಯಣಸ್ವಾಮಿ , ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ್ , ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಮಧು ಬಂಗಾರಪ್ಪ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ , ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಹಾಗೂ ಶಾಸಕರು , ಶಿರಾ ವಿಧಾನಸಭಾ ಕ್ಷೇತ್ರ ಟಿ.ಬಿ. ಜಯಚಂದ್ರ ರವರುಗಳು ಭಾಗವಹಿಸಲಿದ್ದು ಸ್ಮರಣ ಸಂಚಿಕೆಯನ್ನು
ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷ ಎಲ್.ಇ.ಪಿ ಭೀಮನಾಯ್ಕ ರವರು ಬಿಡುಗಡೆ ಮಾಡಲಿದ್ದಾರೆ.
ಅದ್ದೂರಿ ಕಾರ್ಯಕ್ರಮ : ಜಿಲ್ಲೆಯ ತುಮಕೂರಿನಲ್ಲಿ ನಡೆಯಬೇಕಿದ್ದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮವನ್ನು ಮಧುಗಿರಿ ಕ್ಷೇತ್ರದಲ್ಲಿ ಆಯೋಜನೆ ಮಾಡುವ ಮೂಲಕ ಕ್ಷೇತ್ರದಲ್ಲಿ ಹಿಂದೆಂದೂ ನಡೆಯದ ಅದ್ದೂರಿ ಕಾರ್ಯಕ್ರಮಕ್ಕೆ ಸಹಕಾರ ಸಚಿವ ಕೆ.ಎನ್. ರಾಜಣ್ಣನವರು ಕಾರಣ ಕರ್ತರಾಗಿದ್ದು ಹಾಲಿನ ದರವನ್ನು 3 ರೂಗಳನ್ನು ಹೆಚ್ಚಿಸಲು ಮುಖ್ಯಮಂತ್ರಿಗಳ ಮನವೊಲಿಸಿ ಅದನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಿದ ಹಿನ್ನೆಲೆಯಲ್ಲಿ ಅವರ ಸ್ವಕ್ಷೇತ್ರದಲ್ಲೇ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತುಮುಲ್ ಅದ್ಯಕ್ಷ ಭೀಮಾ ನಾಯಕ್ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದಾರೆ.
ಹೇಗಿದೆ ಸಿದ್ದತೆ : ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮದ ಕಾರ್ಯಕ್ರಮಕ್ಕಾಗಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಳೆ ಬಂದರೂ ತೊಂದರೆ ಉಂಟಾಗದಂತೆ ಸುಮಾರು 100 x 300 ಅಡಿ ಉದ್ದಗಲದ ಬೃಹತ್ ವೇದಿಕೆ ಸಿದ್ದಗೊಂಡಿದ್ದು , ಪ್ರಮುಖ ದ್ವಾರಗಳಲ್ಲಿ ಕಾಮಾನುಗಳನ್ನು ನಿರ್ಮಿಸಲಾಗಿದೆ.
ತಳಿರು ತೋರಣಗಳಿಂದ ಹಾಗೂ ಕಾಂಗ್ರೆಸ್ ಪಕ್ಷದ ಬ್ಯಾನರ್ ಗಳು , ಬಂಟಿಂಗ್ಸ್ ಗಳನ್ನು ಹಾಕಲಾಗಿದ್ದು ಪಟ್ಟಣದ ಬೀದಿಗಳು ಸಿಂಗಾರಗೊಂಡಿವೆ. ಎಲ್ಲಾ ಕಚೇರಿಗಳಿಗೂ ಸುಣ್ಣ ಬಣ್ಣದ ಲೇಪನ ವಾಗಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ. ಜಿಲ್ಲೆಯ ಶಾಸಕರು ಸೇರಿದಂತೆ 50 ಕ್ಕೂ ಹೆಚ್ಚು ಗಣ್ಯರು ವೇದಿಕೆ ಅಲಂಕರಿಸಲಿದ್ದಾರೆ.
ಕಾರ್ಯ ಕ್ರಮದಲ್ಲಿ ಸಾರ್ವಜನಿಕರಿಗಾಗಿ 60 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ ಬಂದೂಬಸ್ತ್ ಗಾಗಿ ಕೆ ಎಸ್ ಆರ್ ಪಿ ಪಡೆ , ಡಿ ಎ ಆರ್ ಸಿಬ್ಬಂದಿಗಳು ಸೇರಿದಂತೆ ಒಟ್ಟು ಸುಮಾರು 1300 ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಊಟದ ವ್ಯವಸ್ಥೆಗಾಗಿ ಮೂರು ಕಡೆ 45 ಕೌಂಟರ್ ಗಳನ್ನು ತೆರೆಯಲಾಗಿದ್ದು , ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಮೆಂತೇ ಬಾತ್, ಪುಳಿಯೋಗರೆ, ಮೈಸೂರ್ ಪಾಕ್ , 2 ಲಕ್ಷ ಮಜ್ಜಿಗೆ ಪಾಕೆಟ್ ಮತ್ತು 2 ಲಕ್ಷಕ್ಕೂ ಹೆಚ್ಚು ನೀರಿನ ಪಾಕೆಟ್ ಗಳ ವ್ಯವಸ್ಥೆ ಮಾಡಲಾಗಿದೆ.
156 ಕೋಟಿ ರೂಗಳ ಕಾಮಗಾರಿಗೆ ಚಾಲನೆ : ಮೊದಲಿಗೆ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಲಾರ್ಪಣೆ ಮಾಡಲಿದ್ದು , ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಕನ್ನಡ ಭವನ ಉದ್ಘಾಟನೆಯನ್ನು ನೆರವೇರಿಸಿ ನಂತರ ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಕ್ಕೆ ಆಗಮಿಸಲಿದ್ದಾರೆ. ವೇದಿಕೆಯಲ್ಲಿ 1.49 ಕೋಟಿ ವೆಚ್ಚದ ಕ್ಷೇತ್ರದ ಕೃಷಿ ಇಲಾಖೆಯ ತುಂತುರು ನೀರಾವರಿ ಘಟಕಗಳ ವಿತರಣೆ, 26 ಲಕ್ಷ ವೆಚ್ಚದ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ, 7.74 ಕೋಟಿ ವೆಚ್ಚದ ಅಲ್ಪ ಸಂಖ್ಯಾತರ ವಿವಿಧ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳ ಶಂಕುಸ್ಥಾಪನೆ, 6.5 ಕೋಟಿ ವೆಚ್ಚದ ವಿದ್ಯಾರ್ಥಿ ನಿಲಯ ಕಟ್ಟಡದ ಶಂಕುಸ್ಥಾಪನೆ ಮತ್ತು ಅಂತರ್ಜಾತಿ ವಿವಾಹವಾದ 7 ಜೋಡಿಗಳಿಗೆ 10 ಲಕ್ಷ ವಿತರಣೆ, 48 ಲಕ್ಷ ವೆಚ್ಚದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಟ್ಟಡಗಳ ಉದ್ಘಾಟನೆ, 58.63 ಕೋಟಿ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆಗೆ ಭೂಮಿ ಪೂಜೆ, 48 ಲಕ್ಷ ವೆಚ್ಚದಲ್ಲಿ ರೇಷ್ಮೆ ಇಲಾಖೆಯ ರೇಷ್ಮೆ ಹುಳು ಸಾಕಾಣಿಕೆ ಮತ್ತು ಹನಿ ನೀರಾವರಿ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ವಿತರಣೆ, 12 ಲಕ್ಷ ವೆಚ್ಚದಲ್ಲಿ 14 ಜನ ಕಾರ್ಮಿಕರಿಗೆ ಸಹಾಯ ಧನ ವಿತರಣೆ, ಕಂದಾಯ ಇಲಾಖೆ ವತಿಯಿಂದ 10 ಜನ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮತ್ತು 10 ಜನ ಫಲಾನುಭವಿಗಳಿಗೆ ಮಾಶಾಸನ ವಿತರಣೆ, ತಾಯಿ ಮಗು ಆಸ್ಪತ್ರೆಗೆ ಶಂಕುಸ್ಥಾಪನೆ ಸೇರಿದಂತೆ ಒಟ್ಟು 156 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
6 ವರ್ಷಗಳ ನಂತರ ಸಿಎಂ ಕ್ಷೇತ್ರಕ್ಕೆ : 6 ವರ್ಷಗಳ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಕೆ.ಎನ್. ರಾಜಣ್ಣನವರು ಗಡಿ ಭಾಗದ ಕೊಡಿಗೇನಹಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಕ್ಷೇತ್ರಕ್ಕೆ ಕರೆತಂದು ವಿವಿಧ ಸವಲತ್ತು ವಿತರಣೆಗಳ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದರು. ತದ ನಂತರ ಕಳೆದ 6 ವರ್ಷಗಳಲ್ಲಿ ಕ್ಷೇತ್ರಕ್ಕೆ ಯಾವುದೇ ಸಿಎಂ ಭೇಟಿ ನೀಡಿರಲಿಲ್ಲ. ಈಗ ಕೆ.ಎನ್. ರಾಜಣ್ಣನವರು ಸಹಕಾರ ಸಚಿವರಾಗಿದ್ದು, ಸರ್ಕಾರ ಜಾರಿಗೆ ಬಂದಾ ಮೂರೇ ತಿಂಗಳಿಗೆ ಕ್ಷೇತ್ರದಲ್ಲಿ ಕ್ಷೀರಭಾಗ್ಯ ದಶಮಾನೋತ್ಸವ ಸಂಭ್ರಮದ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕ್ಷೇತ್ರಕ್ಕೆ ಕರೆತರುತ್ತಿದ್ದಾರೆ.